ಕನ್ನಡಪ್ರಭ ವಾರ್ತೆ ಮೂಡಲಗಿ
ಸರಳತೆಯ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಅಮೃತ ಹಸ್ತದಿಂದ 2002 ಫೆಬ್ರುವರಿ 16ರಂದು ಕಲ್ಲೋಳಿಯಲ್ಲಿ ಈರಣ್ಣ ಕಡಾಡಿಯವರ ನೇತೃತ್ವದಲ್ಲಿ ಆರಂಭವಾದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಚೇರಿ ಕಟ್ಟಡ ಉದ್ಘಾಟನೆಯು ಅ.4ರಂದು ಸಂಜೆ 4ಕ್ಕೆ ನಾಡಿನ ಶ್ರೀಗಳ ಸಾನ್ನಿಧ್ಯ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ₹5 ಕೋಟಿ ವೆಚ್ಚದಲ್ಲಿ ಸುಸಜ್ಜಿತ, ಗಣಕೀಕೃತ ಮತ್ತು ಗ್ರಾಹಕರ ಸ್ನೇಹಿ ಬ್ಯಾಂಕ್ ಆಗಿ ಕಟ್ಟಡ ನಿರ್ಮಿಸಲಾಗಿದೆ.ಆರಂಭದಲ್ಲಿ 10 ಚದರ ಅಡಿಯ ಸಣ್ಣ ಬಾಡಿಗೆ ಕೊಠಡಿಯಲ್ಲಿ ಕೇವಲ 320 ಸದಸ್ಯರು, ₹3.22 ಲಕ್ಷ ಶೇರು ಬಂಡವಾಳದೊಂದಿಗೆ ಸಂಸ್ಥೆ ಪ್ರಾರಂಭವಾಗಿದೆ. ಮೊದಲ ವರ್ಷದಲ್ಲಿ ₹61 ಸಾವಿರ ಠೇವು, ₹4.06 ಲಕ್ಷ ದುಡಿಯುವ ಬಂಡವಾಳ ಕ್ರೋಢಿಕರಿಸಿ ಸುಮಾರು ₹20 ಸಾವಿರ ಲಾಭ ಗಳಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಂಘ ಬೆಳೆಯುವ ಭರವಸೆ ಮೂಡಿಸಿತ್ತು. ಸದ್ಯ 23 ವಸಂತಗಳನ್ನು ಪೂರೈಸಿರುವ ಸಹಕಾರಿಯು 2024-25ನೇ ಆರ್ಥಿಕ ವರ್ಷದಲ್ಲಿ 16000 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ₹23.50 ಲಕ್ಷ ಶೇರು ಬಂಡವಾಳ, ₹106.55 ಕೋಟಿ ದುಡಿಯುವ ಬಂಡವಾಳ, ₹13.35 ಕೋಟಿ ಗುಂತಾವಣಿ, ₹96.72 ಕೋಟಿ ಠೇವು ಹೊಂದಿದ್ದು, ₹2.76 ಕೋಟಿ ನಿವ್ವಳ ಲಾಭ ಗಳಿಕೆ ಮಾಡಿದೆ. ವಿವಿಧ ಕ್ಷೇತ್ರಗಳ ಜನರಿಗೆ ಒಟ್ಟು ₹89.44 ಕೋಟಿ ಸಾಲ ನೀಡಿದೆ ಹಾಗೂ ಶೇ.100ರಷ್ಟು ಸಾಲ ವಸೂಲಾತಿ ಹೊಂದಿದ್ದು, ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪತ್ರಿಕೆಗೆ ಪ್ರತಿಕ್ರಿಯಿಸಿದರು.
ಮಹಾಲಕ್ಷ್ಮೀ ಸಂಸ್ಥೆ ಸಾಧನೆ:ಗ್ರಾಹಕರ ಅನುಕೂಲಕ್ಕಾಗಿ ಕಲ್ಲೋಳಿಯ ಪಟ್ಟಣದ ಕೇಂದ್ರ ಸ್ಥಳದಲ್ಲಿ ಸುಸಜ್ಜಿತವಾದ ಮತ್ತು ಗ್ರಾಹಕರ ಸೌಲಭ್ಯಕ್ಕಾಗಿ ಕಟ್ಟಡ ನಿರ್ಮಿಸಿದೆ. ಗ್ರಾಮೀಣ ಭಾಗದ ಬೆಟಗೇರಿ, ಘಟಪ್ರಭಾ, ಯಾದವಾಡದಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಸಂಘವು ಪ್ರತಿ ವರ್ಷ ಗ್ರಾಹಕರಿಗೆ ಲಾಭಾಂಶ ವಿತರಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.20ರಷ್ಟು ಲಾಭಾಂಶ ವಿತರಿಸಿದೆ. ಅಡಿಟ್‌ದಲ್ಲಿ ಅ ಶ್ರೇಣಿ ಪಡೆದು ಗ್ರಾಹಕರ ವಿಶ್ವಾಸ ಗಳಿಸಿದೆ. ವಾಹನ ಖರೀದಿ, ಕೃಷಿ, ಹೈನುಗಾರಿಕೆ, ಗೃಹ ನಿರ್ಮಾಣ, ವ್ಯಾಪಾರ, ಗುಡಿ ಕೈಗಾರಿಕೆಗಳಿಗೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಪೂರೈಸುತ್ತಿದೆ. ಆರ್‌ಟಿಜಿಎಸ್, ನೆಪ್ಟ್ ಮತ್ತು 100 ಯುನಿಟ್‌ಗಳ ಸೇಪ್ ಲಾಕರ್ ವ್ಯವಸ್ಥೆ ಹೊಂದಿದೆ. ಮಹಿಳೆಯರು, ಸೈನಿಕರು, ಹಿರಿಯ ನಾಗರಿಕರಿಗಾಗಿ ಠೇವುಗಳ ಮೇಲೆ ಶೇ.0.50 ಹೆಚ್ಚಿನ ಬಡ್ಡಿ, ಸಣ್ಣ ವ್ಯಾಪಾರಸ್ಥರಿಗಾಗಿ ಶೇ.12 ಬಡ್ಡಿ ದರದಲ್ಲಿ ವ್ಯಾಪಾರ ಅಭಿವೃದ್ದಿ ಸಾಲ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ಕಟ್ಟಡದಲ್ಲಿ ಎಟಿಎಂ ಸೌಲಭ್ಯ ಕಲ್ಪಿಸುವ ಬಗ್ಗೆ ಆಡಳಿತ ಮಂಡಳಿ ನಿರ್ಧರಿಸಿದೆ.
ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಸಂಸ್ಥಾಪಕ ಅಧ್ಯಕ್ಷರಾಗಿ ಈರಣ್ಣ ಕಡಾಡಿ, ಉಪಾಧ್ಯಕ್ಷರಾಗಿ ಶ್ರೀಶೈಲ ತುಪ್ಪದ, ನಿರ್ದೇಶಕರಾಗಿ ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಸತೀಶ ಕಡಾಡಿ, ಶಿವಪ್ಪ ಗೋಸಬಾಳ, ಕಾಶವ್ವ ಹೆಬ್ಬಾಳ, ಅವ್ವಕ್ಕ ಹಡಗಿನಾಳ, ಮಲ್ಲಿಕಾರ್ಜುನ ಹುಲೆನ್ನವರ, ನಿಂಗಪ್ಪ ಮಿಡಕನಟ್ಟಿ ಅವರು ಸಂಸ್ಥೆ ಪ್ರಗತಿಗೆ ಶ್ರಮಿಸುತ್ತಿದ್ದಾರೆ.ಮಹಿಳಾ ಸ್ವ- ಸಹಾಯ ಸಂಘಗಳಿಗೆ ಈವರೆಗೆ ₹60.23 ಕೋಟಿ ಸಾಲ ನೀಡಿ ಗ್ರಾಮೀಣ ಮಹಿಳಾ ಸ್ವಾಲಂಬನೆಗೆ ಮತ್ತು ಸ್ವದೇಶಿ ಚಿಂತನೆ ಸಾಕಾರಕ್ಕೆ ಮಹಾಲಕ್ಷ್ಮೀ ಸೊಸೈಟಿಯು ಹೆಚ್ಚು ಗಮನ ನೀಡಿದೆ. ಈರಣ್ಣ ಕಡಾಡಿ, ಸಂಸ್ಥಾಪಕ ಅಧ್ಯಕ್ಷರು