ಹಾವೇರಿ: ಮಡಿವಾಳ ಮಾಚಿದೇವರು ಮೇಲು-ಕೀಳು ಹಾಗೂ ಮೂಢನಂಬಿಕೆಗಳನ್ನು ಧಿಕ್ಕರಿಸಿ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ಜೀವನ ಸಂದೇಶಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಹಸೀಲ್ದಾರ್ ಶರಣಮ್ಮ ಹೇಳಿದರು.ನಗರದ ಪ್ರವಾಸಿತಾಣ ಗಾಂಧಿ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಡಿವಾಳ ಮಾಚಿದೇವ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಾಚಿದೇವರು ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಲಿದೇವರದೇವ ಎಂಬ ಅಂಕಿತನಾಮದೊಂದಿಗೆ ವಚನಗಳನ್ನು ರಚಿಸಿದ ಇವರು, ಬಟ್ಟೆಯ ಮೇಲಿನ ಕೊಳೆಯನ್ನಷ್ಟೇ ಅಲ್ಲದೆ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳು ಮತ್ತು ಜನರ ಮನಸ್ಸಿನ ಮಲಿನವನ್ನು ತೊಳೆಯುವ ಕಾಯಕದಲ್ಲಿ ತೊಡಗಿದ್ದ ಮಹಾನ ವ್ಯಕ್ತಿ ಎಂದು ಬಣ್ಣಿಸಿದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ.ಹೀರೆಮಠ ಮಾತನಾಡಿ, ಮಡಿವಾಳ ಮಾಚಿದೇವರು ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಅರಿವು ಮೂಡಿಸಿದ್ದರು. ವಿದ್ಯಾರ್ಥಿಗಳು ಇವರ ತತ್ವಾದರ್ಶಗಳನ್ನು ತಿಳಿದುಕೊಳ್ಳಬೇಕು ಹಾಗೂ ಉತ್ತಮ ವಿದ್ಯಾಭ್ಯಾಸ ಹೊಂದುವ ಮೂಲಕ ಎಲ್ಲ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಮಡಿವಾಳ ಮಾಚಿದೇವರು, 346 ವಚನಗಳನ್ನು ಬರೆದಿದ್ದಾರೆ. ಮಾಚಿದೇವರು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹರಿಕಾರರು. ಅವರ ತತ್ವಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿವೆ. ಮಡಿವಾಳ ಮಾಚಿದೇವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಎಲ್ಲಾ ಜನಾಂಗದವರು ಸೇರಿ ಅವರ ಜಯಂತಿಯನ್ನು ಆಚರಿಸಬೇಕು ಎಂದು ಹೇಳಿದರು.ಚಳ್ಳಕೇರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರೊ.ಗಂಗಾನಾಯ್ಕ ಎಲ್. ಅವರು ಮಡಿವಾಳ ಮಾಚಿದೇವರ ಜೀವನದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ವೀರಯ್ಯಸ್ವಾಮಿ ಬಿ. ಹಿರೇಮಠ, ಸಮಾಜದ ಸುರೇಶ ಮಡಿವಾಳ ಇತರರಿದ್ದರು.