ಗುಂಡ್ಲುಪೇಟೆಯಲ್ಲಿ ನಿಲ್ಲದ ಓವರ್ ಲೋಡ್ ಟಿಪ್ಪರ್‌ ಸಂಚಾರ: ಅಧಿಕಾರಿಗಳ ನಿರ್ಲಕ್ಷ್ಯ

KannadaprabhaNewsNetwork |  
Published : Nov 22, 2024, 01:18 AM IST
21ಜಿಪಿಟಿ1ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯ ಮುಂದೆ ಎಂ.ಸ್ಯಾಂಡ್‌ ಟಿಪ್ಪರ್ ಓವರ್ ಲೋಡ್ ತುಂಬಿಕೊಂಡು ನಂಜನಗೂಡಿನತ್ತ ತೆರಳುತ್ತಿದೆ. | Kannada Prabha

ಸಾರಾಂಶ

ಗುಂಡ್ಲುಪೇಟೆ ಹಾಗೂ ಬೇಗೂರು ಭಾಗದ ಕ್ರಷರ್ ಕಲ್ಲು ಸಾಗಾಣಿಕೆ ಮಾಡುವ ಟಿಪ್ಪರ್ ಸಂಚಾರಕ್ಕೇನು ಕಡಿಮೆಯಿಲ್ಲ, ಓವರ್ ಲೋಡ್ ಸಾಗಾಣಿಕೆಯಿಂದ ರಸ್ತೆಗಳ ಹಾಳಾಗುತ್ತಿವೆ.

ಸರ್ಕಾರಕ್ಕೆ ರಾಜಧನ ವಂಚನೆ, ರಸ್ತೆಗಳೂ ಹಾಳು । ಕಡಿವಾಣ ಹಾಕಲು ಪೊಲೀಸರು ವಿಫಲ । ವಂಚನೆ ತಡೆಗೆ ಜಿಲ್ಲಾಡಳಿತದ ವೈಫಲ್ಯ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಹಾಗೂ ಬೇಗೂರು ಭಾಗದ ಕ್ರಷರ್ ಕಲ್ಲು ಸಾಗಾಣಿಕೆ ಮಾಡುವ ಟಿಪ್ಪರ್ ಸಂಚಾರಕ್ಕೇನು ಕಡಿಮೆಯಿಲ್ಲ, ಓವರ್ ಲೋಡ್ ಸಾಗಾಣಿಕೆಯಿಂದ ರಸ್ತೆಗಳ ಹಾಳಾಗುತ್ತಿವೆ, ಕಡಿಮೆ ಟನ್‌ಗೆ ಆದೇಶ ಪಡೆದುಕೊಂಡು ದುಪ್ಪಟ್ಟು ಟನ್ ಸಾಗಾಣಿಕೆ ಆಗುತ್ತಿರುವ ಕಾರಣ ಸರ್ಕಾರಕ್ಕೆ ರಾಜಧನ ವಂಚನೆ ಆಗುತ್ತಿದೆ.

ಚಾಮರಾಜನಗರ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಇದ್ದರೂ ಓವರ್ ಲೋಡ್ ತುಂಬಿದ ಟಿಪ್ಪರ್‌ಗಳ ಸಂಚಾರಕ್ಕೆ ಬ್ರೇಕ್ ಹಾಕಲು ಆಗುತ್ತಿಲ್ಲ. ಕಾರಣ ಆರ್‌ಟಿಒ ಹಾಗೂ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿದೆ.

ಓವರ್ ಲೋಡ್ ಟಿಪ್ಪರ್ ಹಾವಳಿಯ ಜತೆಗೆ ಮಿತಿ ಮೀರಿದ ವೇಗ ಹಾಗೂ ಟಿಪ್ಪರ್ ಮೇಲೆ ಸುರಕ್ಷಿತ ಹೊದಿಕೆ ಇಲ್ಲದೆ ಸಂಚರಿಸುವ ಕಾರಣ ಜನರ ಕಣ್ಣಿಗೆ ಧೂಳು ಹಾಗೂ ಬ್ರೇಕ್ ಹಾಕಿದಾಗ ಓವರ್ ಲೋಡ್ ಕಲ್ಲು, ಜಲ್ಲಿ ರಸ್ತೆ ಹಾಗೂ ರಸ್ತೆಗಳ ತಿರುವಿನಲ್ಲಿ ಉದುರುತ್ತಿವೆ.

ನಿತ್ಯ ಮೈಸೂರು-ಊಟಿ ಹೆದ್ದಾರಿ, ಚಾಮರಾಜನಗರ ರಸ್ತೆ,ಕೇರಳ ರಸ್ತೆಗಳಲ್ಲಿ ಆರ್‌ಟಿಒ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಭಯವಿಲ್ಲದೆ ಮೆಟಿರಿಯಲ್ ಸಾಗಾಣಿಕೆ ಅನುಮತಿ (ಎಂಟಿಪಿ) ಇಲ್ಲದೆ ಸಂಚರಿಸುತ್ತಿವೆ.

ನಿಯಮ ಮೀರಿ ಸಂಚರಿಸುವ ಟಿಪ್ಪರ್‌ಗಳಿಗೆ ಅಂಕುಶ ಹಾಕುವಲ್ಲಿ ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ರಾಜಧನ ಸೋರಿಕೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾಡಳಿತಕ್ಕೆ ದೂರು ನೀಡಿದ ದೂರುದಾರ ಪ್ರಸನ್ನ ಹೇಳಿದ್ದಾರೆ.

ಗುಂಡ್ಲುಪೇಟೆ ಹಾಗೂ ಬೇಗೂರು ಭಾಗದ ಕ್ವಾರಿ ಹಾಗೂ ಕ್ರಷರ್‌ಗಳಿಂದ ಟಿಪ್ಪರ್‌ಗಳಲ್ಲಿ ಓವರ್ ಲೋಡ್ ಕಲ್ಲು ಮತ್ತು ಎಂ.ಸ್ಯಾಂಡ್‌, ಜಲ್ಲಿ ತುಂಬಿಕೊಂಡು ಸಂಚರಿಸುತ್ತಿವೆ. ಅಲ್ಲದೆ ಖಾಲಿ ಟಿಪ್ಪರ್‌ಗಳು ವೇಗದಲ್ಲಿ ಕ್ವಾರಿಯತ್ತ ತೆರಳುತ್ತವೆ. ಗುಂಡ್ಲುಪೇಟೆ ಹಾಗೂ ಬೇಗೂರು ಭಾಗದ ಕ್ವಾರಿಗಳಲ್ಲಿ ಕಲ್ಲು ಸಾಗಿಸುವ ಟಿಪ್ಪರ್‌ಗಳು ಸುರಕ್ಷತೆ ಪಾಲಿಸುತ್ತಿಲ್ಲ. ಕ್ವಾರಿಯಿಂದ ಸಾಗಿಸುವ ಕಲ್ಲಿಗೆ ಅನುಮತಿ, ಕ್ರಷರ್‌ನಿಂದ ಸಾಗಿಸುವ ಉತ್ಪನ್ನಗಳಿಗೆ ಎಂಡಿಪಿ ಇಲ್ಲದೆ ನೂರಾರು ಟಿಪ್ಪರ್ ಸಂಚರಿಸುತ್ತಿವೆ.

ಅಕ್ರಮ ಸಾಗಾಣೆ?:

ಟಿಪ್ಪರ್‌ಗಳು ತಪಾಸಣೆ ಸಮಯದಲ್ಲಿ ಅವಘಡಗಳು ನಡೆದಾಗ ಮತ್ತು ಪತ್ರಿಕೆಗಳಲ್ಲಿ ಸುದ್ದಿ ಬಂದಾಗ ಪೊಲೀಸರು ಅತೀ ವೇಗ ಎಂದು ದಂಡ ಹಾಕುತ್ತಾರೆ ಅಷ್ಟೆ. ದಾಖಲಾತಿ ನೋಡೋದಿಲ್ಲ. ಟಿಪ್ಪರ್‌ಗಳ ಫಿಟ್ನೆಸ್‌ ಸರ್ಟಿಫಿಕೇಟ್‌, ಚಾಲಕ ಸಮವಸ್ತ್ರ ಧರಿಸಿರುವುದನ್ನು ಕೇಳುತ್ತಿಲ್ಲ ಎಂದು ಆರೋಪಿಸಲಾಗಿದೆ.

ಆರ್‌ಟಿಒ ಶಾಮೀಲು?:

ಗುಂಡ್ಲುಪೇಟೆ ಹಾಗೂ ಬೇಗೂರು ಭಾಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಓವರ್ ಲೋಡ್ ಕಲ್ಲು ಸಾಗಾಣಿಕೆ ಹಾಗೂ ಅನುಮತಿ ಇಲ್ಲದೆ ಅಕ್ರಮವಾಗಿ ರಾಜಧನ ವಂಚಿಸುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಮೈಸೂರು-ಊಟಿ ಹೆದ್ದಾರಿ, ಚಾಮರಾಜನಗರ ರಸ್ತೆಗಳಲ್ಲಿ ಕ್ರಷರ್‌ ಉತ್ಪನ್ನ ಹಾಗೂ ಕ್ವಾರಿ ಕಲ್ಲು ಓವರ್ ಲೋಡ್ ಇಲ್ಲದೆ ಟಿಪ್ಪರ್‌ಗಳ ಸಂಚಾರ ಕಡಿಮೆ ಆದರೆ ಶೇ.99ರಷ್ಟು ಟಿಪ್ಪರ್‌ಗಳು ಓವರ್ ಲೋಡ್ ತುಂಬಿಕೊಂಡೇ ಸಾಗಾಣಿಕೆ ಮಾಡುತ್ತಿದ್ದರೂ ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಶಾಮೀಲಾಗಿರುವುದೇ ಓವರ್‌ ಲೋಡ್‌ ಟಿಪ್ಪರ್‌ ಸಂಚಾರಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಕಲ್ಲು ಸಾಗಾಣಿಕೆ ಅಕ್ರಮವಾಗಿ ನಡೆಯುತ್ತಿದೆ. ಅಲ್ಲದೆ ಪರ‍್ಮಿಟ್ ಹಾಕಿ ಕಲ್ಲು ಸಾಗಾಣಿಕೆ ಶೇ.10ರಷ್ಟು ಇಲ್ಲವೇ ಶೇ.90 ರಷ್ಟು ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಅನುಮತಿ ಇಲ್ಲದೆ ರಾಜಧನ ವಂಚಿಸುತ್ತಿರುವವರ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗುತ್ತಿಲ್ಲವೇಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಕರೆ ಸ್ವೀಕರಿಸದ ಆರ್‌ಟಿಒ:

ಗುಂಡ್ಲುಪೇಟೆ ತಾಲೂಕಿನಲ್ಲಿ ಮಿತಿ ಮೀರಿ ಭಾರ ಹೊತ್ತ ಟಿಪ್ಪರ್‌ಗಳು ಸಂಚರಿಸಿ, ರಸ್ತೆ ಹಾಳಾಗುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಕೇಳಿ ಬಂದಿದೆ. ಈ ಸಂಬಂಧ ಕನ್ನಡಪ್ರಭ ಚಾಮರಾಜನಗರ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ ಅವರನ್ನು ಸಂಪರ್ಕಿಸಲು ಹಲವು ಬಾರಿ ಸಂಪರ್ಕಿಸಿದರೂ ಕರೆ ಸ್ವೀಕರಿಸಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!