ಹಾವೇರಿ: ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮಹಿಳಾ ನೌಕರರಿಗೆ ಪ್ರಾಧಾನ್ಯತೆ ದೊರೆಯದ ಕಾರಣ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ತಿತ್ವಕ್ಕೆ ತರಲಾಗಿದೆ. ರಾಜ್ಯಾದ್ಯಂತ 50 ಸಾವಿರ ಸರ್ಕಾರಿ ಮಹಿಳಾ ನೌಕರರು ಈಗಾಗಲೇ ನಮ್ಮ ಸಂಘದ ಸದಸ್ಯತ್ವ ಪಡೆದಿದ್ದಾರೆ ಎಂದು ಸಂಘದ ಅಧ್ಯಕ್ಷೆ ರೋಶನಿ ಗೌಡ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 20 ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಘಟಕಗಳು ಅಸ್ತಿತ್ವಕ್ಕೆ ಬಂದಿದ್ದು, ಹಾವೇರಿ ಜಿಲ್ಲೆಯಲ್ಲಿ ಶೀಘ್ರದಲ್ಲೇ ಸಂಘ ಕಾರ್ಯಚಟುವಟಿಕೆ ಆರಂಭಿಸಲಿದೆ. ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳು ಮತ್ತು ನಿವಾರಣೆಯ ನಿಟ್ಟಿನಲ್ಲಿ ಹೊಸ ದೃಷ್ಟಿಕೋನ ಇಟ್ಟುಕೊಂಡು ಸಂಘ ರಚಿಸಲಾಗಿದೆ ಎಂದರು.ರಾಜ್ಯದಲ್ಲಿ ಶೇ. 52ರಷ್ಟು ಮಹಿಳಾ ನೌಕರರಿದ್ದರೂ, ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಮಹಿಳೆಯರಿಗೆ ಸರಿಯಾಗಿ ಪ್ರಾತಿನಿಧ್ಯ ದೊರೆಯದ ಕಾರಣ ನಾವು ಪ್ರತ್ಯೇಕವಾಗಿ ಮಹಿಳಾ ಸಂಘ ಅಸ್ತಿತ್ವಕ್ಕೆ ತಂದಿದ್ದೇವೆ. 2023ರಲ್ಲಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ನಮ್ಮ ಸಂಘದ ವತಿಯಿಂದ ವೇತನ ಸಹಿತ ಋತುಚಕ್ರ ರಜೆ ನೀಡಲು ಹೋರಾಟ ಮಾಡಿ ಯಶಸ್ವಿಯಾಗಿದ್ದೇವೆ. ಮಹಿಳಾ ನೌಕರರ ಸಬಲೀಕರಣ, ನಾಯಕತ್ವ ಬೆಳವಣಿಗೆ, ಕಾರ್ಯಕ್ಷೇತ್ರದಲ್ಲಿ ಆಗುವ ಸಮಸ್ಯೆಗಳ ನಿವಾರಣೆ ಸೇರಿದಂತೆ ಮಹಿಳೆಯರ ಸರ್ವಾಂಗೀಣ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಸಂಘಟನೆ ಶ್ರಮಿಸುತ್ತಿದೆ. ರಾಜ್ಯ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಬೇಕು. ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿ ಮಾಡಬೇಕು. ಮಾತೃತ್ವ ರಜೆ ಒಂದು ವರ್ಷದ ವರೆಗೆ ವಿಸ್ತರಿಸಬೇಕು. ಗರ್ಭಿಣಿ ನೌಕರರಿಗೆ ವೈದ್ಯಕೀಯ ಪರೀಕ್ಷೆಗಾಗಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ಮತ್ತು ಸೆ. 13ರಂದು ಸರ್ಕಾರಿ ಮಹಿಳಾ ನೌಕರರ ದಿನ ಎಂದು ಘೋಷಿಸಬೇಕು ಎಂದೂ ಅವರು ಒತ್ತಾಯಿಸಿದರು.ಸಂಘ ಹೋರಾಟ: ಮಹಿಳೆಯರಿಗೆ ಋತುಚಕ್ರ ರಜೆ ಮಂಜೂರಾತಿಗೆ ನಮ್ಮ ನೌಕರರ ಸಂಘದ ಹೋರಾಟವಿದೆ. ಈ ಹಿಂದೆ ನಾವೆಲ್ಲ ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಪರಿಣಾಮ ಸರ್ಕಾರ ವೇತನ ಸಹಿತ ಋತುಚಕ್ರ ರಜೆ ಮಂಜೂರು ಮಾಡಿದೆ. ಅದಕ್ಕಾಗಿಯೇ ಸರ್ಕಾರಕ್ಕೆ ಬೆಂಗಳೂರಿನಲ್ಲಿ ಡಿ. 4ರಂದು ಮುಖ್ಯಮಂತ್ರಿ ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದೇವೆ. ಈ ವೇಳೆ ಸಿಎಂ ಸಿದ್ದರಾಮಯ್ಯನವರು ಸೆ. 13ರ ದಿನವನ್ನು ಮಹಿಳಾ ನೌಕರರ ದಿನವೆಂದು ಘೋಷಿಸಿದ್ದು, ಶೀಘ್ರವಾಗಿ ಅಧಿಕೃತ ಆದೇಶ ಹೊರಬರುವ ವಿಶ್ವಾಸವಿದೆ. ಇದರೊಂದಿಗೆ ಹಲವಾರು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅವುಗಳು ಈಡೇರುವ ಭರವಸೆಯಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಖಜಾಂಚಿ ವೀಣಾ ಕೃಷ್ಣಮೂರ್ತಿ, ಕಾರ್ಯದರ್ಶಿ ಎಂ. ಆಶಾರಾಣಿ, ನಿಯೋಜಿತ ಜಿಲ್ಲಾಧ್ಯಕ್ಷೆ ಶೈಲಜಾ ಕುರಹಟ್ಟಿ, ಪ್ರಧಾನ ಕಾರ್ಯದರ್ಶಿ ಶಿವಲೀಲಾ ಗಡ್ಡದ, ನಾಗರತ್ನಾ ನೀಲನಕಟ್ಟಿ, ಜಯಮ್ಮ ಅಗಡಿ, ವಿಜಯಾ ರಾವ್‌ಜಿ ಉಪಸ್ಥಿತರಿದ್ದರು.