ಚುನಾವಣಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ (ಎಸ್‍ಐಆರ್) ತಾವು ಸೋಲು ಕಾಣಬೇಕಾಯಿತು ಎಂದು ತೃಣಮೂಲ ಕಾಂಗ್ರೆಸ್‌ ಅಧಿನಾಯಕಿ ಮಮತಾ ಬ್ಯಾನರ್ಜಿ ಹೇಳುತ್ತಿರುವಾಗಲೇ, ಎಸ್‌ಐಆರ್‌ನಿಂದ ಉಂಟಾಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆದಿದೆ.

ಬೆಂಗಳೂರು : ಚುನಾವಣಾ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ (ಎಸ್‍ಐಆರ್) ತಾವು ಸೋಲು ಕಾಣಬೇಕಾಯಿತು ಎಂದು ತೃಣಮೂಲ ಕಾಂಗ್ರೆಸ್‌ ಅಧಿನಾಯಕಿ ಮಮತಾ ಬ್ಯಾನರ್ಜಿ ಹೇಳುತ್ತಿರುವಾಗಲೇ, ಎಸ್‌ಐಆರ್‌ನಿಂದ ಉಂಟಾಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆದಿದೆ. ರಾಜ್ಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಅರ್ಹರ ಮತದಾನದ ಹಕ್ಕು ಸಂರಕ್ಷಿಸಬೇಕು ಎಂದು ಚರ್ಚಿಸಲಾಗಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಪ್ರಮುಖ ಸಚಿವರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಎಸ್‌ಐಆರ್‌ ಜಾರಿಗೆ ಈಗಾಗಲೇ ಮ್ಯಾಪಿಂಗ್‌ ಶುರುವಾಗಿದ್ದು, ಇದರಲ್ಲಿ ಸಾಕಷ್ಟು ಲೋಪದೋಷಗಳಿವೆ. ಆದರೂ ಈ ಬಗ್ಗೆ ಸರ್ಕಾರ ಇನ್ನೂ ವಿರೋಧ ವ್ಯಕ್ತಪಡಿಸಿಲ್ಲ. ಪಶ್ಚಿಮ ಬಂಗಾಳ ಸೇರಿ ಎಸ್ಐಆರ್‌ ನಡೆದಿರುವ 10 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶದಲ್ಲಿ 7 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಎಸ್‌ಐಆರ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸಂಪುಟದಲ್ಲಿ ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರನ್ನು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಒತ್ತಾಯಿಸಿದರು.

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್‌ ಬಗ್ಗೆ ಎಲ್ಲಾ ರಾಜ್ಯಗಳಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮತದಾರರನ್ನು ಪಟ್ಟಿಯಿಂದ ಕಿತ್ತು ಹಾಕಿದ್ದು, 27 ಲಕ್ಷ ಮತದಾರರ ಪರಿಶೀಲನಾ ಅರ್ಜಿ ಬಾಕಿ ಇರುವಾಗಲೇ ಚುನಾವಣೆ ಮುಗಿದು ಹೋಗಿದೆ. ಅಷ್ಟೂ ಮಂದಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ.

ಇದು ಚುನಾವಣಾ ಕಣದಿಂದ ಮತದಾರರನ್ನು ಹೊರನೂಕುವ, ಪ್ರಜಾಸತ್ತಾತ್ಮಕ ವಿರೋಧಿ, ಅವೈಜ್ಞಾನಿಕ ಪ್ರಕ್ರಿಯೆ. ಹೀಗಾಗಿ ರಾಜ್ಯದಲ್ಲಿ ವ್ಯವಸ್ಥಿತವಾಗಿ ಎಸ್‌ಐಆರ್‌ ಜಾರಿಗೆ ಹಾಗೂ ಎಸ್‌ಐಆರ್‌ ಬಳಿಕವೂ ಮತದಾರರ ಹಕ್ಕು ರಕ್ಷಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ವ್ಯಕ್ತವಾದ ಸಲಹೆಗಳೇನು?:

- ಚುನಾವಣಾ ಆಯೋಗವು 2025ರ ಜೂನ್‍ನಿಂದ ಎಸ್‍ಐಆರ್ ಅನ್ನು ಪರಿಚಯಿಸಿತು. ಬಳಿಕ ಅದನ್ನು ಅನುಷ್ಠಾನಗೊಳಿಸಿದ ರೀತಿಯಿಂದಾಗಿ ಎಸ್ಐಆರ್‌ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಸಂವಿಧಾನದ 324ನೇ ವಿಧಿ ಪ್ರಕಾರ ತನ್ನ ಕರ್ತವ್ಯ ನಿಭಾಯಿಸಲು ಆಯೋಗ ಸಂಪೂರ್ಣ ವಿಫಲವಾಗಿದೆ. ಜನರ ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಹಕ್ಕು ರಕ್ಷಿಸಲು ಸುಪ್ರೀಂ ಕೋರ್ಟ್ ಸಹ ವಿಫಲವಾಗಿದೆ. ಹೀಗಾಗಿ ರಾಜ್ಯದಲ್ಲಿ ಎಸ್ಐಆರ್‌ ಜಾರಿ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಈ ಹಂತದಲ್ಲಿ ಎಸ್‌ಐಆರ್‌ ಜಾರಿಗೆ ಬರುವುದಾದರೂ 3 ತಿಂಗಳ ಬದಲಿಗೆ ಆರು ತಿಂಗಳಿಗೆ ವಿಸ್ತರಿಸಬೇಕು. ತರಾತುರಿಯಲ್ಲಿ ಜಾರಿಗೆಗೆ ಬರಬಾರದು. ಎಲ್ಲಾ ಗ್ರಾಪಂ, ವಾರ್ಡ್‌ಗಳಲ್ಲಿ ಮತದಾರರ ನೆರವಿನ ಕೇಂದ್ರ ಸ್ಥಾಪಿಸಬೇಕು. ಸೂಕ್ತ ದಾಖಲೆ ಇಲ್ಲದ ಜನರಿಗೆ ದಾಖಲೆ ನೀಡಲು ಸರ್ಕಾರ ನೆರವಾಗಬೇಕು. ಡಿಲೀಟ್ ಆದ ಮತದಾರರು ಮನವಿ ಸಲ್ಲಿಸಲು ಸೂಕ್ತ ಸಮಯಾವಕಾಶ ನೀಡಬೇಕು. ಕರ್ನಾಟಕ ಸ್ವಾವಲಂಬಿಯಾದ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು.

ಇದನ್ನು ಸಮರ್ಥ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕು. ಸೋಷಿಯಲ್ ಆಡಿಟಿಂಗ್ ಪದ್ಧತಿ ಬಳಸಿ ರಾಜ್ಯದ ಮತದಾರರ ಪಟ್ಟಿ ಪರಿಷ್ಕರಿಸಬೇಕು. ಈ ನಾಲ್ಕು ಅಂಶಗಳನ್ನೂ ಗಮನದಲ್ಲಿಟ್ಟು ರಾಜ್ಯ ಸರ್ಕಾರ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಸಲಹೆ ನೀಡಿದರು.

ಮತ್ತೊಂದು ಸುತ್ತಿನ ಸಭೆ ಭರವಸೆ:

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳೊಂದಿಗೆ ಶೀಘ್ರದಲ್ಲೇ ವಿಸ್ತೃತ ಸಭೆ ಕರೆಯುತ್ತೇವೆ. ಎಲ್ಲರ ಜೊತೆಯೂ ಸಮಾಲೋಚನೆ ನಡೆಸಿ, ನಂತರ ನಿಮ್ಮೊಟ್ಟಿಗೆ ಮತ್ತೊಮ್ಮೆ ಮಾತನಾಡುತ್ತೇನೆ ಎಂದು ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಸಭೆಯಲ್ಲಿ ರಾಜಕೀಯ ವಿಶ್ಲೇಷಕ ಹಾಗೂ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಪತಿ ಪರಕಾಲ ಪ್ರಭಾಕರ್, ಕರ್ನಾಟಕ ಮುಸ್ಲಿಂ ಮುತ್ತಹಿದ ಮಹಾಜ್‌ನ ಮೊಹಮ್ಮದ್‌ ಯೂಸುಫ್‌ ಕನ್ನಿ, ಮಾಜಿ ಸಚಿವರೂ ಆದ ಲೇಖಕಿ ಬಿ.ಟಿ. ಲಲಿತಾ ನಾಯ್ಕ್, ಮತದಾನ ಹಕ್ಕು ಚಳವಳಿಯ ಥಾಮಸ್ ಫ್ರಾಂಕೋ, ನನ್ನ ಮತ ನನ್ನ ಹಕ್ಕು ಹೋರಾಟ ವೇದಿಕೆಯ ವಿನಯ್‌ ಶ್ರೀನಿವಾಸ್‌, ರಾಜ್ಯ ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ, ಕರ್ನಾಟಕ ಕೋಮುಸೌಹಾರ್ದ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದರು.

ಎಸ್‌ಐಆರ್‌ ವಿರೋಧಿಸಿ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲು ಸಂಘಟನೆಗಳ ಪ್ರತಿನಿಧಿಗಳಿಂದ ಆಗ್ರಹ

- ಪಶ್ಚಿಮ ಬಂಗಾಳದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ

- ರಾಜ್ಯದಲ್ಲೂ ಪರಿಷ್ಕರಣೆಗೆ ಪೂರ್ವ ಪ್ರಕ್ರಿಯೆಗಳಿಗೆ ಚುನಾವಣಾ ಆಯೋಗದ ಸಿದ್ಧತೆ ಶುರು

- ಈ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಜೊತೆಗೆ ವಿವಿಧ ಸಂಘಟನೆಗಳಿಂದ ಸಮಾಲೋಚನೆ

- ರಾಜ್ಯದಲ್ಲಿ ಪರಿಷ್ಕರಣೆ ತಡೆ ಇಲ್ಲವೇ ಪ್ರಕ್ರಿಯೆ ಮೇಲೆ ತೀವ್ರ ನಿಗಾಕ್ಕೆ ಸರ್ಕಾರಕ್ಕೆ ಮನವಿ

- ಶಾಸಕರ ಜೊತೆಗೆ ಚರ್ಚಿಸಿ ಮತ್ತೊಮ್ಮೆ ನಿಮ್ಮೊಂದಿಗೆ ಸಮಾಲೋಚಿಸುವೆ: ಸಭೆಗೆ ಸಿಎಂ

ಬಂಗಾಳದಲ್ಲಿ ಏನಾಗಿತ್ತು?

- ಕೆಲವು ತಿಂಗಳ ಹಿಂದೆ ಬಂಗಾಳದಲ್ಲಿ ಚುನಾವಣಾ ಆಯೋಗ ಸಮಗ್ರ ಮತಪಟ್ಟಿ ಪರಿಷ್ಕರಣೆ ಮಾಡಿತ್ತು

- ಆಗ ಅಕ್ರಮ ಬಾಂಗ್ಲಾ ವಲಸಿಗರು ಸೇರಿ 90 ಲಕ್ಷ ‘ಅಕ್ರಮ’ ಮತದಾರರ ಹೆಸರನ್ನು ಡಿಲೀಟ್‌ ಮಾಡಿತ್ತು

- ಇವರೆಲ್ಲ ಟಿಎಂಸಿ ಬೆಂಬಲಿಗರು, ಬೇಕುಬೇಕೆಂದೇ ಇವರ ಹೆಸರು ಡಿಲೀಟ್‌ ಎಂದು ಮಮತಾ ಆರೋಪ

- ಆದರೆ ಇವರಲ್ಲಿ ಅಕ್ರಮ ಬಾಂಗ್ಲಾ ವಲಸಿಗರೇ ಹೆಚ್ಚು ಎಂದು ಕೇಂದ್ರ ಸರ್ಕಾರ, ಬಿಜೆಪಿಯ ಸಮರ್ಥನೆ

- ಪರಿಷ್ಕರಣೆಯಿಂದ ಮತದಾರರ ಮೂಲಭೂತ ಹಕ್ಕಿಗೆ ಚ್ಯುತಿ ಎಂದು ಮಮತಾ ಸುಪ್ರೀಂ ಕೋರ್ಟ್‌ಗೆ

- ಆದರೆ ಮಮತಾ ವಾದ ತಳ್ಳಿಹಾಕಿದ ಸುಪ್ರೀಂ ಕೋರ್ಟ್. ಮತಪಟ್ಟಿ ಪರಿಷ್ಕರಣೆಗೆ ಅನುಮೋದನೆ

- ಈಗ ಬಂಗಾಳದಲ್ಲಿ ದೀದಿಗೆ ಭಾರಿ ಸೋಲು. ಪರಿಷ್ಕರಣೆಯೂ ಸೋಲಿಗೆ ಕಾರಣ ಎಂಬ ಆರೋಪ