ರಂಗೂಪುರ ಶಿವಕುಮಾರ್
ಕ್ಷೇತ್ರದ ಅಮ್ಮಾ ಎಂದೇ ಹೆಸರಾದ ಮಾಜಿ ಸ್ಪೀಕರ್ ಕೆ.ಎಸ್.ನಾಗರತ್ನಮ್ಮ ನಿಧನದ ಬಳಿಕ ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾದ ಎಚ್.ಎಸ್.ಮಹದೇವಪ್ರಸಾದ್ ಗೆಲುವಿನ ನಂತರ ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದರು. ಅಲ್ಲದೆ ಜಿಲ್ಲಾ ರಾಜಕಾರಣದ ಸಂಪೂರ್ಣ ಹಿಡಿತ ಹೊಂದಿದ್ದರು. ಚಾಮರಾಜನಗರ ಲೋಕಸಭೆ ಕ್ಷೇತ್ರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಬಹುತೇಕ ಚುನಾವಣೆಗಳಲ್ಲಿ ಜಯಭೇರಿ ಬಾರಿಸಲು ಪ್ರಮುಖ ಕಾರಣರಾಗಿದ್ದರು.
೨೦೧೩ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾದ ಎಚ್.ಎಸ್.ಮಹದೇವ ಪ್ರಸಾದ್ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದು ಜಿಲ್ಲೆಯ ಶಾಸಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ೨೦೧೩ರಿಂದ ೧೮ ರ ತನಕ ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸಿದ್ದು, ಮಹದೇಶ್ವರ ಬೆಟ್ಟ ಪ್ರಾಧಿಕಾರಕ್ಕೆ ಚಾಲನೆ, ಎಂಜಿನಿಯರ್ ಹಾಗೂ ಮೆಡಿಕಲ್ ಕಾಲೇಜು, ಚಾಮರಾಜನಗರ, ಗುಂಡ್ಲುಪೇಟೆ ಬಹುಗ್ರಾಮ ಯೋಜನೆ ಆರಂಭಿಸುವಲ್ಲಿ ಮಹದೇವಪ್ರಸಾದ್ ಪಾತ್ರ ಸಾಕಷ್ಟಿತ್ತು.ಮಹದೇವಪ್ರಸಾದ್ ಉಪ ಚುನಾವಣೆಯಲ್ಲಿ ಗೆದ್ದು ಸಚಿವರಾದರು. ನಂತರ ಬಂದ ೨೦೧೮ರ ಸಾರ್ವತ್ರಿಕ ಚುನಾವಣೆಯಲ್ಲಿ ಡಾ.ಗೀತಾಮಹದೇವ ಪ್ರಸಾದ್ ಸೋತು ಒಂದು ಬಾರಿ ಶಾಸಕ ಸ್ಥಾನ ಮಹದೇವಪ್ರಸಾದ್ ಕುಟುಂಬಕ್ಕೆ ಕೈ ತಪ್ಪಿತ್ತು. ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹದೇವ ಪ್ರಸಾದ್, ಡಾ.ಗೀತಾಮಹದೇವಪ್ರಸಾದ್‌ರ ದಂಪತಿಯ ಏಕೈಕ ಪುತ್ರ ಎಚ್.ಎಂ.ಗಣೇಶ್ ಪ್ರಸಾದ್ ಶಾಸಕರಾಗುವ ಮೂಲಕ ಒಂದು ಬಾರಿ ಕೈ ತಪ್ಪಿದ್ದ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.
ಎಚ್.ಎಂ.ಗಣೇಶ್ ಪ್ರಸಾದ್ ಕ್ಷೇತ್ರದ ಜನರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಕಷ್ಟ ಸುಖಗಳಿಗೆ ೨೦೧೮ ರಿಂದ ಸ್ಪಂದಿಸುತ್ತ ಪಕ್ಷ ಸಂಘಟನೆಯಲ್ಲಿ ತೊಡಗಿ ಇದೀಗ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಲಿಷ್ಠ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಮಹದೇವಪ್ರಸಾದ್ ಹಾದಿಯಲ್ಲಿಯೇ ಗಣೇಶ್ ಪ್ರಸಾದ್ ಕೂಡ ಸಾಗುತ್ತಿದ್ದು ಕ್ಷೇತ್ರದ ಜನರೊಂದಿಗೆ ಒಡನಾಟ ಇಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕಾರ್ಯಕರ್ತರ ಹಿತ ಕಾಯ್ದುಕೊಂಡು ಸಾಗುತ್ತಿದ್ದಾರೆ. ಮಹದೇವಪ್ರಸಾದ್‌ರಂತೆ ಜಾತ್ಯಾತೀತ ನಿಲುವು ಹೊಂದಿದ್ದು, ಎಲ್ಲ ವರ್ಗದ ಜನರನ್ನು ಒಟ್ಟಿಗೆ ಕರೆದೊಯ್ಯುತ್ತಿದ್ದು ಅಪ್ಪನ ಹೆಸರು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಎಲ್ಲ ಜಾತಿ, ವರ್ಗದ ಜನರನ್ನು ವಿಂಗಡಿಸಿಲ್ಲ. ಜೊತೆಗೆ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತ ಕೂಡ ಆಗದೆ ಜಾತ್ಯಾತೀತ ತತ್ವ ಹಾಗೂ ಕಷ್ಟ ಎಂದು ಹೇಳಿಕೊಂಡು ಬರುವ ಮಂದಿಗೆ ಇಲ್ಲ ಎನ್ನದೆ ಬರಿಗೈಲಿ ಕಳುಹಿಸುವುದು ತೀರ ವಿರಳ.
ಸಂಪರ್ಕ ಹೊಂದಿದ್ದ ನಾಯಕ
ಎಚ್.ಎಸ್.ಮಹದೇವಪ್ರಸಾದ್ ಶಾಸಕರಾಗುವ ತನಕ ಸುಮಾರು ೧೫ ವರ್ಷಗಳಿಗೂ ಹೆಚ್ಚು ಕಾಲ ಗುಂಡ್ಲುಪೇಟೆಯ ತಾಲೂಕು ಕಚೇರಿ ಬಳಿಯ ಆಲದ ಮರದ ಕೆಳಗೆ ಅವರ ಹೆಜ್ಜೆ ಗುರುತುಗಳು ಅಂದಿನ ಕಥೆ ಹೇಳುತ್ತವೆ. ಎಚ್.ಎನ್.ಶ್ರೀಕಂಠಶೆಟ್ಟಿ ಎರಡು ಬಾರಿ ಸೋತರು. ನಂತರ ಎಚ್.ಎಸ್.ಮಹಾದೇವಪ್ರಸಾದ್ ಎರಡು ಬಾರಿ ಚುನಾವಣೆಯಲ್ಲಿ ಪರಾಭವಗೊಂಡರೂ ಸೋಲಿಗೆ ಅಂಜದೆ ಪ್ರತಿ ಹಳ್ಳಿಗಳ ಜನರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ಸಾಗಿದರು. ೧೯೯೪ ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಶಾಸಕರಾದರು.
ಎಚ್.ಎಸ್.ಮಹದೇವಪ್ರಸಾದ್ ಶಾಸಕರಾದ ಬಳಿಕ ಫೈವ್ ಮ್ಯಾನ್ ಆರ್ಮಿಯ ತಂಡದಲ್ಲಿದ್ದ ಎ.ಸಿದ್ದರಾಜು (ಸಂಸದ), ಎಚ್.ಎಸ್.ನಂಜಪ್ಪ (ತಾಪಂ ಅಧ್ಯಕ್ಷ), ಬಿ.ಎಂ.ಮುನಿರಾಜು (ಜಿಪಂ ಅಧ್ಯಕ್ಷ), ಜಿ.ಕೆ.ನಾಜೀಮುದ್ದೀನ್ (ಪುರಸಭೆ ಅಧ್ಯಕ್ಷ) ಅಧಿಕಾರ ಸಿಗುವಲ್ಲಿ ಪ್ರಸಾದ್ ಪಾತ್ರ ದೊಡ್ಡದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್.ಎಸ್.ಮಹದೇವಪ್ರಸಾದ್ ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ಸಮಯದಲ್ಲಿ ೨೦೧೭ರ ಜ.೩ರಂದು ಚಿಕ್ಕಮಗಳೂರಿನ ಸೆರಾಯಿ ರೆಸಾರ್ಟ್‌ನಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದರು.
ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್‌ರ 8ನೇ ವರ್ಷ ಪುಣ್ಯಾರಾಧನೆ ಜ.೩ ಬುಧವಾರ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ನಡೆಯಲಿದೆ. ಹಾಲಹಳ್ಳಿ ಗ್ರಾಮದ ಎಚ್.ಎನ್.ಶ್ರೀಕಂಠಶೆಟ್ಟರ ಸಮುದಾಯ ಭವನದಲ್ಲಿ ಬೆಳಗ್ಗೆ ೧೦ ಗಂಟೆಗೆ 8ನೇ ವರ್ಷದ ಪುಣ್ಯಾರಾಧನೆಯನ್ನು ಕುಟುಂಬಸ್ಥರು ಆಯೋಜಿಸಿದ್ದು ಮಧ್ಯಾಹ್ನ ೧೨ ಗಂಟೆಗೆ ಪ್ರಸಾದ ವಿನಿಯೋಗ ಏರ್ಪಡಿಸಿದ್ದಾರೆ.