ಮಡಿಕೇರಿ ದಸರಾ ಜನೋತ್ಸವ ಸಂದರ್ಭ ಪ್ರಮುಖ ಆಕರ್ಷಣೆಯಾದ ದಶಮಂಟಪಗಳಿಗೆ ಬಹುಮಾನ ವಿತರಿಸುವ ಸಂದರ್ಭ ಉಂಟಾದ ಕಹಿ ಘಟನೆಗಳಿಗೆ ವಿಷಾದ ವ್ಯಕ್ತಪಡಿಸುವುದಲ್ಲದೆ ಸರ್ವರಲ್ಲಿ ಕ್ಷಮೆಯಾಚಿಸುವುದಾಗಿ ಮಡಿಕೇರಿ ದಸರಾ ದಶ ಮಂಟಪ ಸಮಿತಿ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳಿಗೆ ಬಹುಮಾನ ವಿತರಿಸುವ ಸಂದರ್ಭ ಉಂಟಾದ ಕಹಿ ಘಟನೆಗೆ ವಿಷಾದ ವ್ಯಕ್ತಪಡಿಸುವುದಲ್ಲದೆ ಸರ್ವರಲ್ಲಿ ಕ್ಷಮೆಯಾಚಿಸುವುದಾಗಿ ಮಡಿಕೇರಿ ದಸರಾ ದಶಮಂಟಪ ಸಮಿತಿ ತಿಳಿಸಿದೆ.ಪತ್ರಿಕಾ ಪ್ರಕಟಣೆ ನೀಡಿರುವ ದಶಮಂಟಪ ಸಮಿತಿಯ ಅಧ್ಯಕ್ಷ ಬಿ.ಎಂ.ಹರೀಶ್ ಅಣ್ವೇಕರ್ ಅವರು ಸಾರ್ವಜನಿಕರು, ಜನಪ್ರತಿನಿಧಿಗಳು, ದೇವಾಲಯ ಸಮಿತಿಗಳು ಹಾಗೂ ಸರ್ವ ಅಧಿಕಾರಿ ವರ್ಗದ ಸಹಕಾರದಿಂದ ಈ ಬಾರಿಯ ಮಡಿಕೇರಿ ದಸರಾ ಜನೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಆದರೆ ಕೊನೆಯ ದಿನ ವಿಜಯದಶಮಿಯಂದು ಬಹುಮಾನ ಘೋಷಿಸುವ ಸಂದರ್ಭ ಉಂಟಾದ ಘಟನೆ ಕುರಿತು ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಬೇಸರವಿದ್ದು, ದಶಮಂಟಪ ಸಮಿತಿಯ ಪರವಾಗಿ ಸರ್ವರಲ್ಲಿ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ.ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕ್ಷಮೆಯಾಚಿಸುತ್ತೇವೆ. ಪೊಲೀಸ್ ಇಲಾಖೆ ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದ್ದು, ಎಲ್ಲರ ಸುರಕ್ಷತೆಗೆ ಆದ್ಯತೆ ನೀಡಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ದಶಮಂಟಪ ಸಮಿತಿಯಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೊಂದರೆಯಾಗಿದ್ದಲ್ಲಿ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಮುಂದಿನ ವರ್ಷಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು. ನಾಡಹಬ್ಬ ದಸರಾವನ್ನು ಯಾವುದೇ ಗೊಂದಲವಿಲ್ಲದೆ ಅತ್ಯಂತ ಶಾಂತಿಯುತವಾಗಿ ನಡೆಸಲು ಸರ್ವರು ಒಗ್ಗಟ್ಟಾಗಿ ಸೇರಿ ಸಮಗ್ರ ಚಿಂತನೆ ನಡೆಸಲಾಗುವುದು. ಬಹುಮಾನದ ಆಯ್ಕೆ ವಿಚಾರವಾಗಿ ನೂತನ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು. ಈ ಕ್ರಮಕ್ಕೆ ದಶಮಂಟಪ ಸಮಿತಿಗಳ ಒಪ್ಪಿಗೆಯನ್ನು ಪಡೆಯಲಾಗುವುದು ಎಂದು ಅಧ್ಯಕ್ಷ ಬಿ.ಎಂ.ಹರೀಶ್ ಅಣ್ವೇಕರ್ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.