ಭೋಗನಂದಿಗೆ ಪೂಜೆ ಸಲ್ಲಿಸಿ ಸಹಸ್ರಾರು ಜನ ನಂದಿಗಿರಿ ಪ್ರದಕ್ಷಿಣೆ

KannadaprabhaNewsNetwork | Published : Jul 30, 2024 12:34 AM

ಸಾರಾಂಶ

ದೊಡ್ಡಬಳ್ಳಾಪುರ: ಆಷಾಢ ಮಾಸದ ಆಹ್ಲಾದಕರ ವಾತಾವರಣವನ್ನು ಆಸ್ವಾದಿಸುವ ಮನಸ್ಸುಗಳು ಧಾರ್ಮಿಕ ಚಿಂತನೆಯ ಲೇಪ ಹಚ್ಚಿಕೊಂಡು ರೂಪಿಸಿರುವ ನಂದಿಗಿರಿ ಪ್ರದಕ್ಷಿಣೆಗೆ ಈ ಬಾರಿ 84ನೇ ವರ್ಷದ ಸಂಭ್ರಮ. ಅಲ್ಪ ಮೋಡ ಮುಸುಕಿದ ಆಗಸ, ಚುಮುಚುಮು ಚಳಿ, ಆಗಾಗ್ಗೆ ಬೀಳುತ್ತಿದ್ದ ತುಂತುರು ಮಳೆಯ ನಡುವೆ ಪ್ರತಿವರ್ಷದಂತೆ ಈ ಬಾರಿಯೂ ಆಷಾಢ ಮಾಸದ ಕೊನೆಯ ಸೋಮವಾರದಂದು ನಂದಿಗಿರಿ ಪ್ರದಕ್ಷಿಣಾ ಕಾರ್ಯಕ್ರಮ ನಡೆಯಿತು.

ದೊಡ್ಡಬಳ್ಳಾಪುರ: ಆಷಾಢ ಮಾಸದ ಆಹ್ಲಾದಕರ ವಾತಾವರಣವನ್ನು ಆಸ್ವಾದಿಸುವ ಮನಸ್ಸುಗಳು ಧಾರ್ಮಿಕ ಚಿಂತನೆಯ ಲೇಪ ಹಚ್ಚಿಕೊಂಡು ರೂಪಿಸಿರುವ ನಂದಿಗಿರಿ ಪ್ರದಕ್ಷಿಣೆಗೆ ಈ ಬಾರಿ 84ನೇ ವರ್ಷದ ಸಂಭ್ರಮ. ಅಲ್ಪ ಮೋಡ ಮುಸುಕಿದ ಆಗಸ, ಚುಮುಚುಮು ಚಳಿ, ಆಗಾಗ್ಗೆ ಬೀಳುತ್ತಿದ್ದ ತುಂತುರು ಮಳೆಯ ನಡುವೆ ಪ್ರತಿವರ್ಷದಂತೆ ಈ ಬಾರಿಯೂ ಆಷಾಢ ಮಾಸದ ಕೊನೆಯ ಸೋಮವಾರದಂದು ನಂದಿಗಿರಿ ಪ್ರದಕ್ಷಿಣಾ ಕಾರ್ಯಕ್ರಮ ನಡೆಯಿತು.

ದೊಡ್ಡಬಳ್ಳಾಪುರದ ನಂದಿಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಬೆಳಗ್ಗೆ 6.30ಕ್ಕೆ ಗಂಟೆಗೆ ನಂದಿ ಗ್ರಾಮದ ಶ್ರೀಭೋಗ ನಂದೀಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಧಾರ್ಮಿಕತೆಯ ನಂಟಿನೊಂದಿಗೆ ನಡೆದ ಈ ಪಾದಯಾತ್ರೆಯಲ್ಲಿ ದೊಡ್ಡಬಳ್ಳಾಪುರದ ಭಜನಾ ಮಂಡಳಿಗಳ ಭಜನೆ ಹಾಡುಗಳಿಗೆ ಹೆಜ್ಜೆ ಹಾಕಿದ ಸಹಸ್ರಾರು ಭಕ್ತರು ಕೈಲಾಸ ಪರ್ವತವನ್ನು ಸುತ್ತಿದಂತಹ ಅನುಭವ ಪಡೆದರು. ಇದರೊಂದಿಗೆ ಹಲವರು ಕಾಲ್ನಡಿಗೆ ಉದ್ದೇಶದಿಂದ ಲೋಕಾಭಿರಾಮವಾಗಿ ಮಾತನಾಡುತ್ತಾ ಭಾಗವಹಿಸಿದ್ದುದು ವಿಶೇಷವಾಗಿತ್ತು. ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ವಿವಿಧೆಡೆಗಳಿಂದ ಆಗಮಿಸಿದ ಜನರು ಪಾಲ್ಗೊಂಡಿದ್ದರು.

ದೊಡ್ಡಬಳ್ಳಾಪುರದ ಭಜನಾ ತಂಡಗಳೊಂದಿಗೆ ಭಕ್ತಾದಿಗಳು ಭಜನೆಗೆ ತಾಳ ಹಾಕುತ್ತಾ ಪ್ರದಕ್ಷಿಣೆ ಆರಂಭಿಸಿದರು. ನಂತರ ಅಬಾಲವೃದ್ಧರಾದಿಯಾಗಿ ಜೊತೆಗೂಡಿದರು. ನಂದಿ ಗ್ರಾಮದಿಂದ ಆರಂಭವಾದ ಪ್ರದಕ್ಷಿಣೆಯ ತಂಡಗಳು ನಂತರ ಕುಡುಮಗೆರೆ ಕ್ರಾಸ್, ಕಾರಹಳ್ಳಿ, ಕಣಿವೇಪುರ, ನಂದಿ ಕ್ರಾಸ್, ಹೆಗ್ಗಡಿಹಳ್ಳಿ ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮಾರ್ಗವಾಗಿ ನಂದಿ ಬೆಟ್ಟದ ಸುತ್ತಲಿನ ಸುಮಾರು 16 ಕಿ.ಮೀ.ದೂರವನ್ನು ಕಾಲ್ನಡಿಗೆ ಮೂಲಕ ದೇವಾಲಯ ತಲುಪಿದವು.

ಬೆಳಗ್ಗೆ ಇಲ್ಲಿನ ನಂದಿ ಬೆಟ್ಟದ ಕ್ರಾಸ್ ಬಳಿ ಉಪಾಹಾರ ಹಾಗೂ ಪೂರ್ಣ ಪ್ರದಕ್ಷಿಣೆ ಆದ ನಂತರ ಸಮಿತಿಯಿಂದ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿತ್ತು. ವಾಕಿಂಗ್ ಸಂಸ್ಕೃತಿಗೆ ಪ್ರಚೋದನೆ:

ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಅತ್ಯುತ್ತಮವಾದದ್ದು ಎಂದು ಹಲವಾರು ಸಮೀಕ್ಷೆಗಳಿಂದ ಮಾತ್ರವಲ್ಲದೆ ಜನರು ಕಂಡುಕೊಂಡಿರುವ ಸತ್ಯವಾಗಿದೆ. ದೇವರ ಭಕ್ತಿಯ ಕಾರಣವಾದರೂ ಪಂಚಗಿರಿಗಳ ರಮಣೀಯ ಸೌಂದರ್ಯವನ್ನು ಸವಿಯುತ್ತ ಒಂದಷ್ಟು ವಾಕಿಂಗ್ ಮಾಡುವುದರಿಂದ ಮೈಮನಸ್ಸುಗಳ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೇ, ಪಂಚಗಿರಿಗಳಲ್ಲಿ ವಿಶಿಷ್ಟವಾದ ಗಿಡಮೂಲಿಕೆಗಳಿದ್ದು, ಅದರಿಂದ ಬೀಸಿಬರುವ ಗಾಳಿ ಸೇವಿಸುವುದರಿಂದ ರೋಗಿಗಳಿಗೂ ಹೊಸ ಚೈತನ್ಯ ಬರುತ್ತದೆ ಎಂದು ಜನ ನಂಬುತ್ತಾರೆ.

ವಾಸ್ತವದಲ್ಲಿ ನಂದಿಗಿರಿ ಪ್ರದಕ್ಷಿಣೆಯು ನಂದಿಗಿರಿ ಮತ್ತು ಬ್ರಹ್ಮಗಿರಿ ಎರಡೂ ಬೆಟ್ಟಗಳನ್ನು ಸುತ್ತುವುದಾಗಿದೆ. ಸುತ್ತುವ ಮಾರ್ಗದಲ್ಲಿ ಪಂಚಗಿರಿಯ ಇನ್ನುಳಿದ ಬೆಟ್ಟಗಳಾದ ದಿಬ್ಬಗಿರಿ, ಚೆನ್ನಗಿರಿ ಮತ್ತು ಸ್ಕಂದಗಿರಿಗಳ ಸುಂದರ ದರ್ಶನ ಪಡೆಯಬಹುದಾಗಿದೆ. ಅಧ್ಯಾತ್ಮಿಕ ಮತ್ತು ಆರೋಗ್ಯ ಉದ್ದೇಶವನ್ನಿಟ್ಟುಕೊಂಡಿರುವ ಈ ಯಾತ್ರೆ ಪಂಚಗಿರಿಗಳ ರಮಣೀಯ ಪ್ರಕೃತಿ ಸೌಂದರ್ಯವನ್ನು ಉಣಬಡಿಸುವುದಲ್ಲದೆ, ಜನರ ನಡುವೆ ಸಂಬಂಧಗಳ ಬೆಸೆಯುವ ಸಾಮಾಜಿಕ ಕಾರ್ಯವಾಗಿಯೂ ಕೆಲಸ ಮಾಡುತ್ತಿದೆ.

29ಕೆಡಿಬಿಪಿ2- ದೊಡ್ಡಬಳ್ಳಾಪುರದ ನಂದಿ ಗಿರಿ ಪ್ರದಕ್ಷಿಣೆ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಜನರು ಪಾದಯಾತ್ರೆ ಮೂಲಕ ನಂದಿ ಬೆಟ್ಟವನ್ನು ಪ್ರದಕ್ಷಿಣೆ ಮಾಡಿದರು.

Share this article