ನಾವು ಎಷ್ಟೇ ಎತ್ತರಕ್ಕೆ ಹೋದರೂ ನಮ್ಮ ಮೂಲವನ್ನು ಮರೆಯಬಾರದು
ಕನ್ನಡಪ್ರಭ ವಾರ್ತೆ ಮೈಸೂರು
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರೀಕರಣಗೊಂಡಿದೆ. ಸೇವಾ ಮನೋಭಾವವಿಲ್ಲದ ಬದುಕು ಸಮಾಜದ ಅಳಿವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಸೇವಾ ಮನೋಭಾವವಿರುವ ಶಿಕ್ಷಣವನ್ನು ನೀಡುವುದೇ ನಿಜವಾದ ಶಿಕ್ಷಣವಾಗಿರುತ್ತದೆ ಎಂದು ಚಲನಚಿತ್ರ ನಿರ್ದೇಶಕ ಡಾ.ಟಿ.ಎಸ್. ನಾಗಾಭರಣ ತಿಳಿಸಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಡಾ. ಅಬ್ದುಲ್ ಕಲಾಂ ರಜತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ವಿದ್ಯಾರ್ಥಿ ಸಂಸತ್ ಮತ್ತು ಪ್ರತಿಭಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಎಷ್ಟೇ ಎತ್ತರಕ್ಕೆ ಹೋದರೂ ನಮ್ಮ ಮೂಲವನ್ನು ಮರೆಯಬಾರದು ಎಂದರು.ಭಾರತೀಯ ಪರಂಪರೆ, ಗುರು- ಶಿಷ್ಯರ ಪರಂಪರೆ, ನಾವು ನಮ್ಮ ಬಾಲ್ಯದಿಂದ ಕಲಿತ ಗುರುಗಳನ್ನು ಎಂದಿಗೂ ಮರೆಯಬಾರದು. ಇವತ್ತು ಇದ್ದಿದ್ದು, ನಾಳೆ ಇಲ್ಲದಿರಬಹುದು. ಆದರೆ, ಗುರುಗಳ ಅನುಭವದಿಂದ ಕಲಿತ ಶಿಕ್ಷಣ ಜೀವನಕ್ಕೆ ಬಹುಮುಖ್ಯವಾದದ್ದು ಮತ್ತು ಶಾಶ್ವತವಾದುದ್ದು ಎಂದು ಹೇಳಿದರು. ಒಂದು ಗುರಿಯ ಹಿಂದೆ ಖಂಡಿತ ಒಬ್ಬರು ಗುರು ಇದ್ದೇ ಇರುತ್ತಾರೆ. ಪ್ರತಿಭೆ ಇರುವವರೆಲ್ಲರೂ ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ. ಈ ನಿಟ್ಟಿನಲ್ಲಿ ನಿಮ್ಮ ಪ್ರತಿಭೆಗಳನ್ನು ಕಂಡುಕೊಳ್ಳುವ ಮತ್ತು ಅದನ್ನು ಬೆಳೆಸಿಕೊಳ್ಳುವ ಕೆಲಸ ಮಾಡಬೇಕು. ಹೊಸ ಹೊಸ ಮಾದರಿಗಳನ್ನು ಹುಡುಕುತ್ತಾ, ನಮ್ಮತನವನ್ನು ಕಂಡುಕೊಳ್ಳುತ್ತಾ, ಸಾಂಸ್ಕೃತಿಕವಾಗಿ ಬೆಳೆಯಬೇಕು ಎಂದು ತಿಳಿಸಿದರು.ನಾವು ಇನ್ನೊಬ್ಬರಿಗೆ ಮನರಂಜನೆ ನೀಡುವುದು ಕೂಡ ಒಂದು ಪ್ರವೃತ್ತಿ. ಹಾಡುವುದು, ನೃತ್ಯ ಮಾಡುವುದು ಎಲ್ಲವೂ ನಮ್ಮನ್ನು ಸಂತೋಷವಾಗಿ ಇಡುತ್ತದೆ. ಪ್ರತಿಭಾ ವೇದಿಕೆ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಲಿ. ಆ ಮೂಲಕ ಮತ್ತಷ್ಟು ಮಾದರಿಗಳು ನಾಡಿಗೆ ಕೊಡುಗೆಯಾಗಿ ನೀಡಲಿ ಎಂದು ಅವರು ಶುಭ ಹಾರೈಸಿದರು.ಸತ್ಯವನ್ನು ಪರಿಶೋಧಿಸುವ ಕೆಲಸವನ್ನು ರಂಗಭೂಮಿ ಮಾಡುತ್ತದೆ. ಎಂದಿಗೂ ಸಾಧನೆಯನ್ನು ಟೀಕಿಸುವ ಮೊದಲು ಅದರ ಹಿಂದಿನ ಪರಿಶ್ರಮವನ್ನು ನಾವು ಗಮನಿಸಬೇಕು. ನಟನಾಗುವುದು ಸುಲಭದ ಕೆಲಸವಲ್ಲ. ನಾನು ಕನ್ನಡ ಭಾಷೆಯ ಸೈನಿಕನಾಗಿ ಕನ್ನಡ ಬೆಳೆಸುವ ಉಳಿಸುವ ಕೆಲಸವನ್ನು ಕೊನೆಯವರೆಗೂ ಮಾಡುವೆ. ನಾವು ಕನ್ನಡಿಗರು ಯಾರಿಗೂ, ಎಲ್ಲಿಗೂ ಯಾವುದಕ್ಕೂ ಕಡಿಮೆ ಇಲ್ಲ. ಈ ಬಗ್ಗೆ ನಮ್ಮೆಲ್ಲರಿಗೂ ಗರ್ವ ಇರಬೇಕು. ವೈಜ್ಞಾನಿಕವಾಗಿ ಯಾವುದಾದರೂ ಭಾಷೆ ಇದ್ದರೆ ಅದು ಕನ್ನಡ ಮಾತ್ರ ಎಂದರು.ಇದೇ ವೇಳೆ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ನೀಡಿ ಗೌರವಿಸಲಾಯಿತು. ಮಹಾಜನ ವಿದ್ಯಾಸಂಸ್ಥೆಯ ಗೌ. ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷ್ಮಿ ಮುರಳೀಧರ್, ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ವಿದ್ಯಾರ್ಥಿ ಸಂಸತ್ ಸಂಚಾಲಕಿ ಡಾ.ಪಿ.ಜಿ. ಪುಷ್ಪಾರಾಣಿ, ಮಹಾಜನ ವಿದ್ಯಾಸಂಸ್ಥೆಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ. ರೇಣುಕಾರ್ಯ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಮೊದಲಾದವರು ಇದ್ದರು.----ಕೋಟ್...ನಮ್ಮತನ ಎಂದರೆ ನಮ್ಮ ಭಾಷೆ, ನಮ್ಮ ನೆಲ ಎಲ್ಲವನ್ನೂ ಗೌರವಿಸುವುದು, ಬಳಸುವುದು. ಈ ಮೂಲಕ ನಮ್ಮ ನಮ್ಮ ಮಾದರಿಯನ್ನು ಹುಟ್ಟಿ ಹಾಕಬೇಕು. ಪ್ರತಿಯೊಬ್ಬ ವ್ಯಕ್ತಿಯುತನ್ನಲ್ಲಿರುವ ಪ್ರತಿಭೆಯನ್ನು ಸಕಾಲದಲ್ಲಿ ಗುರುತಿಸಿಕೊಂಡು ಅದನ್ನು ಪ್ರವೃತ್ತಿಯಾಗಿ ಬೆಳೆಸಿಕೊಳ್ಳಬೇಕು. ವೃತ್ತಿಗೆ ನಿವೃತ್ತಿ ಇದೆ, ಆದರೆ, ಪ್ರವೃತ್ತಿ ಸಾಯುವವವರೆಗೂ ಇರುತ್ತದೆ. ಅದು ವ್ಯಕ್ತಿಯ ಬದುಕನ್ನು ಹಸನುಗೊಳಿಸಿ ಸಂತೋಷವಾಗಿಡುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರವೃತ್ತಿ ಬೆಳೆಸಿಕೊಳ್ಳಬೇಕು.- ಟಿ.ಎಸ್. ನಾಗಾಭರಣ, ಚಲನಚಿತ್ರ ನಿರ್ದೇಶಕ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.