೩೦೦ ಅಡಿ ಉದ್ದದ ತಿರಂಗಾ ಯಾತ್ರೆ । ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿ
ಕನ್ನಡಪ್ರಭ ವಾರ್ತೆ ಮಡಿಕೇರಿಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶುಕ್ರವಾರ ಸಿಂದೂರ ವಿಜಯೋತ್ಸವ ಸಮಿತಿ ವತಿಯಿಂದ ಬೃಹತ್ ತ್ರಿರಂಗಾ ಯಾತ್ರೆ ನಡೆಯಿತು. ಮಳೆಯ ನಡುವೆ ಸಾವಿರಾರು ಜನರ ದೇಶಭಕ್ತಿಯ ಉದ್ಘೋಷಗಳೊಂದಿಗೆ ಯಾತ್ರೆ ಜರುಗಿತು.
ಮಳೆಯನ್ನು ಲೆಕ್ಕಿಸದೆ ಜನರು ತಿರಂಗಾ ಯಾತ್ರೆಯಲ್ಲಿ ಹೆಜ್ಜೆ ಹಾಕಿ ದೇಶಾಭಿಮಾನ ಮೆರೆದರು. ರಾಷ್ಟ್ರಧ್ವಜದೊಂದಿಗೆ ಮಹಿಳೆಯರು, ಮಕ್ಕಳು, ಹಿರಿಯರು, ನಿವೃತ್ತ ಸೇನಾಯೋಧರು, ಹಿಂದೂ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದರು.ನಗರದ ಮಹದೇವಪೇಟೆಯ ಬನ್ನಿ ಮಂಟಪದದಿಂದ ಹಣೆಗೆ ತಿಲಕ ಇಡುವ ಮೂಲಕ ಮೆರವಣಿಗೆ ಚಾಲನೆ ನೀಡಲಾಯಿತು. ತ್ರಿರಂಗಾ ಯಾತ್ರೆಯಲ್ಲಿ ೩೦೦ ಅಡಿ ಉದ್ದದ ಬಾವುಟ ಹಿಡಿದು ಭಾರತ ಮಾತೆಗೆ ಹಾಗೂ ಭಾರತೀಯ ಸೈನ್ಯಕ್ಕೆ ಘೋಷಣೆ, ಜೈಕಾರ ಕೂಗುತ್ತಾ ಸಾಗಲಾಯಿತು.
ನಗರದ ಇಂದಿರಗಾಂಧಿ ವೃತ್ತ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ನಗರ ಪೊಲೀಸ್ ಠಾಣೆ, ಮಂಗೇರಿರ ಮುತ್ತಣ್ಣ ವೃತ್ತವಾಗಿ ಗಾಂಧಿ ಮೈದಾನದಲ್ಲಿ ಮೆರವಣಿಗೆ ಸಮಾಪ್ತಿಗೊಂಡಿತು.ಇದೇ ಸಂದರ್ಭ ಪೊನ್ನಂಪೇಟೆಯಿಂದ ನೂರಾರು ಸಂಖ್ಯೆಯಲ್ಲಿ ರಾಷ್ಟ್ರಭಕ್ತ ಯುವಕರು ಬೈಕ್ ಜಾಥಾದ ಮೂಲಕ ವಿರಾಜಪೇಟೆ ಮಾರ್ಗವಾಗಿ ಮಡಿಕೇರಿಗೆ ಆಗಮಿಸಿದರು.
ಭಾರತ ಮಾತೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಂದೂರ ವಿಜಯೋತ್ಸವದ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ನಂತರ ವಂದೇ ಮಾತರಂ ಗೀತೆಯನ್ನು ಹಾಡಿ, ಪಹಲ್ಗಾಮ್ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಮೃತರ ಆತ್ಮಕ್ಕೆ ಸಂತಾಪ ಕೋರಲಾಯಿತು.* ಪಾಕಿಸ್ತಾನ ಭಯೋತ್ಪಾದಕರ ಪೋಷಕ: ಸಂಸದ ಯದುವೀರ್
ನಗರದ ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಯೋತ್ಪಾದನೆ ಪೋಷಕರ ಸ್ಥಾನದಲ್ಲಿ ಪಾಕಿಸ್ತಾನವಿದೆ. ಇದಕ್ಕೆ ಭಾರತದಿಂದ ಯಾವುದೇ ಸಹಕಾರ ನೀಡುವುದಿಲ್ಲ. ನಾಯಿಬಾಲ ಎಂದೆಂದಿಗೂ ಡೊಂಕು ಎಂಬ ರೀತಿಯಲ್ಲಿ ಪಾಕಿಸ್ತಾನವಿದೆ. ಅದೇ ರೀತಿ ಅವರ ಕುತಂತ್ರ ಕಾರ್ಯ ಇಂದಿಗೂ ಮುನ್ನೆಡೆಸುತ್ತಿದ್ದಾರೆ. ಇದಕ್ಕೆ ಭಾರತ ಜಗ್ಗುವುದಿಲ್ಲ. ಅಲ್ಲದೇ, ಈಗಾಗಲೇ ಭಾರತ ದೇಶದ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದರು.ಕೊಡಗು ಜಿಲ್ಲೆ ಯೋಧರ ನಾಡಾಗಿದೆ. ಅದಕ್ಕೆ ತಕ್ಕಂತೆ ವಿಜಯೋತ್ಸವದಲ್ಲಿ ಮಳೆಯನ್ನು ಲೆಕ್ಕಿಸದೇ ಪಾಲ್ಗೊಂಡಿರುವುದು ಹೆಮ್ಮೆ ತಂದಿದೆ. ಭಾರತ ದೇಶದ ನಿವಾಸಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀರ ಧನ್ಯವಾದ ತಿಳಿಸಿದರು.
ಅಂಕಣಕಾರರು, ಬರಹಗಾರರು ವಿಶ್ವ ಮೋಹನ್ ಮಾತನಾಡಿ, ದೇಶದ ಸೈನ್ಯಕ್ಕೆ ಕೊಡಗು ಜಿಲ್ಲೆಯ ಕೊಡುಗೆ ಅಪಾರ. ಅಂತಹ ಜಿಲ್ಲೆಯಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಇಂದು ಸೈನಿಕರು ರಾಷ್ಟ್ರ ಕಾಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನ ರಣ ಹೇಡಿ ದೇಶವಾಗಿದೆ. ಅಲ್ಲದೆ ಪಾಕಿಸ್ತಾನ ಮುಂದೆ ಬಂದು ಯುದ್ಧ ಮಾಡಿದ ಇತಿಹಾಸವೇ ಇಲ್ಲ. ನೇರನೇರ ಯುದ್ಧ ಮಾಡಲು ಧೈರ್ಯವಿಲ್ಲ. ಆದರೂ ಹಿಂಬಾಗಿಲಿನಿಂದ ಪಹಲ್ಗಾಮ್ ನಂತಹ ದಾಳಿ ನಡೆಸುತ್ತಿದೆ. ಇದಕ್ಕೆ ನಮ್ಮ ಸೈನಿಕರು ಆಪರೇಷನ್ ಸಿಂದೂರ ಮೂಲಕ ಸರಿಯಾದ ಉತ್ತರ ನೀಡಿದ್ದಾರೆ. ಇಷ್ಟಾದರೂ ಕೂಡ ಪಾಕಿಸ್ತಾನಕ್ಕೆ ಬುದ್ಧಿಯಿಲ್ಲ. ರೋಗಗ್ರಸ್ತ ಮನಸ್ಥಿಯ ಪಾಕಿಸ್ತಾನ, ಬೆನ್ನಿಗೆ ಚೂರಿಹಾಕುವ ಕೆಲಸ ಮಾಡುತ್ತದೆ ಎಂದು ಅಸಮಾಧಾನ ಹೊರ ಹಾಕಿದರು.ಈ ಸಂದರ್ಭ ಸಿಂದೂರ ವಿಜಯೋತ್ಸವ ಸಮಿತಿ ಸಂಚಾಲಕ ಕೆ.ಕೆ.ದಿನೇಶ್ ಕುಮಾರ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತೀರ ಪಿ.ಸೋಮಣ್ಣ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಘ ಚಾಲಕರು ಮತ್ತು ವನವಾಸಿ ಕಲ್ಯಾಣ ಆಶ್ರಮದ ಪ್ರಾಂತ ಅಧ್ಯಕ್ಷ ಚೆಕ್ಕೇರ ಮನು ಕಾವೇರಪ್ಪ ಹಾಗೂ ನಿವೃತ್ತ ಸೇನಾಧಿಕಾರಿಗಳು, ಮಾಜಿ ಶಾಸಕರು, ದೇಶಾಭಿಮಾನಿಗಳು ಪಾಲ್ಗೊಂಡಿದ್ದರು.