ಗಾಳಿಬೀಡು ಗ್ರಾ.ಪಂ.ನಲ್ಲಿ ಕಾರ್ಯಕ್ರಮ । ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿ ನಿರ್ಮಾಣ
ಕನ್ನಡಪ್ರಭ ವಾರ್ತೆ ಮಡಿಕೇರಿಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 178 ಮನೆಗಳ ನಿರ್ಮಾಣಕ್ಕೆ ಶಾಸಕ ಡಾ.ಮಂತರ್ ಗೌಡ ಶುಕ್ರವಾರ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಿದರು.ಗಾಳಿಬೀಡು ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮನೆ ನಿರ್ಮಾಣ ಕಾರ್ಯಾದೇಶ ಪತ್ರ ವಿತರಿಸಿ ಮಾತನಾಡಿದ ಶಾಸಕರು, ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಿಸಲಾಗುತ್ತಿದ್ದು, ಮಳೆಗಾಲ ನಂತರ ಮನೆ ನಿರ್ಮಾಣಕ್ಕೆ ಮುಂದಾಗಬಹುದಾಗಿದೆ ಎಂದು ಸಲಹೆ ನೀಡಿದರು.ಸರ್ಕಾರದ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ನಿವೇಶನ ಇರುವವರಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು, ಈ ಸೌಲಭ್ಯವನ್ನು ಅರ್ಹರು ಪಡೆದುಕೊಳ್ಳುವಂತಾಗಬೇಕು ಎಂದು ಶಾಸಕರು ಕೋರಿದರು.ಸರ್ಕಾರದ ವಿವಿಧ ಯೋಜನೆಗಳ ಜೊತೆಗೆ ಗ್ಯಾರಂಟಿ ಕಾರ್ಯಕ್ರಮಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಯುವನಿಧಿ ಜಾರಿಗೊಳಿಸಿದ್ದು, ಇವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವತ್ತ ಮುಂದಾಗಬೇಕು ಎಂದು ಡಾ.ಮಂತರ್ ಗೌಡ ತಿಳಿಸಿದರು.ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಎಲ್ಲ ಜಾಗವನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರುತ್ತದೆ ಎಂದು ಇಲ್ಲಿನ ಸ್ಥಳೀಯರಿಗೆ ತೊಂದರೆ ನೀಡುತ್ತೀರುವ ಬಗ್ಗೆ ಮಾಹಿತಿ ಇದೆ. ಈ ರೀತಿ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಕಿರಿಕಿರಿ ಕೊಡಬಾರದು. ಸ್ಥಳೀಯರು ಬದುಕಬೇಕು, ಅರಣ್ಯವೂ ಸಹ ಉಳಿಯಬೇಕು ಎಂದು ಹೇಳಿದರು.
ಮಾಂದಲ್‌ಪಟ್ಟಿ ರಸ್ತೆಯನ್ನು ಸರಿಪಡಿಸುವಂತೆ ಲೋಕೋಪಯೋಗಿ ಎಂಜಿನಿಯರ್‌ಗೆ ಶಾಸಕರು ಸೂಚಿಸಿದರು. ಕಾಲೂರು ಬಳಿ ನಿರ್ಮಾಣವಾಗುತ್ತಿರುವ ಸೇತುವೆಯನ್ನು ಕೂಡಲೇ ಪೂರ್ಣಗೊಳಿಸುವಂತೆ ಪಂಚಾಯತ್ ರಾಜ್ ಎಂಜಿನಿಯರ್‌ಗೆ ಡಾ.ಮಂತರ್ ಗೌಡ ಸೂಚಿಸಿದರು.ಅರಣ್ಯ ಮತ್ತು ಕಂದಾಯಕ್ಕೆ ಸಂಬಂಧಿಸಿದಂತೆ ಆಗಬೇಕಿರುವ ಕೆಲಸಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಸ್ಪಂದಿಸುವಂತಾಗಬೇಕು. ಜೊತೆಗೆ ಕಂದಾಯ ಇಲಾಖೆಯವರ ಸಹಕಾರ ಹೆಚ್ಚಿನದ್ದಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಮನ್ವಯತೆಯಿಂದ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.ತಾ.ಪಂ. ಇಒ ಶೇಖರ್, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕಿನ 8 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗಿರುವ ಮನೆ ನಿರ್ಮಾಣ ಕಾರ್ಯಾದೇಶ ಪತ್ರ ವಿತರಿಸುತ್ತಿರುವುದು ವಿಶೇಷವಾಗಿದೆ. ಶಾಸಕರ ವಿಶೇಷ ಕಾಳಜಿಯಿಂದ ಮನೆ ನಿರ್ಮಾಣ ಕಾರ್ಯಾದೇಶ ಪತ್ರ ವಿತರಿಸಲಾಗುತ್ತಿದೆ ಎಂದರು.ಗಾಳಿಬೀಡು ಸೇರಿದಂತೆ ಇಲ್ಲಿನ ವಿವಿಧ ಪ್ರದೇಶಗಳಲ್ಲಿ ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.ಗಾಳಿಬೀಡು ಗ್ರಾ.ಪಂ.ಅಧ್ಯಕ್ಷರಾದ ಪುಷ್ಪಾವತಿ, ಉಪಾಧ್ಯಕ್ಷ ರಾಜಾಶೇಖರ ಮಾತನಾಡಿದರು.ಗ್ಯಾರಂಟಿ ಯೋಜನೆ ತಾಲೂಕು ಸಮಿತಿ ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ತಹಸೀಲ್ದಾರ್ ಪ್ರವೀಣ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಷಾ, ಲೋಕೋಪಯೋಗಿ ಎಇಇ ಗಿರೀಶ್, ಪಂಚಾಯತ್ ರಾಜ್ ಇಲಾಖೆಯ ಎಇ ರಘು ಇತರರು ಇದ್ದರು.