ಮಹದೇವಸ್ವಾಮಿಗೆ ಉತ್ತಮ ರೈತ ಪ್ರಶಸ್ತಿ ಗೌರವ

KannadaprabhaNewsNetwork | Published : Sep 10, 2024 1:32 AM

ಸಾರಾಂಶ

ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದ ರೈತ ಪಿ. ಮಹದೇವಸ್ವಾಮಿ ಅವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಮಟ್ಟದ ಉತ್ತಮ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಯಳಂದೂರು

ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದ ರೈತ ಪಿ. ಮಹದೇವಸ್ವಾಮಿ ಅವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಮಟ್ಟದ ಉತ್ತಮ ರೈತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜಿಲ್ಲೆಯಲ್ಲೇ ಪ್ರಥಮವಾಗಿ ಇವರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಅಭಿವೃದ್ಧಿಪಡಿಸಿರುವ ತಳಿಯ ಬೆಳೆಗಳನ್ನು ಬೆಳೆದು ಪ್ರಥಮ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2016ರಿಂದಲೂ ಈ ತಳಿಯನ್ನು ಇವರು ಬೆಳೆಯುತ್ತಿದ್ದಾರೆ. ಆರಕ ಎಬಿಸಿಡಿ ತಳಿಯ ಟೊಮೆಟೊ, ಆರಕ ಪ್ರಜ್ವಲ್, ಆರಕ ನಿರಂತರ ತಳಿಯ ಸುಗಂಧರಾಜ ಹೂವಿನ ವ್ಯವಸಾಯ ಮಾಡುತ್ತಿದ್ದಾರೆ.

ಸಾವಯವ ಗೊಬ್ಬರವೇ ಜೀವಾಳ:

ಮಹದೇವಸ್ವಾಮಿ ಒಟ್ಟು ತಮ್ಮ 10 ಎಕರೆ ಕೃಷಿ ಜಮೀನಿನಲ್ಲಿ 4.5 ಎಕರೆ ಜಮೀನಿನಲ್ಲಿ ಐಐಎಚ್‌ಆರ್ ಸಂಸ್ಥೆಯವರು ನೀಡಿದ್ದ ಸುಗಂಧರಾಜ ಹೂವು ಹಾಗೂ ಟೊಮೆಟೊ ಬೀಜಗಳನ್ನು ಬಳಸಿ ಉತ್ತಮ ಬೆಳೆಯನ್ನು ಬೆಳೆದಿದ್ದಾರೆ. ಆದರೆ ಇದಕ್ಕೆ ಇದುವರೆವಿಗೂ ರಾಸಾಯನಿಕ ಗೊಬ್ಬರವನ್ನು ಬಳಸಿಲ್ಲ. ಇದಕ್ಕೆ ಸಾವಯವ ಗೊಬ್ಬರವನ್ನೇ ಹಾಕಿ ಬೆಳೆದಿದ್ದಾರೆ. ಇವರು ಬೆಳೆಯುವ ಹೂವು ತರಕಾರಿಗೆ ತುಂಬಾ ಬೇಡಿಕೆ ಇದೆ. ಇವರು ತಮ್ಮ ಬೆಳೆಗಳಿಗೆ ಎರೆಹುಳು ಗೊಬ್ಬರ, ಪಂಚಗವ್ಯ, ಜೀವಾಮೃತವನ್ನು ಬಳಸಿಕೊಳ್ಳುತ್ತಾರೆ. ಇದನ್ನು ನಿಗದಿತ ಸಮಯಕ್ಕೆ ಗಿಡಕ್ಕೆ ನೀಡಿ ಗಿಡದ ಪೋಷಕಾಂಶಗಳನ್ನು ಕಾಯ್ದಿರಿಸಿದರೆ ಉತ್ತಮ ಇಳುವರಿ ಬರುತ್ತದೆ ಎಂಬುದು ಇವರ ಅನುಭವದ ನುಡಿ. ಇದರೊಂದಿಗೆ ಅಡಕೆ, ತೆಂಗು, ಕಬ್ಬು, ಅರಿಶಿನ ಸೇರಿದಂತೆ ಮಿಶ್ರ ಬೇಸಾಯ ಪದ್ಧತಿಯನ್ನು ಬಳಸಿಕೊಂಡು ವ್ಯವಸಾಯ ಮಾಡಿ ಲಾಭಗಳಿಸುತ್ತಿದ್ದಾರೆ.

ಇವರಿಗೆ ಈಚೆಗೆ ಬೆಂಗಳೂರಿನ ಐಐಎಚ್‌ಆರ್ ಸಂಸ್ಥೆಯ ಉನ್ನತ ತರಬೇತಿ ಕೇಂದ್ರಿಯ ಭವನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಸಂಸ್ಥೆಯ ಕೃಷಿ ಶಿಕ್ಷಣದ ಉಪ ನಿರ್ದೇಶಕ ಡಾ.ಆರ್.ಸಿ.ಅಗ್ರರ್‌ವಾಲ್, ತೋಟಗಾರಿಕಾ ವಿಜ್ಞಾನದ ಉಪ ಮಹಾನಿರ್ದೇಶಕ ಡಾ.ಸಂಜಯ್‌ಕುಮಾರ್ ಸಿಂಗ್, ಕೃಷಿ ಆಯುಕ್ತ ವೈ.ಎಸ್.ಪಟೀಲ್, ನಿರ್ದೇಶಕ ಡಾ.ತುಷಾರ್ ಕಾಂತಿ ಬೆಹ್ರಾ ನೀಡಿ ಗೌರವಿಸಿದರು.

ವಿಜ್ಞಾನಿಗಳಾದ ಡಾ. ಸುಮಂಗಲಾ, ಡಾ.ಉಷಾ ಭಾರತಿ, ಡಾ.ಸೆಂಥಿಲ್‌ಕುಮಾರ್, ಡಾ.ವಿ.ಶಂಕರ್ ಕರುಣಾ ಟ್ರಸ್ಟ್‌ನ ಕಾರ್ಯದರ್ಶಿ ವೆಂಕಟನಾರಾಯಣ, ಕಾರ್ಯಕ್ರಮದ ಸಂಯೋಜಕ ಪುಟ್ಟರಂಗೇಗೌಡ, ಅನೇಕರು ಇದ್ದರು.

Share this article