ಸುಪ್ರೀಂಕೋರ್ಟ್ ಸೂಚನೆಯಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಜೂ.20ರಿಂದ 24ರವರೆಗೆ ಚುನಾವಣೆ ನಡೆಸುವುದು ಅನಿವಾರ್ಯ. ಈ ಅವಧಿಯಲ್ಲೇ ಮತದಾನ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.

ಬೆಂಗಳೂರು : ಸುಪ್ರೀಂಕೋರ್ಟ್ ಸೂಚನೆಯಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಜೂ.20ರಿಂದ 24ರವರೆಗೆ ಚುನಾವಣೆ ನಡೆಸುವುದು ಅನಿವಾರ್ಯ. ಈ ಅವಧಿಯಲ್ಲೇ ಮತದಾನ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.

ಶುಕ್ರವಾರ ಜಿಬಿಎ ಮುಖ್ಯಆಯುಕ್ತ ಸೇರಿದಂತೆ 5 ನಗರಪಾಲಿಕೆಗಳ ಆಯುಕ್ತರು ಹಾಗೂ ಅಧಿಕಾರಿಗಳ ಸಮಾಲೋಚನಾ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಚುನಾವಣಾ ದಿನಾಂಕ ಪ್ರಕಟಣೆ ಮಾತ್ರ ಬಾಕಿ ಇದೆ. ಅದನ್ನು ಒಂದು ವಾರದೊಳಗೆ ನಿಗದಿಪಡಿಸಲಾಗುವುದು. ಜಿಬಿಎ ವತಿಯಿಂದ ಚುನಾವಣೆ ಸ್ವಲ್ಪ ಮುಂದೂಡುವಂತೆ ಮನವಿ ಬಂದಿದ್ದರೂ, ಜೂ.30ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅದನ್ನು ಮುಂದೂಡುವ ಅಧಿಕಾರ ಇಲ್ಲ ಎಂದು ಹೇಳಿದರು.

ಜೂ.24ರೊಳಗೆ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿದ್ದರೆ ಅವುಗಳನ್ನು ಶೀಘ್ರ ಮುಗಿಸಲು ಸೂಚನೆ ನೀಡಲಾಗಿದೆ. ಯಾವ ದಿನ ಮತದಾನ ನಡೆಸಬೇಕು ಎಂಬುದನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಜಿಬಿಎ ಯಾವ ಸಮಸ್ಯೆಯನ್ನೇ ಹೇಳಿದರೂ, ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವುದು ಅನಿವಾರ್ಯ ಎಂದು ಖಚಿತಪಡಿಸಿದರು.

ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತಿರುವುದಾಗಿ ತಿಳಿಸಿದ ಆಯುಕ್ತರು

5 ಪಾಲಿಕೆಗಳ ರಚನೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪ್ರಕರಣಗಳು ಬಾಕಿ ಇರುವಾಗಲೇ ಈ ರೀತಿ ಚುನಾವಣೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ನಾನು ಇಲ್ಲಿಗೆ ಇತ್ತೀಚೆಗೆ ಬಂದಿದ್ದೇನೆ. ನನಗೆ ಹೈಕೋರ್ಟ್ ವಿಷಯ ತಿಳಿದಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತಿರುವುದಾಗಿ ತಿಳಿಸಿದರು.

ಪಾಲಿಕೆಯಿಂದ ಚುನಾವಣೆ ಮುಂದೂಡಲು ಮನವಿ ಪತ್ರ ತಂದಿದ್ದರಾದರೂ ಇದು ಮನವಿ ಪತ್ರಗಳನ್ನು ಸ್ವೀಕರಿಸುವ ಸಭೆಯಲ್ಲ. ಬದಲಿಗೆ ಕೋರ್ಟ್ ಆದೇಶದಂತೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾಗಿ ಅವರು ತಿಳಿಸಿದರು.

ಜಿಬಿಎ ನಿಯಮದ ಪ್ರಕಾರ ಚುನಾವಣೆ ನಡೆಸಲು ಸಮಿತಿಯ ಎಲ್ಲಾ ಸದಸ್ಯರೊಂದಿಗೆ ಸಭೆ ಕರೆದು ನಂತರ ಚುನಾವಣೆ ನಡೆಸಬೇಕೆಂಬುದನ್ನು ದಾಖಲಿಸಲಾಗಿದೆ. ಆದರೆ, ಸಮಿತಿಯ ಇತರೆ ಸದಸ್ಯರೆಲ್ಲಾ ಸೇರಿ ಚುನಾವಣೆ ನಡೆಸಲು ಆಯೋಗಕ್ಕೆ ಅಧಿಕಾರ ನೀಡಿರುವ ಕಾರಣ ತಾನು ಪ್ರಕ್ರಿಯೆ ನಡೆಸಲು ಮುಂದಾಗಿರುವುದಾಗಿ ಆಯುಕ್ತರು ತಿಳಿಸಿದರು.

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಮಾತನಾಡಿ, 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಚುನಾವಣೆಗೆ ಅಗತ್ಯವಿರುವ ಬಹುತೇಕ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ಈಗಾಗಲೇ ವಾರ್ಡ್‌ ವಿಂಗಡಣೆ, ಮೀಸಲಾತಿ ಹಾಗೂ ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದೆ ಎಂದರು.

ಮುಂದಿನ ಹಂತದಲ್ಲಿ ಮತಗಟ್ಟೆಗಳ ಅಂತಿಮ ಪಟ್ಟಿ ಪ್ರಕಟಣೆ ಚುನಾವಣಾಧಿಕಾರಿ (RO), ಸಹಾಯಕ ಚುನಾವಣಾಧಿಕಾರಿ (ARO) ಮತ್ತು ಬಿಎಲ್‌ಒಗಳ ನೇಮಕ ಸಿಬ್ಬಂದಿ ತರಬೇತಿ ಮತಪೆಟ್ಟಿಗೆಗಳ ವ್ಯವಸ್ಥೆ ಮತ್ತು ಭದ್ರತಾ ಕ್ರಮಗಳು, ಮತ ಎಣಿಕೆ ಕೇಂದ್ರಗಳ ಸಿದ್ಧತೆ ಹಾಗೂ ಇತರೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಸಭೆಯಲ್ಲಿ ಐದು ಪಾಲಿಕೆಗಳ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿ, ಚುನಾವಣಾ ನಿರ್ವಹಣೆಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಿದರು. ಸುಪ್ರೀಂ ಕೋರ್ಟ್ ಗಡುವಿನೊಳಗೆ ಜಿಬಿಎ ಚುನಾವಣೆ ನಡೆಸುವುದು ಖಚಿತವಾಗಿದ್ದು, ಅಧಿಕೃತ ದಿನಾಂಕ ಘೋಷಣೆ ಬಾಕಿ ಇದೆ.

ಇವಿಎಂ ಇಲ್ಲ, ಬ್ಯಾಲೆಟ್ ಪೇಪರ್‌ನಲ್ಲೇ ಚುನಾವಣೆ

ವಿಧಾನಸಭಾ ಚುನಾವಣೆಯಂತೆ ಈ ಚುನಾವಣೆಗೆ ಇವಿಎಂ ಬಳಸುತ್ತಿಲ್ಲ. ಬ್ಯಾಲೆಟ್ ಪೇಪರ್ ಪದ್ಧತಿಯಲ್ಲಿಯೇ ಮತದಾನ ನಡೆಯಲಿದೆ ಎಂದು ಆಯುಕ್ತರು ತಿಳಿಸಿದರು. ಹನ್ನೊಂದು ವರ್ಷಗಳ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಯುತ್ತಿದ್ದು, ನಗರಪಾಲಿಕೆಯ ಸದಸ್ಯತ್ವದ ಸ್ಥಾನದ ಆಕ್ಷಾಂಕ್ಷಿಗಳು ಎಲ್ಲಾ ಪಕ್ಷಗಳಲ್ಲಿಯೂ ಸಾಲು ಸಾಲು ಮಂದಿ ಪಾಲಿಕೆ ಸದಸ್ಯತ್ವದ ಟಿಕೆಟ್ ಗಾಗಿ ಕಾಯುತ್ತಿದ್ದಾರೆ.

ಪಾಲಿಕೆವಾರು ಮತದಾರರ ವಿವರಗಳು

ಪಾಲಿಕೆ ವಾರ್ಡ್‌ಗಳು ಮತಗಟ್ಟೆಗಳು ಪುರುಷರು ಮಹಿಳೆಯರು ಇತರರು ಒಟ್ಟು ಮತದಾರರು

ಬೆಂ.ಕೇಂದ್ರ 63 1303 7,26,476 6,98,967 303 14,25,746

ಬೆಂ.ಉತ್ತರ 72 1708 9,94,421 9,59,702 381 19,54,504

ಬೆಂ.ದಕ್ಷಿಣ 72 1611 9,03,402 8,41,097 225 17,44,724

ಬೆಂ.ಪೂರ್ವ 50 920 5,49,200 4,91,996 258 10,41,454

ಬೆಂ.ಪಶ್ಚಿಮ 112 2481 13,97,670 13,30,795 468 27,28,933

ಒಟ್ಟು 369 8023 45,71,169 43,22,557 1635 88,95,361

ಒಟ್ಟು ವಾರ್ಡ್‌ಗಳ ಸಂಖ್ಯೆ: 369

ಒಟ್ಟು ಮತಗಟ್ಟೆಗಳ ಸಂಖ್ಯೆ: 8,023

ಒಟ್ಟು ಮತದಾರರ ಸಂಖ್ಯೆ: 88,95,361

ಅತಿ ಹೆಚ್ಚು ಮತದಾರರ ವಾರ್ಡ್-ಸುಬ್ರಹ್ಮಣ್ಯಪುರ: 53,660

ಅತಿ ಕಡಿಮೆ ಮತದಾರರ ವಾರ್ಡ್- ವಿಜ್ಞಾನ ನಗರ: 12,897