ಹುಲಿ, ಚಿರತೆ ಹೆಚ್ಚಿದಂತೆ ಸಂಘರ್ಷವೂ ಹೆಚ್ಚುತ್ತಿದೆ

KannadaprabhaNewsNetwork |  
Published : Jul 30, 2024, 12:34 AM ISTUpdated : Jul 30, 2024, 12:35 AM IST
1 | Kannada Prabha

ಸಾರಾಂಶ

ದೇಶದಲ್ಲಿ ಹುಲಿ ಸಂಖ್ಯೆಯಲ್ಲಿ ಸುಧಾರಣೆ ಆದರೂ ಹುಲಿ ಸೇರಿದಂತೆ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸವಾಲಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಹುಲಿ, ಚಿರತೆ ಹೆಚ್ಚಾದಂತೆ ಮಾನವರ ಜತೆ ಸಂಘರ್ಷವೂ ಹೆಚ್ಚಾಗಿದೆ ಎಂದು ವನ್ಯಜೀವಿ ವಿಭಾಗದ ಪಿಸಿಸಿಎಫ್ ಸುಭಾಷ್‌ ಕೆ. ಮಲ್ಖೆಡೆ ಅಭಿಪ್ರಾಯಪಟ್ಟರು.

ವಿಶ್ವ ಹುಲಿ ದಿನದ ಅಂಗವಾಗಿ ಮೈಸೂರಿನ ಮೃಗಾಲಯ ಸಭಾಂಗಣದಲ್ಲಿ ರೋರಿಂಗ್ ಫಾರ್ವರ್ಡ್: ಎಫೆಕ್ಟಿವ್ ಆಕ್ಷನ್ಸ್ ಫಾರ್ ಬಿಗ್ ಕ್ಯಾಟ್ ಕನ್ಸರ್ವೇಶನ್ ಕುರಿತು ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಹುಲಿ ಸಂಖ್ಯೆಯಲ್ಲಿ ಸುಧಾರಣೆ ಆದರೂ ಹುಲಿ ಸೇರಿದಂತೆ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸವಾಲಾಗಿದೆ. ಅನೇಕ ಕಾರಣದಿಂದ ಅಳವಿನಂಚಿಗೆ ದೂಡಲ್ಪಟ್ಟಿದ್ದ ಹುಲಿಗಳ ಸಂತತಿ ಕೆಲ ವರ್ಷಗಳಿಂದ ಸುಧಾರಿಸಿದೆ. ಅದರಲ್ಲೂ ಕಳೆದ ನಾಲ್ಕೈದು ಗಣತಿ ವೇಳೆ ಹುಲಿಗಳ ಸಂಖ್ಯೆ ಹೆಚ್ಚಿರುವುದು ಕಂಡು ಬಂದಿದೆ. ಆದರೂ, ಹುಲಿಗಳ ಸಂರಕ್ಷಣೆಗೆ ಸವಾಲಾಗಿ ಪರಿಣಮಿಸುತ್ತಿದೆ ಎಂದರು.

ದೊಡ್ಡಬೆಕ್ಕುಗಳ ಪಟ್ಟಿಯಲ್ಲಿ ಹುಲಿಯ ಜತೆ ಚಿರತೆಯೂ ಸೇರಿದೆ. ಇತ್ತೀಚೆಗೆ ಚಿರತೆಗಳು ಎಲ್ಲೆಡೆ ಕಂಡು ಬರುತ್ತಿವೆ. ಹುಲಿ, ಚಿರತೆ ಸಂಖ್ಯೆ ಹೆಚ್ಚಳವೂ ಅನೇಕ ಸವಾಲನ್ನು ಸೃಷ್ಟಿಸಿದೆ. ಕೆಲವೆಡೆ ದೊಡ್ಡಬೆಕ್ಕುಗಳ ಸಂಖ್ಯೆ ಹೆಚ್ಚಳದಿಂದಾಗಿ ಮಾನವ ಪ್ರಾಣಿ ಸಂಘರ್ಷ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ. ಪ್ರಸ್ತುತ ಮೈಸೂರು, ಮಂಡ್ಯ, ಬೆಂಗಳೂರು, ತುಮಕೂರು, ಕೋಲಾರ ಮತ್ತು ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ (ಚಿರತೆ) ಮಾನವ-ಪ್ರಾಣಿ ಸಂಘರ್ಷದ ಘಟನೆ ಹೆಚ್ಚಾಗಿವೆ. ಈ ಬೆಳವಣಿಗೂ ಅರಣ್ಯ ಇಲಾಖೆಗೆ ಸವಾಲಾಗಿದೆ ಎಂದು ತಿಳಿಸಿದರು.

ಹುಲಿಗಳ ಸಂಖ್ಯೆ ಹೆಚ್ಚಾಗಿರುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಮೈಸೂರಿನ ಹೊರ ವಲಯದಲ್ಲಿ ಮೂರ್ನಾಲ್ಕು ಹುಲಿಗಳು ಸಂಚರಿಸುತ್ತಿರುವುದನ್ನು ಗಮನಿಸಿದ್ದೇವೆ. ಆ ಹುಲಿಗಳ ಚಲನವಲನವನ್ನು ಅರಣ್ಯ ಇಲಾಖೆ ಗುರುತಿಸಿದೆ.

ಇತ್ತೀಚೆಗೆ ಮೈಸೂರು- ನಂಜನಗೂಡು ಮುಖ್ಯ ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿ ಒಂದು ಹುಲಿ ಮೃತಪಟ್ಟಿತ್ತು. ಇದೀಗ ಆ ನಾಲ್ಕು ಹುಲಿಗಳಲ್ಲಿ ಮೈಸೂರು ಹೊರವಲಯ ಒಂದು ಹಾಗೂ ಶ್ರೀರಂಗಪಟ್ಟಣ ಬಳಿ ಒಂದು ಕಾಣಿಸಿಕೊಂಡಿದೆ. ಅವುಗಳ ಚಲನವಲನದ ಮೇಲೂ ನಿಗಾ ಇಟ್ಟು ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಒಳಪಟ್ಟ ಪ್ರಾಣಿಗಳನ್ನು ರಕ್ಷಿಸಿದಾಗ ಅವುಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸುವ ಪ್ರಕ್ರಿಯೆ ಬಗ್ಗೆಯೂ ಚರ್ಚೆ ನಡೆಯುತ್ತಿರುತ್ತದೆ. ಉದಾಹರಣೆಗೆ ನಗರ ಪ್ರದೇಶದಲ್ಲಿ ಸೆರೆ ಹಿಡಿದ ಚಿರತೆಯನ್ನು ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡುವುದರಿಂದಲೂ ಕೆಲ ಸಮಸ್ಯೆ ಸೃಷ್ಟಿ ಆಗಬಹುದು. ಈ ಹಿನ್ನೆಲೆಯಲ್ಲಿ ರಕ್ಷಿಸಲ್ಪಟ್ಟ ಪ್ರಾಣಿಗಳ ಸ್ಥಳಾಂತರ, ರಕ್ಷಣಾ ಕಾರ್ಯದಲ್ಲಿ ಅನುಸರಿಸಬೇಕಾದ ಕ್ರಮ ಕುರಿತಂತೆ ಹಾಗೂ ಪ್ರಾಣಿಗಳ ಸ್ಥಳಾಂತರದ ವಿಷಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 11ರಲ್ಲಿ ಮಾಡಬೇಕಾದ ತಿದ್ದುಪಡಿ ಅಥವಾ ಸೇರಿಸಬೇಕಾದ ವಿಷಯದ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಂಗವಾಗಿ ಡೆಹ್ರಾಡೂನ್ ನ ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ವಿಜ್ಞಾನಿ ಡಾ. ಖಮರ್ ಖುರೇಷಿ ಪ್ರಾತ್ಯಕ್ಷಿಕೆ ಮೂಲಕ ವಿಷಯ ಮಂಡಿಸಿದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ಸುನಿಲ್ ಪನ್ವಾರ್ ಮಾತನಾಡಿ, ವಿಚಾರ ಸಂಕಿರಣವು ಮಾನವ - ಪ್ರಾಣಿ ಸಂಘರ್ಷ ತಡೆ, ಕಾರ್ಯಾಚರಣೆಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಕ್ರಮ, ಪರಿಸರ ನಿರ್ವಹಣೆ ಮತ್ತು ದೊಡ್ಡ ಬೆಕ್ಕು ಸಂರಕ್ಷಣೆ ಕುರಿತಂತೆ ಮಹತ್ವ ಪಡೆದುಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್ ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ