ಮಡಿಕೇರಿ: ರಾಷ್ಟ್ರೀಯ ಡೆಂಘೀ ಮಾಸಾಚರಣೆ ಜನಜಾಗೃತಿ

KannadaprabhaNewsNetwork |  
Published : Jul 04, 2025, 11:46 PM ISTUpdated : Jul 04, 2025, 11:47 PM IST
ಚಿತ್ರ : 4ಎಂಡಿಕೆ44 : ಮಡಿಕೇರಿಯಲ್ಲಿ ರಾಷ್ಟ್ರೀಯ ಡೆಂಗ್ಯೂ ಮಾಸಾಚರಣೆ ಜನಜಾಗೃತಿ. | Kannada Prabha

ಸಾರಾಂಶ

ಮಡಿಕೇರಿ ನಗರದಲ್ಲಿ ತಾಲೂಕಿನ ಕ್ಷಿಪ್ರ ಕಾರ್ಯಪಡೆ ತಂಡದವರು ವಾರ್ಡ್‌ವಾರು ಮನೆ ಮನೆಗಳಿಗೆ ಭೇಟಿ ನೀಡಿ ನೀರಿನ ತಾಣಗಳಲ್ಲಿ ಲಾರ್ವಾ ಉತ್ಪತ್ತಿಯಾಗಿರುವುದನ್ನು ಪತ್ತೆ ಹಚ್ಚಿ ನಿರ್ಮೂಲನೆ ಮಾಡುವ ಮೂಲಕ ಡೆಂಘೀ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದಲ್ಲಿ ತಾಲೂಕಿನ ಕ್ಷಿಪ್ರ ಕಾರ್ಯಪಡೆ ತಂಡದವರು ವಾರ್ಡ್‌ವಾರು ಮನೆ ಮನೆಗಳಿಗೆ ಭೇಟಿ ನೀಡಿ ನೀರಿನ ತಾಣಗಳಲ್ಲಿ ಲಾರ್ವಾ ಉತ್ಪತ್ತಿಯಾಗಿರುವುದನ್ನು ಪತ್ತೆ ಹಚ್ಚಿ ನಿರ್ಮೂಲನೆ ಮಾಡುವ ಮೂಲಕ ಡೆಂಘೀ ನಿಯಂತ್ರಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್ ಪಾಲ್ಗೊಂಡು ಮಾತನಾಡಿ, ಡೆಂಘೀ ಮಾಸಾಚರಣೆ ನಿಮಿತ್ತ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ತಿಳಿಸುತ್ತಾ, ನೀರಿನ ತಾಣಗಳನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ಖಾಲಿ ಮಾಡಿ ಒರೆಸಿ, ಒಣಗಿಸಿ ನೀರು ಶೇಖರಿಸುವುದು ಮತ್ತು ಮುಚ್ಚಳದಿಂದ ಮುಚ್ಚಿಡುವುದು, ಎಲ್ಲರೂ ಸೊಳ್ಳೆಗಳಿಂದ ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದು, ಸೊಳ್ಳೆ ಪರದೆಗಳನ್ನು ಉಪಯೋಗಿಸುವಂತೆ, ತ್ಯಾಜ್ಯ ಪರಿಕರಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಗೂ ಪರಿಸರ ಶುಚಿತ್ವ ಕಾಪಾಡಿಕೊಳ್ಳಲು ಮತ್ತು ಯಾವುದೇ ರೀತಿಯ ಜ್ವರ ಬಂದ ತಕ್ಷಣ ವೈದ್ಯರಲ್ಲಿ ತೋರಿಸಿಕೊಳ್ಳುವಂತೆ ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಚೇತನ್, ಮೇಲ್ವಿಚಾರಣೆ ನಡೆಸಿ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ್ವರ ಮತ್ತು ಗುಣತ್ಮಾಕ ಲಾರ್ವಾ ಸರ್ವೇಕ್ಷಣೆ ನಡೆಸಿ ಜನರಲ್ಲಿ ಆರೋಗ್ಯ ಶಿಕ್ಷಣ ನೀಡುತ್ತಾ ತಂಡದವರು ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರು ಸಹಕಾರ ನೀಡುವಂತೆ ತಿಳಿಸಿದರು.ಮನೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ಎಳನೀರು ಚಿಪ್ಪು, ಒಡೆದ ಬಾಟಲಿ, ಟೈರು, ಟ್ಯೂಬೂ, ಒಳಕಲ್ಲು, ಪ್ಲಾಸ್ಟಿಕ್‌ಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವಂತೆ ತಿಳಿಸಿದರು.ಇದರಿಂದ ಲಾರ್ವಾಗಳು ಉತ್ಪತ್ತಿಯಾಗಿ ಸೊಳ್ಳೆಗಳ ಕಚ್ಚುವಿಕೆಯಿಂದ ಡೆಂಘೀ ಜ್ವರ ಬರುವುದನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದರು.ಜಲಾಶಯ ಬಡಾವಣೆಯಲ್ಲಿ ಲಾರ್ವಾ ಸರ್ವೇಕ್ಷಣೆ ನಡೆಸುವ ವೇಳೆ ನಗರಸಭೆ ಸದಸ್ಯೆ ಉಷಾ ಕಾವೇರಪ್ಪ, ಇಲಾಖೆ ಕಾರ್ಯವನ್ನು ಪ್ರಶಂಸಿಸಿ ಸಾರ್ವಜನಿಕರು ಸಹಕಾರ ನೀಡಿ ಡೆಂಘೀ ನಿಯಂತ್ರಣದಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ. ನಗರಸಭೆಯಿಂದ ಎಲ್ಲ ರೀತಿಯ ನೆರವು ನೀಡುವಂತೆ ತಿಳಿಸಿದರು.

ಈ ವೇಳೆ ಜಿಲ್ಲಾ ಎಂಟಾಮಾಲಿಜಿಸ್ಟ್ ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾ.ಆ.ಸುರಕ್ಷಾಧಿಕಾರಿ ಮತ್ತು ಆಶಾ ಕಾರ್ಯಕರ್ತರು ಇದ್ದರು.

PREV