ಕನ್ನಡಪ್ರಭ ವಾರ್ತೆ ನಂಜನಗೂಡುಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ. ಆರ್. ಧ್ರುವನಾರಾಯಣ್ ಅವರ ಹುಟ್ಟುಹಬ್ಬದ ಸ್ಮರಣಾರ್ಥ ಅವರ ಅಭಿಮಾನಿ ಬಳಗದ ವತಿಯಿಂದ ಜು. 31 ರಂದು ಪಟ್ಟಣದ ಮಂಗಳ ಮಂಟಪದಲ್ಲಿ ಬೆಳಗ್ಗೆ 9.30 ರಿಂದ 5 ರವರೆಗೆ ಬೃಹತ್ ಉದ್ಯೋಗ ಮೇಳ ಹಾಗೂ ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಆರೋಗ್ಯ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹೇಳಿದರು.ಆರ್. ಧ್ರುವನಾರಾಯನ್ ಅವರು ಈ ಭಾಗದಲ್ಲಿ 2 ಅವಧಿಗೆ ಸಂಸದರಾಗಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಜೊತೆಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕವನ್ನು ಹೊಂದುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಆದ್ದರಿಂದಲೇ ಅವರಿಗೆ ಈ ಕ್ಷೇತ್ರದ ಜನರಿಗೆ ಸೇವೆ ಒದಗಿಸುವ ಹಂಬಲದೊಂದಿಗೆ ಚುನಾವಣೆಗೂ ತಯಾರಿ ನಡೆಸಿದ್ದರು. ಅಲ್ಲದೆ ಧ್ರುವನಾರಾಯಣ್ ಅವರು ಎಂದೂ ಕೂಡ ಆಡಂಬರವಾಗಿ ಹುಟ್ಟುಹಬ್ಬವನ್ನು ಆಚರೆಣೆ ನಡೆಸುತ್ತಿರಲಿಲ್ಲ, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕವೇ ಆಚರಣೆ ನಡೆಸುತ್ತಿದ್ದರು. ಮುಖ್ಯವಾಗಿ ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವುದು ಅವರ ಮುಖ್ಯ ಗುರಿಯಾಗಿತ್ತು. ಆದ್ದರಿಂದಲೇ ಅವರು 2022ರಲ್ಲಿ ಹುಟ್ಟುಹಬ್ಬ ಆಚರಣೆ ನಡೆಸಿದ ವೇಲೆ ರಕ್ತದಾನ ಶಿಬಿರ, ಉದ್ಯೋಗಮೇಳವನ್ನು ಆಯೋಜನೆ ಮಾಡಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಕಳೆದ ವರ್ಷ ಅವರು ನಮ್ಮನ್ನು ಅಗಲಿದ ಮೇಲೆಯೂ ಕೂಡ ಆ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದು. ಕಳೆದ ಬಾರಿ 2023ರಲ್ಲಿ ಕೂಡ ರಕ್ತದಾನ ಶಿಬಿರ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಉದ್ಯೋಗ ಮೇಳದಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಸುಮಾರು 517 ಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ಲಭಿಸಿದೆ.ಈ ಬಾರಿಯೂ ಕೂಡ ನೆಸ್ಲೆ, ಜುಬಿಲೆಂಟ್, ಏಷಿಯನ್ ಪೈಂಟ್ಸ್, ಆಟೋಲಿವ್, ಯುಬಿ ಸೇರಿದಂತೆ ಸ್ಥಳೀಯ ಕಾರ್ಖಾನೆಗಳೂ ಸೇರಿದಂತೆ ಸುಮಾರು 125ಕ್ಕೂ ಹೆಚ್ಚು ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಸ್ಥಳದಲ್ಲಿ ಖುದ್ದಾಗಿ ಹಾಜರಿದ್ದು, ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಸ್ಥಳದಲ್ಲೇ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಪದವೀಧರರು ಮತ್ತು ಯುವಕರು, ಉದ್ಯೋಗದ ಆಕಾಂಕ್ಷಿಗಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಉದ್ಯೋಗ ಮೇಳದ ಆಯೋಜಕರಾದ ಪ್ರಕೃತ್ ಮಾತನಾಡಿ, ಉದ್ಯೋಗ ಮೇಳಕ್ಕೆ ಚಾಮರಾಜನಗರದ 7 ಕಾರ್ಖಾನೆಗಳು, ನಂಜನಗೂಡು, ತಾಂಡ್ಯ, ಅಡಕನಹಳ್ಳಿಹುಂಡಿ ಕೈಗಾರಿಕಾ ಪ್ರದೇಶದಲ್ಲಿರುವ ಸ್ಥಳೀಯ ಕಾರ್ಖಾನೆಗಳು ಮತ್ತು ನೂರಾರು ಎಂ.ಎನ್.ಸಿ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವುದಾಗಿ ನೊಂದಾವಣಿ ಮಾಡಿಕೊಂಡಿವೆ. ಐಟಿಐ, ಡಿಪ್ಲೋಮೋ, ಎಂಜಿನಿಯರಿಂಗ್ ಅಲ್ಲದೆ ಎಸ್ಸೆಸ್ಸೆಲ್ಸಿಯಿಂದ ಯಾವುದೇ ಪದವಿ ಮಾಡಿರುವ ಉದ್ಯೋಗಾಂಕ್ಷಿಗಳಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಲಭಿಸಲಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಮುಖಂಡರಾದ ಮಹೇಂದ್ರ, ಲೋಕೇಶ್ ಇದ್ದರು.