ಮಡಿಕೇರಿ: ಮತದಾನ ಜಾಗೃತಿಗೆ ಸೆಲ್ಫಿ ಸ್ಪರ್ಧೆ

KannadaprabhaNewsNetwork | Published : Apr 23, 2024 12:52 AM

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿ, ರಾಜಾಸೀಟು, ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಚೇರಿ, ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿ, ವಿರಾಜಪೇಟೆ ತಹಸೀಲ್ದಾರ್ ಕಚೇರಿ, ಕುಶಾಲನಗರ ಕಾವೇರಿ ನಿಸರ್ಗಧಾಮ ಈ 6 ಸ್ಥಳಗಳಲ್ಲಿ ಮತದಾನ ಜಾಗೃತಿಗಾಗಿ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಸೆಲ್ಫಿ ಸ್ಪರ್ಧೆ ನಡೆಸಲು ತೀರ್ಮಾನಿಸಲಾಗಿದೆ. ಈ ಸೆಲ್ಫಿ ಸ್ಪರ್ಧೆ #LetsVoteKodagu ಹ್ಯಾಶ್‌ ಟ್ಯಾಗ್‌ನಲ್ಲಿ ನಡೆಯಲಿದೆ.ನಗರದ ಜಿಲ್ಲಾಧಿಕಾರಿಗಳ ಕಚೇರಿ, ರಾಜಾಸೀಟು, ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಚೇರಿ, ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿ, ವಿರಾಜಪೇಟೆ ತಹಸೀಲ್ದಾರ್ ಕಚೇರಿ, ಕುಶಾಲನಗರ ಕಾವೇರಿ ನಿಸರ್ಗಧಾಮ ಈ 6 ಸ್ಥಳಗಳಲ್ಲಿ ಮತದಾನ ಜಾಗೃತಿಗಾಗಿ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಮತ್ತು ಯುವ ಮತದಾರರು ಫೋಟೊವನ್ನು ಕಳುಹಿಸಬಹುದಾಗಿದೆ.ಅಲ್ಲದೆ ಏ.26ರಂದು ಮತದಾನ ನಡೆಯಲಿರುವ ಆಯ್ದ ವಿಶೇಷ ಮತಗಟ್ಟೆಗಳಲ್ಲಿಯೂ ಸೆಲ್ಪಿ ಪಾಯಿಂಟ್‌ಗಳನ್ನು ಸ್ಥಾಪಿಸಲಿದ್ದು, ಈ ಮತಗಟ್ಟೆಗಳಲ್ಲಿ ಮತದಾನ ಮಾಡಿದ ನಂತರ ಸೆಲ್ಫಿ ಪಾಯಿಂಟ್‌ನಲ್ಲಿ ಪೋಟೋಗಳನ್ನು ಕ್ರಿಯಾತ್ಮಕವಾಗಿ ಕ್ಲಿಕ್ಕಿಸಿ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾದ್ಯಂತ ಎಲ್ಲ ಸಾರ್ವಜನಿಕರು/ಮತದಾರರು ಮತದಾನದ ಪೂರ್ವದಲ್ಲಿ ನಾನು ಮತ ಚಲಾಯಿಸುತ್ತೇನೆ ಎಂಬ ಪರಿಕಲ್ಪನೆಯೊಂದಿಗೆ ತಾವಿರುವ ಸ್ಥಳದಲ್ಲಿಯೇ ವೈಯಕ್ತಿಕವಾಗಿ ಮತ್ತು ಗುಂಪಾಗಿ ಮತದಾನದಲ್ಲಿ ಪೂರ್ವದಲ್ಲಿ ಕ್ರಿಯಾತ್ಮಕವಾಗಿ ಸೆಲ್ಫಿ ಕ್ಲಿಕ್ಕಿಸಿ ವ್ಯಾಟ್ಸಾಪ್ ಮೊಬೈಲ್ ಸಂಖ್ಯೆ 9741224300 ಗೆ ಕಳುಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ಮತದಾನದ ದಿನದಂದು ಮತ ಚಲಾಯಿಸಿದ ನಂತರ ‘I VOTED’ ಎಂಬ ಶೀರ್ಷಿಕೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ 9741224300 ವಾಟ್ಸಾಪ್ ಸಂಖ್ಯೆಗೆ ಕಳಹಿಸಲು ತಿಳಿಸಲಾಗಿದೆ.

ಇಂದಿನಿಂದ ಮತದಾನ ಪೂರ್ಣಗೊಳ್ಳುವ ವರೆಗೂ ಈ ಸೆಲ್ಫಿ ಸ್ಪರ್ಧೆ ನಡೆಯಲಿದೆ. ಜಿಲ್ಲೆಯ ಎಲ್ಲ ಮತದಾರರು/ ಸಾರ್ವಜನಿಕರುಲಿದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕ್ರಿಯಾತ್ಮಕವಾಗಿ ಸೆಲ್ಫಿ ಕ್ಲಿಕ್ಕಿಸಿ ಕಳುಹಿಸುವ ಆಯ್ದ ಫೋಟೊಗಳಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು.* ನಿಬಂಧನೆಗಳು: ಒಬ್ಬ ವ್ಯಕ್ತಿ ಒಂದು ಫೋಟೊವನ್ನು ಮಾತ್ರವೇ ಕಳುಹಿಸತಕ್ಕದ್ದು. ಫೋಟೊ ಜೊತೆಯಲ್ಲಿ ತಮ್ಮ ಹೆಸರು, ಊರಿನ ಹೆಸರನ್ನು ಕಡ್ಡಾಯವಾಗಿ ಕಳುಹಿಸತಕ್ಕದ್ದು. ವಿಜೇತರನ್ನು ಆಯ್ಕೆ ಮಾಡುವಲ್ಲಿ ಕೊಡಗು ಜಿಲ್ಲಾ ಸ್ವೀಪ್ ಸಮಿತಿ ನಿರ್ಣಯವೇ ಅಂತಿಮವಾಗಿರುತ್ತದೆ. ಯಾವುದೇ ಧರ್ಮ, ಜಾತಿ, ವ್ಯಕ್ತಿ, ರಾಜಕೀಯ ಪಕ್ಷ, ಚುನಾವಣಾ ಅಭ್ಯರ್ಥಿ ಪರವಾಗಿ ಅಥವಾ ಪಕ್ಷದ ಗುರುತಿನೊಂದಿಗೆ ಕಳುಹಿಸುವ ಫೋಟೊವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ವ್ಯಾಟ್ಸಾಪ್ ಮುಖಾಂತರ ಮಾತ್ರವೇ ಫೋಟೊ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

Share this article