ಮಡಿಕೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಡಿಕೇರಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಇಬ್ಬರು ಅಪರಾಧಿಗಳಿಗೆ ತಲಾ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.ಪ್ರಕರಣದ ಹಿನ್ನೆಲೆ: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಕೋರೆ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಅಪ್ರಾಪ್ತ ಬಾಲಕಿ ಕುಶಾಲನಗರದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಕಂಬಿಬಾಣೆ ಭೂದಾನ ಪೈಸಾರಿ ನಿವಾಸಿ, ವಿವಾಹಿತ ಹಾಗೂ ಒಂದು ಮಗುವಿನ ತಂದೆಯಾಗಿರುವ 1ನೇ ಆರೋಪಿ ದಿಲೀಪ್ ಕುಮಾರ್ ಬಿ.ವಿ ಈತ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ನಂಬಿಸಿ ತನ್ನ ಮಾರುತಿ 800 ಕಾರಿನಲ್ಲಿ ಕರೆದೊಯ್ದು ಸುತ್ತಾಡಿಸಿ, ಕುಶಾಲನಗರ ಕೂಡಿಗೆಯಲ್ಲಿನ 2ನೇ ಆರೋಪಿ ಚಂದ್ರಪ್ಪ ಪಿ.ಇವರಿಗೆ ಸೇರಿದ ಶ್ರೀ ಧನಲಕ್ಷ್ಮಿ ಲಾಡ್ಜ್ ಗೆ 10ಕ್ಕೂ ಹೆಚ್ಚು ಬಾರಿ ಕರೆದೊಯ್ದು ಬಲವಂತದ ಲೈಂಗಿಕ ಸಂಪರ್ಕ ನಡೆಸಿದ್ದ.2024 ಫೆ. 10 ರಂದು ನಕಲಿ ತಾಳಿ ಚೈನ್ ಖರೀದಿಸಿ ಕೂಡಿಗೆ ಗ್ರಾಮದ ಶ್ರೀ ಉದ್ಭವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಬಾಲಕಿಗೆ ತಾಳಿ ಕಟ್ಟಿ ಬಾಲ್ಯ ವಿವಾಹ ಮಾಡಿಕೊಂಡಿದ್ದ. 2024 ಮಾ. 9ರಂದು ರಾತ್ರಿ 10.30ಕ್ಕೆ ಬಾಲಕಿ ತಂದೆ ತಾಯಿಯೊಂದಿಗೆ ಮನೆಯಲ್ಲಿದ್ದಾಗ ಅಪಹರಿಸಿ ಸಿದ್ದಾಪುರದ ಅರೆಕಾಡು ಮದರಗುಪ್ಪ ಎಸ್ಟೇಟ್ ಜಂಕ್ಷನ್ ನಲ್ಲಿ ಕಾರು ನಿಲ್ಲಿಸಿ ಕಾರಿನಲ್ಲೇ ಲೈಂಗಿಕ ದೌರ್ಜನ್ಯ ಎಸಗಿ ನಂತರ ಮದರಗುಪ್ಪದ ಜಾರ್ಜ್ ಜೋಸೆಫ್ ರವರ ಎಸ್ಟೇಟ್ ಲೈನ್ ಮನೆಯಲ್ಲಿ ಇರಿಸಿಕೊಂಡಿದ್ದ.ಈ ಸಂಬಂಧ ಪೋಷಕರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಂದಿನ ಸೋಮವಾರಪೇಟೆ ಡಿವೈಎಸ್ಪಿ ಆರ್.ವಿ ಗಂಗಾಧರಪ್ಪ ಅವರು ಬಾಲಕಿಯನ್ನು ರಕ್ಷಿಸಿ ತನಿಖೆ ನಡೆಸಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ನ್ಯಾಯಾಲಯದ ತೀರ್ಪು: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಮ್ತಾಜ್ ಅವರು, 1ನೇ ಆರೋಪಿ ಬಡ ಕುಟುಂಬದ ಪರಿಶಿಷ್ಟ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ನಟಿಸಿ ಲೈಂಗಿಕ ತೃಷೆಗೆ ಬಳಸಿಕೊಂಡಿರುವುದು ಹಾಗೂ 2ನೇ ಆರೋಪಿ ತನ್ನ ಲಾಡ್ಜ್ ಗೆ ಬರುವವರ ದಾಖಲೆ ಪರಿಶೀಲಿಸದೆ ಕೃತ್ಯಕ್ಕೆ ಸಹಕಾರ ನೀಡಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ. ಇಬ್ಬರು ಆರೋಪಿಗಳಿಗೆ ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಅಡಿ ತಲಾ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. 1ನೇ ಆರೋಪಿಗೆ ರು. 1,60,000 ಹಾಗೂ 2ನೇ ಆರೋಪಿಗೆ ರು..25,000 ದಂಡ ವಿಧಿಸಲಾಗಿದೆ. ಸಂತ್ರಸ್ತ ಬಾಲಕಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.