ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ರಾಜ್ಯದ ಎರಡನೇ ಅತಿದೊಡ್ಡ ಶಿವನ ಪ್ರತಿಮೆ ಹೊಂದಿದ ಶಿವಗಿರಿಗೆ ಬೆಳಗ್ಗೆಯಿಂದಲೇ ಭಕ್ತರು ತಂಡೋಪತಂಡವಾಗಿ ಆಗಮಿಸಿ ದರ್ಶನ ಪಡೆದರು. ನಗರದ ಉಕ್ಕಲಿ ರಸ್ತೆಯ 85 ಅಡಿ ಎತ್ತರದ ಶಿವಮಂದಿರಕ್ಕೆ ಗ್ರಾಮೀಣ ಭಾಗದ ಭಕ್ತರು, ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯಿಂದಲೂ ಭಕ್ತರು ಆಗಮಿಸಿ ಶಿವರಾತ್ರಿಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು.
ಶಿವಗಿರಿಯಲ್ಲಿ ವಿವಿಧ ಕಾರ್ಯಕ್ರಮಶಿವಗಿರಿಯಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ನಸುಕಿನ ಜಾವ 4.30ಕ್ಕೆ ಶಿವನಿಗೆ ರುದ್ರಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಪಂಚ ಕಳಸಾರ್ಚನೆ ಬಳಿಕ ಪ್ರತಿ ತಾಸಿಗೊಮ್ಮೆ ವಿಶೇಷ ಪೂಜೆಗಳು ನಡೆದವು. ಬೆಳಿಗ್ಗೆ 6.30ಕ್ಕೆ ಮಂಗಳ ವಾದ್ಯಗಳೊಂದಿಗೆ ಶಹನಾಯಿ ಕಾರ್ಯಕ್ರಮ, 7.30 ಕ್ಕೆ ಜಾತ್ರಾ ಉತ್ಸವದ ಧ್ವಜಾರೋಹಣ, ಬೆಳಿಗ್ಗೆ 8 ಗಂಟೆಗೆ ಭರತ ನಾಟ್ಯ ಹಾಗೂ ಶಿವ ತಾಂಡವ, 9ಕ್ಕೆ ಅಮ್ಮನವರ ಪೂಜೆ ನಡೆಯಿತು. ತುಳಸಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು. ಹಾಸ್ಯ ಕಾರ್ಯಕ್ರಮ, ಸ್ವರ ವೈಭವ, ಜಾನಪದ ಸಂಜೆ ಕಾರ್ಯಕ್ರಮ ಜರುಗಿದವು.
ಸುಂದರೇಶ್ವರನ ಸನ್ನಿಧಿಶಿವರಾತ್ರಿ ಹಿನ್ನೆಲೆ ನೆತ್ತಿಯ ಮೇಲೆ ಶ್ರೀಚಕ್ರ ಹೊಂದಿರುವ ಅಪರೂಪದ ಶಿವಲಿಂಗ ದರ್ಶನಕ್ಕೆ ಗಂಟೆಗಟ್ಟಲೆ ಸರತಿ ಸಾಲಲ್ಲಿ ಭಕ್ತರು ನಿಂತಿದ್ದು ಕಂಡು ಬಂದಿತು. 8ನೇ ಶತಮಾನದ ಇತಿಹಾಸ ಹೊಂದಿರುವ ಶ್ರೀಚಕ್ರ ಇರುವ ಈ ಶಿವಲಿಂಗದ ದರ್ಶನವನ್ನು ಶಿವರಾತ್ರಿಯ ದಿನ ಪಡೆದರೆ ಪುಣ್ಯ ಬರುತ್ತದೆ ಎಂಬ ನಂಬಿಕೆದೆ. ಇಂದು ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಎಲ್ಲೆಡೆ ಶಿವನಾಮಸ್ಮರಣೆನಗರದ ಶಿವನ ದೇವಸ್ಥಾನಗಳಲ್ಲಿ ಶಿವನಾಮಸ್ಮರಣೆ ಜೋರಾಗಿತ್ತು. ಲಿಂಗದಗುಡಿ ಎಂದೇ ಖ್ಯಾತಿಯ 770 ಅಮರ ಗಣಾಧೀಶ್ವರರ ಲಿಂಗದ ಗುಡಿಯಲ್ಲಿಯೂ ಸಹ ಭಕ್ತರ ದಂದು ಸೇರಿತ್ತು. 770 ಅಮರ ಗಣಾಧೀಶ್ವರರ ಲಿಂಗಗಳನ್ನು ಸುತ್ತಿ ಭಕ್ತಿಯಿಂದ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಮಹಾ ಶಿವರಾತ್ರಿ ಹಿನ್ನಲೆಯಲ್ಲಿ ದೇಗುಲಕ್ಕೆ ಬಂದ ಭಕ್ತರಿಗೆಲ್ಲ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಹಣ್ಣು ಹಂಪಲು ವಿತರಿಸಲಾಯಿತು. ಶಿವರಾತ್ರಿಯ ದಿನದಂದು ಭಕ್ತರು ಉಪವಾಸವಿರುವ ಹಿನ್ನೆಲೆ ಲಿಂಗದ ಗುಡಿಗೆ ಬಂದ ಭಕ್ತರಿಗೆಲ್ಲ ದ್ರಾಕ್ಷಿ, ಖಜೂರಿ, ಪಪ್ಪಾಯಿ, ಬಾಳೆಹಣ್ಣು ಸೇರಿ ಫಲಾಹಾರ ವಿತರಿಸಲಾಯಿತು.