ಮಡಿಕೇರಿ: ನಗರಸಭೆಯ ಬಿಜೆಪಿ ಆಡಳಿತಾವಧಿ ಪೂರ್ಣಗೊಂಡಿದ್ದು, ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ಕಾಲಹರಣ ಮಾಡಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಆರೋಪಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿಯಿಂದ ನಗರಸಭೆ ವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಿಜೆಪಿ ಆಡಳಿತದ ವೈಫಲ್ಯವನ್ನು ಖಂಡಿಸಿದರು. ಮಡಿಕೇರಿ ನಗರದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ರೂಪಿಸದೆ ಮತ್ತು ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಐದು ವರ್ಷಗಳ ಅವಧಿಯನ್ನು ವ್ಯರ್ಥಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಹುಮತವಿದ್ದರೂ ನಿರೀಕ್ಷೆ ಹುಸಿ: ಮಡಿಕೇರಿ ಜನತೆ ಬಿಜೆಪಿಗೆ 16 ಸ್ಥಾನಗಳ ಬಹುಮತವನ್ನು ನೀಡಿದ್ದರೂ ಜನರ ನಿರೀಕ್ಷೆಗಳನ್ನು ಹುಸಿ ಮಾಡಲಾಗಿದೆ. ಅಧಿಕಾರದಲ್ಲಿದ್ದ ಬಿಜೆಪಿ ಮಂದಿಯ ನಡುವಿನ ಭಿನ್ನಾಭಿಪ್ರಾಯಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದೆ. ನಗರಸಭೆಯಲ್ಲಿ ಹಣವಿದ್ದರೂ ಕಾಮಗಾರಿಗಳು ಅನುಷ್ಠಾನಗೊಂಡಿಲ್ಲ. ಕಳೆದ ಐದು ವರ್ಷಗಳ ಕಾಲ ಬಿಜೆಪಿ ಆಡಳಿತದಿಂದ ನಗರಕ್ಕೆ ಶಾಪ ತಟ್ಟಿದಂತ್ತಾಗಿದ್ದು, ಶೂನ್ಯ ಸಾಧನೆಯಾಗಿದೆ. ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದೇ ಇಲ್ಲವೆಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ, ನಗರಸಭೆಯಲ್ಲಿ ಬಿಜೆಪಿ ಆಡಳಿತ ಮಂಡಳಿಯ ಅಧಿಕಾರ ಪೂರ್ಣಗೊಂಡಿರುವುದು ನಗರದ ಪಾಲಿಗೆ ಶುಭ ಘಳಿಗೆಯಾಗಿದೆ ಎಂದು ಹೇಳಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಅವರು ಮಾತನಾಡಿ, 16 ಮಂದಿ ಬಿಜೆಪಿ ಸದಸ್ಯರ ಆಡಳಿತ ಮಂಡಳಿ ಗುಂಪುಗಾರಿಕೆಗೆ ಸೀಮಿತವಾಗಿತ್ತು. ಯಾವುದೇ ಕಾಮಗಾರಿಗಳನ್ನು ನಡೆಸದೆ ನಗರದ ಜನರನ್ನು ವಂಚಿಸಲಾಗಿದೆ. ಹದಗೆಟ್ಟ ರಸ್ತೆಗಳು ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಜನರ ನೆಮ್ಮದಿಯನ್ನು ಹಾಳು ಮಾಡಿದೆ ಎಂದು ಟೀಕಿಸಿದರು.