ಶಿವಾನಂದ ಗೊಂಬಿ
ಹುಬ್ಬಳ್ಳಿ:ಮಹದಾಯಿ ಕಾಮಗಾರಿಗೆ ಈ ವರ್ಷವೂ ಮುಹೂರ್ತ ಕೂಡಿ ಬರಲಿಲ್ಲ. ತುಪರಿಹಳ್ಳ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಬೆಣ್ಣಿಹಳ್ಳಕ್ಕೆ ₹200 ಕೋಟಿ ಬಿಡುಗಡೆ! ಇದು ನೀರಾವರಿ ಯೋಜನೆಗಳ ವಿಷಯದಲ್ಲಿ 2024ರಲ್ಲಿ ಆದ ಕಹಿ ಮತ್ತು ಸಿಹಿ ಒಂದು ಸಾಲಿನ ವಿವರಣೆ.
ಮಹದಾಯಿ, ಕಳಸಾ-ಬಂಡೂರಿ ವಿಷಯದಲ್ಲಿ ನ್ಯಾಯಾಧಿಕರಣದಿಂದ ತೀರ್ಪು ಬಂದು ಬರೋಬ್ಬರಿ 6 ವರ್ಷ ಆಗಿದೆ. ಆದರೆ, ಈ ವರೆಗೂ ಕಾಮಗಾರಿ ಮಾತ್ರ ಶುರುವಾಗುತ್ತಿಲ್ಲ. ನಮ್ಮ ಪಾಲಿನ ನೀರು ಬಳಕೆ ಮಾಡಲು ಆಗುತ್ತಿಲ್ಲ. ಮಹದಾಯಿ ವಿಷಯವಾಗಿ ಇದೀಗ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಗಬೇಕಿದೆ. ಈ ವಿಷಯವಾಗಿ ಈ ವರ್ಷವೂ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಹಗ್ಗ-ಜಗ್ಗಾಟ ನಡೆದಿದೆ; ನಡೆಯುತ್ತಲೇ ಇದೆ. ಸದನದಲ್ಲೂ ಮಹದಾಯಿ ಬರೀ ಚರ್ಚೆಗೆ ಮಾತ್ರ ಸೀಮಿತವಾಗಿದೆ.ಈ ನಡುವೆ ಅತ್ತ ನವಲಗುಂದ ಹಾಗೂ ನರಗುಂದಗಳಲ್ಲಿ ಕಳೆದ ಎಂಟು ವರ್ಷಗಳಿಂದಲೂ ಧರಣಿ ಮಾತ್ರ ನಿಂತಿಲ್ಲ. ಆಡಳಿತ ನಡೆಸುವ ಪಕ್ಷಗಳಿಗೆ ಮಹದಾಯಿ ವಿಷಯದಲ್ಲಿ ರಾಜಕಾರಣ ಮಾಡುವುದು ಬಿಟ್ಟು, ಹೋರಾಟಗಾರರ ಕೂಗು ಮಾತ್ರ ಕೇಳುತ್ತಲೇ ಇಲ್ಲ. ಹೀಗಾಗಿ 2024ರಲ್ಲೂ ಕಾಮಗಾರಿಗೆ ಚಾಲನೆ ಸಿಗಲೇ ಇಲ್ಲ.
ಬೆಣ್ಣಿಹಳ್ಳಕ್ಕೆ ₹ 200 ಕೋಟಿ:ಬೆಣ್ಣಿಹಳ್ಳ ವಿಷಯದಲ್ಲಿ ಸಿಹಿಯನ್ನುಂಟು ಮಾಡಿರುವ ವರ್ಷವಿದು. ಬೆಣ್ಣಿಹಳ್ಳ ಧಾರವಾಡ, ನವಲಗುಂದ, ಹುಬ್ಬಳ್ಳಿ, ಕುಂದಗೋಳ, ರೋಣ, ಸೇರಿದಂತೆ 6 ತಾಲೂಕುಗಳನ್ನು ಪ್ರತಿವರ್ಷ ಅಕ್ಷರಶಃ ನಲುಗಿಸುತ್ತದೆ. ಈ ಬೆಣ್ಣಿಹಳ್ಳದ ಶಾಶ್ವತ ಯೋಜನೆಗೆ ಇದೀಗ ಮಹೂರ್ತ ಕೂಡಿಬಂದಿದೆ. ಇದಕ್ಕೆ ಸರ್ಕಾರ ₹ 200 ಕೋಟಿ ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ವರ್ಷ ಕಾಮಗಾರಿ ಶುರುವಾಗದಿದ್ದರೂ ಕಾಮಗಾರಿಗೆ ಹಸಿರು ನಿಶಾನೆಯಾದರೂ ಸಿಕ್ಕಿತಲ್ಲ ಎಂದು ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. 2025ರ ವರ್ಷಾರಂಭದಲ್ಲೇ ಕಾಮಗಾರಿ ಶುರುವಾಗಲಿ ಎಂಬುದು ಹೋರಾಟಗಾರರ ಆಶಯ.
ತುಪರಿಹಳ್ಳದ ಕಾಮಗಾರಿ ಆಮೆಗತಿ:ಇನ್ನು ಈ ಭಾಗದಲ್ಲಿ ಜನರನ್ನು ಹೈರಾಣು ಮಾಡುವ ಮತ್ತೊಂದು ಹಳ್ಳವೆಂದರೆ ತುಪರಿಹಳ್ಳ. ಈ ಹಳ್ಳದ ಪ್ರವಾಹ ತಡೆಯಲು ಹಿಂದಿನ ಬಿಜೆಪಿ ಸರ್ಕಾರವೇ ಹಸಿರು ನಿಶಾನೆ ತೋರಿಸಿತ್ತು. ₹ 312 ಕೋಟಿ ಯೋಜನೆಗೂ ಚಾಲನೆ ನೀಡಿತ್ತು. ಅದರಲ್ಲಿ ₹ 150 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿಯೇನೋ ನಡೆಯುತ್ತಿದೆ. ಆದರೆ ಯೋಜನೆ ಬಗ್ಗೆ ನಿರ್ಲಕ್ಷ್ಯದಿಂದಲೇನೋ ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿದೆ. ಇನ್ನು ಮೊದಲನೆಯ ಹಂತವೇ ಮುಗಿಯದಿದ್ದರೆ ಎರಡನೆಯ ಹಂತದ ಹಣ ಬಿಡುಗಡೆಯಾಗುವುದು ಎಂದು? ಕಾಮಗಾರಿ ಕೈಗೊಳ್ಳುವುದು ಯಾವಾಗ? ಎಂಬುದು ಜನರ ಪ್ರಶ್ನೆ.
ಇನ್ನುಳಿದಂತೆ ಹುಬ್ಬಳ್ಳಿ-ಧಾರವಾಡದಲ್ಲಿನ ನಿರಂತರ ನೀರು ಯೋಜನೆ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ.ನಿಲ್ಲದ ಪೌರಕಾರ್ಮಿಕರ ಪ್ರತಿಭಟನೆ2024ನ್ನು ಪೌರಕಾರ್ಮಿಕರು ಪ್ರತಿಭಟನೆಯಿಂದಲೇ ಸ್ವಾಗತಿಸಿದ್ದರು. ಇದೀಗ 2025ನ್ನು ಪ್ರತಿಭಟನೆಯಿಂದಲೇ ಸ್ವಾಗತಿಸುತ್ತಿದ್ದಾರೆ. ಪಾಲಿಕೆಯಲ್ಲಿ ನೇರ ವೇತನ ಪಾವತಿ ಹಾಗೂ ನೇರ ನೇಮಕಾತಿಯಡಿ ತೆಗೆದುಕೊಳ್ಳಿ ಎಂದು ಜನವರಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಜತೆಗೆ ಪ್ರತಿ ಎರಡು ತಿಂಗಳಿಗೊಮ್ಮೆ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ. ಆದರೆ ಇವರ ಬೇಡಿಕೆ ಮಾತ್ರ ಈ ವರೆಗೂ ಈಡೇರುತ್ತಿಲ್ಲ. ಹೀಗಾಗಿ ಈಗಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಪೌರಕಾರ್ಮಿಕರು ವಿವಿಧ ಬಗೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದೀಗ 2025ನ್ನು ಪ್ರತಿಭಟನೆ ಮೂಲಕವೇ ಸ್ವಾಗತಿಸಲು ಸಜ್ಜಾಗಿದ್ದಾರೆ.