ಕನಕಗಿರಿ: 12ನೇ ಶತಮಾನದಲ್ಲಿದ್ದ ಮೇಲುಕೀಳು, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಧ್ಯೇಯದಡಿ ಸಾಮಾಜಿಕ ಕ್ರಾಂತಿ ಕೈಗೊಂಡಿದ್ದ ಮಾಚಿದೇವ ಶರಣರ ಕಾಯಕ ಅವಿಸ್ಮರಣೀಯ ಎಂದು ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ ಹೇಳಿದರು.
ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ,ಅಸ್ಪೃಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದಾಗ ಮಾಚಿದೇವ ಶರಣರು ಸಮಾನತೆ ತತ್ವ ಸಾರಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯ ಮಾಡಿದ್ದಾರೆ. ನಡೆ-ನುಡಿಯಲ್ಲಿ ತಪ್ಪಿದ ವ್ಯಕ್ತಿ ಎಂಥವರೇ ಆಗಿರಲಿ ಆಚರಣೆ ಪ್ರಸಂಗ ಬಂದಾಗ ದೇವರನ್ನೂ ಕೂಡಾ ಪ್ರಶ್ನಿಸುವ ಪ್ರವೃತ್ತಿ ಮಾಚಯ್ಯ ಅವರದಾಗಿತ್ತು. ನೇರ, ನಿಷ್ಠುರತೆ ಹೊಂದಿದ್ದ ಮಾಚಯ್ಯ ಶರಣರ ತತ್ವಾದರ್ಶ ಸಾರ್ವಕಾಲಿಕ ಎಂದು ಸ್ಮರಿಸಿದರು.
ನಂತರ ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ಮಾಚಯ್ಯ ಶರಣರು ಅಚಲ ಕಾಯಕ ನಿಷ್ಠರಾಗಿದ್ದವರು. ಹಿಮಾಲಯದಷ್ಟು ದೃಢನಾಗಿದ್ದ ಶರಣರ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದರು. ಮಾಚಿದೇವನ ವಿಚಾರಗಳು ನಾವೆಲ್ಲರೂ ಮೈಗೂಡಿಸಿಕೊಂಡು ಸಮಾನತೆಯ ಹರಿಕಾರರಾಗೋಣ ಎಂದು ತಿಳಿಸಿದರು.ಮಾಚಿದೇವ ವೃತ್ತವನ್ನು ಅಭಿವೃದ್ಧಿಪಡಿಸುವಂತೆ ಪಪಂ ಉಪಾಧ್ಯಕ್ಷರಿಗೆ ಸಮಾಜದಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಪಪಂ ಸದಸ್ಯ ಶೇಷಪ್ಪ ಪೂಜಾರ, ಸುರೇಶ ಗುಗ್ಗಳಶೆಟ್ರ, ಮಹಾಂತೇಶ ಸಜ್ಜನ, ಹನುಮಂತರೆಡ್ಡಿ, ನಾಗೇಶ ಬಡಿಗೇರ, ನಾಗೇಂದ್ರ ನಾಯಕ, ಗ್ರಾಮ ಆಡಳಿತ ಅಧಿಕಾರಿ ಶಿವ ಭೋವಿ, ಅಮರ ತೆಗ್ಗಿನಮನಿ, ಮಡಿವಾಳ ಸಮಾಜದ ಶರಣು ಮಡಿವಾಳ, ಕೊಟ್ರೇಶ ಅಗಸರ, ತಿಪ್ಪಣ್ಣ ಮಡಿವಾಳ, ಆನಂದ ಅಗಸರ, ಮುತ್ತುರಾಜ್, ಸಿದ್ದಲಿಂಗ ಸೇರಿದಂತೆ ಇತರರಿದ್ದರು.