ಮಂಡ್ಯ ಮಂಜುನಾಥ
ನಗರದೊಳಗೆ ಹಾದುಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಮತ್ತು ಫುಟ್‌ಪಾತ್ ಕಾಮಗಾರಿ ನಡೆಸುತ್ತಿದ್ದು, ಚರಂಡಿಯನ್ನೇ ನಿರ್ಮಿಸದೆ ಫುಟ್‌ಪಾತ್ ಕಾಮಗಾರಿ ನಡೆಸುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದಿವ್ಯಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೆದ್ದಾರಿ ಪ್ರಾಧಿಕಾರದಿಂದ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದ ಮುಂದಿನ ದಿನಗಳಲ್ಲಿ ಮಳೆ ನೀರು ಹೆದ್ದಾರಿ ರಸ್ತೆಯಲ್ಲೇ ನಿಲುಗಡೆಯಾಗುವುದು ನಿಶ್ಚಿತವಾಗಿದೆ. ರಸ್ತೆಯಲ್ಲಿ ಬಿದ್ದ ಮಳೆ ನೀರು ಹರಿದುಹೋಗುವುದಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದಿರುವುದರಿಂದ ಮಳೆ ಬಿದ್ದಾಗ ರಸ್ತೆ ಕೆರೆಯಂತಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.ಸುಮಾರು ೩೩ ಕೋಟಿ ರು. ವೆಚ್ಚದಲ್ಲಿ ಉಮ್ಮಡಹಳ್ಳಿ ಗೇಟ್‌ನಿಂದ ಕಿರಗಂದೂರು ಗೇಟ್‌ವರೆಗೆ ಹೆದ್ದಾರಿ ರಸ್ತೆ ಹಾಗೂ ಫುಟ್‌ಪಾತ್ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ನಿಯಮಾನುಸಾರ ರಸ್ತೆ ಪಕ್ಕ ಚರಂಡಿಯನ್ನು ನಿರ್ಮಿಸಿ ಫುಟ್‌ಪಾತ್ ಕಾಮಗಾರಿ ನಡೆಸಬೇಕಿತ್ತು. ಆದರೆ, ಚರಂಡಿಯನ್ನೇ ನಿರ್ಮಿಸದೆ ಸುಮಾರು ೬ ಕಿ.ಮೀ. ದೂರದವರೆಗೆ ರಸ್ತೆ-ಫುಟ್‌ಪಾತ್ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಆದರೂ ಈ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳೂ ದನಿಯನ್ನೇ ಎತ್ತದಿರುವುದು ಸೋಜಿಗದ ಸಂಗತಿಯಾಗಿದೆ.
ಈ ಹಿಂದೆ ಮಳೆ ಬಿದ್ದಾಗಲೆಲ್ಲಾ ರಸ್ತೆಯಲ್ಲೇ ನೀರು ನಿಲ್ಲುವುದು ಸರ್ವೇ ಸಾಮಾನ್ಯವಾಗಿತ್ತು. ಮುಂದೆ ರಸ್ತೆ ಮತ್ತು ಫುಟ್‌ಪಾತ್ ಕಾಮಗಾರಿ ನಡೆಸುವ ಸಮಯದಲ್ಲಿ ಚರಂಡಿ ನಿರ್ಮಾಣವಾಗಿ ಮಳೆ ನೀರು ಹರಿದುಹೋಗುವುದಕ್ಕೆ ವ್ಯವಸ್ಥೆ ಮಾಡಬಹುದೆಂದು ಸಾರ್ವಜನಿಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಇದೀಗ ಚರಂಡಿಯನ್ನೇ ನಿರ್ಮಿಸದೆ ಕಾಮಗಾರಿ ಮುಂದುವರೆಸಲಾಗುತ್ತಿದೆ. ಹಾಗಾದರೆ ಮಳೆಗಾಲದಲ್ಲಿ ನೀರು ಹರಿದುಹೋಗುವುದಕ್ಕೆ ಜಾಗವೆಲ್ಲಿದೆ ಎನ್ನುವುದು ಪ್ರಶ್ನೆಯಾಗಿದೆ.
ಫುಟ್‌ಪಾತ್ ಕಾಮಗಾರಿಯಲ್ಲಿ ಸಮಾನಾಂತರವಿಲ್ಲ:
ಫುಟ್‌ಪಾತ್ ಕೂಡ ನಗರದೊಳಗೆ ಏಕಮುಖವಾಗಿಲ್ಲ. ಎಸ್.ಡಿ.ಜಯರಾಂ ವೃತ್ತ (ನಂದಾ ವೃತ್ತ) ದಿಂದ ಮುನಿಸಿಪಲ್ ಕಾಲೇಜುವರೆಗೆ ಒಂದು ರೀತಿಯಲ್ಲಿದ್ದರೆ, ಅಲ್ಲಿಂದ ಮುಂದಕ್ಕೆ ಅಲ್ಲಲ್ಲಿ ತುಂಡು ತುಂಡಾದಂತೆ ಕಂಡುಬರುತ್ತಿದೆ. ನಂದಾ ವೃತ್ತದಿಂದ ಮೈಷುಗರ್ ವೃತ್ತದವರೆಗೆ ಬೇರೆ ಮಾದರಿಯಲ್ಲಿದೆ. ಅಲ್ಲಿಂದ ಮೈಷುಗರ್ ಹೈಸ್ಕೂಲ್‌ವರೆಗೆ ಒಂದು ರೀತಿ ಇದ್ದರೆ ಅಲ್ಲಿಂದ ಮುಂದಕ್ಕೆ ಫುಟ್‌ಪಾತ್ ಮೂರರಿಂದ ನಾಲ್ಕು ಅಡಿಗೆ ಬಂದು ನಿಲ್ಲುತ್ತಿದೆ.
ಯುದ್ಧ ಕಾಲೇ ಶಸ್ತ್ರಾಭ್ಯಾಸ:
ಸಣ್ಣ ಮಳೆಗೂ ಮಹಾವೀರ ವೃತ್ತದ ರಸ್ತೆ ಕೆರೆಯಂತಾಗುವುದು ಸರ್ವೇ ಸಾಮಾನ್ಯವಾಗಿದೆ. ದಶಕದ ಆ ಸಮಸ್ಯೆಗೆ ಇದುವರೆಗೂ ಮುಕ್ತಿ ಸಿಗದಂತಾಗಿದೆ. ಈಗ ೩೩ ಕೋಟಿ ರು. ವೆಚ್ಚದಲ್ಲಿ ರಸ್ತೆ- ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದು ಖುಷಿಯ ವಿಚಾರವಾದರೂ ಚರಂಡಿ ಇಲ್ಲದೆ ನಡೆಯುತ್ತಿರುವ ಕಾಮಗಾರಿ ಬಗ್ಗೆ ಜನರಲ್ಲಿ ಅಸಹನೆಯೂ ಇದೆ. ಇಂತಹ ಅವೈಜ್ಞಾನಿಕ ಕಾಮಗಾರಿಗಳಿಂದ ಮುಂದೆ ಎದುರಾಗುವ ಸಮಸ್ಯೆಗಳು, ಸಂಭವಿಸಬಹುದಾದ ಅನಾಹುತಗಳಿಗೆ ಹೊಣೆ ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿದೆ.ಮರದ ಬೇರನ್ನು ತೆರವುಗೊಳಿಸಿಲ್ಲ:
ಹೆದ್ದಾರಿ ಪ್ರಾಧಿಕಾರದವರು ಚರಂಡಿ ಇಲ್ಲದೆ ರಸ್ತೆ ಮತ್ತು ಫುಟ್‌ಪಾತ್ ಕಾಮಗಾರಿ ನಡೆಸುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಮಳೆ ಬಿದ್ದ ಸಮಯದಲ್ಲಿ ನೀರು ಹರಿದುಹೋಗುವುದಕ್ಕೆ ಸ್ಥಳಾವಕಾಶವೇ ಇಲ್ಲದಂತಾಗಿದ್ದು, ನೀರು ರಸ್ತೆಯಲ್ಲೇ ನಿಲ್ಲುವುದು ನಿಶ್ಚಿತವಾಗಿದೆ. ಅದಕ್ಕಾಗಿ ಚರಂಡಿಯನ್ನು ನಿರ್ಮಿಸಿ ಫುಟ್‌ಪಾತ್ ಕಾಮಗಾರಿ ನಡೆಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ.
-ಎಂ.ಸಿ.ಪ್ರಕಾಶ್ (ನಾಗೇಶ್), ಅಧ್ಯಕ್ಷರು, ನಗರಸಭೆಅಧಿಕಾರಿಗಳೊಂದಿಗೆ ಮಾತನಾಡುವೆ
ಹೆದ್ದಾರಿ ರಸ್ತೆಯಲ್ಲಿ ಚರಂಡಿಯನ್ನು ನಿರ್ಮಿಸದೆ ರಸ್ತೆ-ಫುಟ್‌ಪಾತ್ ಕಾಮಗಾರಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆ ರೀತಿ ಕಾಮಗಾರಿ ನಡೆಸುವುದು ಸರಿಯಲ್ಲ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ.- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ