ಮಡಿಕೇರಿ: ಕೊಡಗು ಬ್ಲಡ್ ಡೋನರ್ಸ್‌ ಏಳನೇ ವಾರ್ಷಿಕೋತ್ಸವ

KannadaprabhaNewsNetwork |  
Published : Nov 22, 2024, 01:18 AM IST
ಚಿತ್ರ :  21ಎಂಡಿಕೆ3 : ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7 ನೇ ವಾಷಿ೯ಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಮುಖರು.  | Kannada Prabha

ಸಾರಾಂಶ

ನಗರದ ರೋಟರಿ ಸಭಾಂಗಣದಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ಪ್ರತೀ ತಿಂಗಳು ಜಿಲ್ಲಾ ರಕ್ತನಿಧಿಗೆ 500 ಯೂನಿಟ್ ರಕ್ತದ ಅಗತ್ಯವಿದ್ದು, ತಿಂಗಳಿಗೆ ರಕ್ತಸಂಗ್ರಹಣೆಯ ಕನಿಷ್ಠ 10 ಶಿಬಿರಗಳ ಮೂಲಕ ಪ್ರತೀ ಶಿಬಿರದಿಂದಲೂ 50 ಯೂನಿಟ್ ರಕ್ತ ಸಂಗ್ರಹ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗಾಯಾಳುವಿನ ಜೀವ ಸಂರಕ್ಷಣೆ ಮತ್ತು ರೋಗಿಗೆ ಅನಿವಾರ್ಯತೆಯಾದ ಸಂದರ್ಭ ನೀಡುವ ರಕ್ತವನ್ನು ದಾನವಾಗಿ ನೀಡುವ ಮಹತ್ವದ ಸೇವೆ ಕೈಗೊಳ್ಳುವ ರಕ್ತದಾನಿಗಳೇ ನಿಜವಾದ ಸೂಪರ್ ಹೀರೋಗಳಾಗಿದ್ದಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್‌ ಎಚ್‌.ಟಿ. ಅಭಿಪ್ರಾಯಪಟ್ಟಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಮುಖಿಯಾದ ಮಾನವನಿಗೆ ಎಲ್ಲಾ ರೀತಿಯಲ್ಲಿಯೂ ತೃಪ್ತಿ ನೀಡಬಲ್ಲ ಕಾರ್ಯ ರಕ್ತದಾನ. ರಕ್ತದಾನದ ಮೂಲಕ ದಾನಿ ಮತ್ತೊಂದು ಜೀವವನ್ನು ಸಂರಕ್ಷಿಸುತ್ತಾನೆ, ಈ ನಿಟ್ಟಿನಲ್ಲಿ ದೇವರು ಕೂಡ ಮೆಚ್ಚುವ ಕೆಲಸ ಮಾಡಿ, ರಕ್ತವನ್ನು ಸಕಾಲಿಕವಾಗಿ ಪಡೆದು ಜೀವ ಉಳಿಸಿಕೊಳ್ಳುವವನ ಪಾಲಿಗೂ ದಾನಿ ದೇವರಂತೆ ಕಾಣುತ್ತಾನೆ ಎಂದರು.

ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ಮಡಿಕೇರಿಯಲ್ಲಿ ಜಿಲ್ಲಾಸ್ಪತ್ರೆ ವಿಸ್ತಾರಗೊಂಡು ಇನ್ನಷ್ಟು ಸೌಲಭ್ಯ ಹೊಂದಿದ ಬಳಿಕ ರೋಗಿಗಳ ದಾಖಲಾತಿ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಹೀಗಾಗಿ ರಕ್ತಕ್ಕೆ ಬೇಡಿಕೆ ಕೂಡ ಏರಿಕೆಯಾಗಿದೆ, ಪ್ರತೀ ತಿಂಗಳು ಜಿಲ್ಲಾ ರಕ್ತನಿಧಿಗೆ 500 ಯೂನಿಟ್ ರಕ್ತದ ಅಗತ್ಯವಿದ್ದು, ತಿಂಗಳಿಗೆ ರಕ್ತಸಂಗ್ರಹಣೆಯ ಕನಿಷ್ಠ 10 ಶಿಬಿರಗಳ ಮೂಲಕ ಪ್ರತೀ ಶಿಬಿರದಿಂದಲೂ 50 ಯೂನಿಟ್ ರಕ್ತ ಸಂಗ್ರಹ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

ವಾರ್ಷಿಕವಾಗಿ ಕೊಡಗು ಜಿಲ್ಲೆಯಲ್ಲಿ ಕನಿಷ್ಠ 100 ರಕ್ತಸಂಗ್ರಹಣಾ ಶಿಬಿರದ ಅನಿವಾರ್ಯತೆಯಿದ್ದು, ಈ ನಿಟ್ಟಿನಲ್ಲಿ ರಕ್ತ ಸಂಗ್ರಹಣೆಗೆ ಜಿಲ್ಲೆಯಾದ್ಯಂತ ಜನರು ಸಹಕಾರ ನೀಡಬೇಕೆಂದು ಕೋರಿದರು.

ಕೊಡಗು ಬ್ಲಡ್ ಡೋನರ್ಸ್‌ ಸಂಸ್ಥೆ ಅಧ್ಯಕ್ಷ ಪಿ ಜಿ ಸುಕುಮಾರ್ ಮಾತನಾಡಿ, ಈ ಶಿಬಿರದಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ಶಿಬಿರಗಳಿಗೆ ಬರುವ ರಕ್ತದಾನಿಗಳಿಗೆ ಪ್ರಯಾಣ ವೆಚ್ಚವನ್ನೂ ಸಂಸ್ಥೆ ವತಿಯಿಂದ ಭರಿಸಲಾಗುತ್ತದೆ ಎಂದು ಘೋಷಿಸಿದರು.

ಕೊಡಗು ಬ್ಲಡ್ ಡೋನರ್ಸ್‌ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಖಲೀಲ್ ಕ್ರಿಯೇಟಿವ್ ಮಾತನಾಡಿ, ಭಾರತದಾದ್ಯಂತ ಎಲ್ಲಿಯೇ ಅಗತ್ಯವಿದ್ದರೂ ರಕ್ತದಾನ ನೀಡುವ ನಿಟ್ಟಿನಲ್ಲಿ ರಕ್ತದಾನಿಗಳ ಬೖಹತ್ ಜಾಲವನ್ನು ಸಂಸ್ಥೆ ಹೊಂದಿದೆ. ರಕ್ತದಾನಿಗಳಿಗಾಗಿ ಎಲ್ಲಾ ರಕ್ತದಾನ ಸಂಬಂಧಿತ ಸಂಘಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿಯೂ ಪ್ರಯತ್ನ ಸಾಗಿದೆ, ಹೀಗಾದಾಗ ವಿಳಂಬರಹಿತವಾಗಿ ಅಗತ್ಯವಿರುವ ರೋಗಿಗೆ ಅಗತ್ಯವುಳ್ಳ ರಕ್ತ ಅತ್ಯಂತ ಶೀಘ್ರ ದೊರಕಲಿದೆ ಎಂದರು.

ಕೊಡಗು ಬ್ಲಡ್ ಡೋನನ್ಸ್‌ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಅಂಜುಮ್,

ಮಡಿಕೇರಿ ರೋಟರಿ ಅಧ್ಯಕ್ಷ ಸುದಯ್ ನಾಣಯ್ಯ, ಮಡಿಕೇರಿಯ ಎಚ್‌ಡಿಎಫ್‌ಸಿ ಆಪರೇಷನ್ ಮ್ಯಾನೇಜರ್ ನಾರಾಯಣ ರಾಜೇಂದ್ರ, ನೇತ್ರ ಆಪ್ಟಿಕಲ್ಸ್ ಮಾಲೀಕ ಅಫ್ಸಾನ್, ಡಾ. ವಿನಾಯಕ್‌ ಹಾಜರಿದ್ದರು.

ಚನ್ನನಾಯಕ ನಿರೂಪಿಸಿದರು. ಬಾಳೆಯಡ ದಿವ್ಯ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಮೈಖೆಲ್ ವರ್ಗೀಸ್‌ ಸಂಸ್ಥೆಯ ಮಾಹಿತಿ ನೀಡಿದರು. ಮುಸ್ತಫ ವಂದಿಸಿದರು.

................................

ರಕ್ತದಾನಿಗಳ ಉತ್ಸಾಹ!ಕೊಡಗು ಬ್ಲಡ್ ಡೋನರ್ಸ್‌ ಸಂಸ್ಥೆ ಪ್ರಗತಿಗೆ ಕಾರಣಕರ್ತರಾದವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಅಂಜುಮ್, ನಿಕಟಪೂರ್ವ ಅಧ್ಯಕ್ಷ ಖಲೀಲ್, ಕ್ರಿಯೆಟೀವ್ ಸಂಸ್ಥೆಯ ಉಪಾಧ್ಯಕ್ಷ 85 ಸಲ ರಕ್ತದಾನ ಮಾಡಿದ ದಾಖಲೆಗೆ ಕಾರಣರಾದ ಅಶ್ರಫ್, ಸಂಸ್ಥೆಯ ಸದಸ್ಯ ಉನೈಸ್ ಅವರನ್ನು ಸನ್ಮಾನಿಸಲಾಯಿತು.

ನೂರಾರು ಮಂದಿ ರಕ್ತದಾನ ಮಾಡಿದರು. ಹೈದರಾಬಾದ್ ನಲ್ಲಿದ್ದ ಮಡಿಕೇರಿ ಮೂಲದ ಅಣ್ಣ ತಂಗಿ ಕೂಡ ಶಿಬಿರಕ್ಕಾಗಿ ಮಡಿಕೇರಿಗೆ ಬಂದು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು, ಕೊಡಗು ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ ಟೇಬಲ್ ರಾಮಪ್ಪ 52 ನೇ ಬಾರಿ ರಕ್ತದಾನ ಮಾಡಿ ಗಮನ ಸೆಳೆದರು. ನೇತ್ರ ತಪಾಸಣಾ ಶಿಬಿರ ಕೂಡ ಆಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!