ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆ ಸಂಬಂಧ ಕೂಡಲೇ ಅಧಿಸೂಚನೆ ಹೊರಡಿಸಿ ನಿಗದಿ ಅವಧಿಯಲ್ಲಿ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಬೆಂಗಳೂರಿನ ನಾಗರಿಕರು ಕಳೆದ 18 ವರ್ಷಗಳಲ್ಲಿ ಕೇವಲ 2 ಬಾರಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಚುನಾವಣಾ ಪ್ರಕ್ರಿಯೆ ವಿಳಂಬ ಕೇವಲ ಆಡಳಿತಾತ್ಮಕ ಲೋಪವಲ್ಲ. ಬದಲಾಗಿ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಬಿಬಿಎಂಪಿಗೆ ಕೊನೆಯದಾಗಿ 2015ರ ಆ.22ರಂದು ಚುನಾವಣೆ ನಡೆದಿದೆ. ಅಂದರೆ ಚುನಾವಣೆ ನಡೆದ ಒಂದು ದಶಕಕ್ಕೂ ಹೆಚ್ಚು ಸಮಯವಾಗಿದೆ. ರಾಜ್ಯ ಸರ್ಕಾರಗಳು ಚುನಾವಣೆ ನಡೆಸುವುದನ್ನು ತಪ್ಪಿಸಲು ಒಂದರ ನಂತರ ಒಂದು ಅಡೆತಡೆ ಸೃಷ್ಟಿಸಿವೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಕರ್ನಾಟಕ ಹೈಕೋರ್ಟ್ ಬಿಬಿಎಂಪಿ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಆದೇಶಿಸಿತ್ತು. ಆಗ ರಾಜ್ಯ ಸರ್ಕಾರವು ವಾರ್ಡ್ ವಿಂಗಡಣೆ ನೆಪವೊಡ್ಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿ ಚುನಾವಣೆ ವಿಳಂಬ ಮಾಡಿತ್ತು. ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ರಚಿಸಿ, ಬಿಬಿಎಂಪಿಯನ್ನು ಐದು ನಗರ ಪಾಲಿಕೆಗಳಾಗಿ ವಿಂಗಡಿಸಿದೆ.ಈ ನಡುವೆ ಸುಪ್ರೀಂ ಕೋರ್ಟ್ 2026ರ ಜೂ.30ರೊಳಗೆ ಚುನಾವಣೆ ನಡೆಸಲು ಆದೇಶಿಸಿದೆ. ಇದರ ಅನ್ವಯ ಮೇ 16ರೊಳಗೆ ಅಧಿಸೂಚನೆ ಹೊರಡಿಸಬೇಕು. ಆದರೆ, ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ನಡವಳಿಕೆ ನೋಡಿದಾಗ ಉದ್ದೇಶ ಪೂರ್ವಕವಾಗಿ ಸುಪ್ರೀಂಕೋರ್ಟ್ ಆದೇಶ ಪಾಲಿಸದೆ ಚುನಾವಣೆ ವಿಳಂಬ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಸುಪ್ರೀಂಕೋರ್ಟಿನ 2022ರ ಡಿಸೆಂಬರ್, 2023ರ ಮಾರ್ಚ್ ಮತ್ತು 2025ರ ನವೆಂಬರ್ ಗಡುವು ಉಲ್ಲಂಘಿಸಲಾಗಿದೆ. ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು 2026ರ ಸೆ.30ರ ವರೆಗೆ ಜಿಬಿಎ ಚುನಾವಣೆ ಸಮಯ ವಿಸ್ತರಿಸುವಂತೆ ಮನವಿ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಸಂಬಂಧ ಸ್ವಯಂ ಪ್ರೇರಿತವಾಗಿ ಗಮನಹರಿಸಬೇಕು. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಜಿಬಿಎ ಚುನಾವಣೆ ಸಮಯ ವಿಸ್ತರಿಸುವಂತೆ ಕೋರಿರುವುದು, ನಿಗದಿ ಸಮಯದಲ್ಲಿ ಚುನಾವಣೆ ನಡೆಸದಿರುವ ಸಂಬಂಧಿತ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಗಳನ್ನು ಪ್ರಾರಂಭಿಸಬೇಕು. ನಿಗದಿತ ಸಮಯದಲ್ಲಿ ಜಿಬಿಎ ಚುನಾವಣೆ ನಡೆಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
