ಗೋಕರ್ಣ: ಜೀವ- ದೇವಾದ್ವೈತಕ್ಕೆ ಪೀಠಿಕೆಯಾಗಿ ಜೀವ- ಜೀವಗಳ ನಡುವಿನ ಅದ್ವೈತದ ಪ್ರತೀಕವೇ ಮಹಾಮಂಡಲೋತ್ಸವ. ಪ್ರತಿಭಾ ಪ್ರದರ್ಶನಕ್ಕೆ ಇದು ವೇದಿಕೆ. ಅಂತರಂಗದ ಪ್ರತಿಭೆಯನ್ನು ತೋರಿಸಿಕೊಡುವ ವೇದಿಕೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಸೋಮವಾರ ಅಶೋಕೆಯ ಗುರುದೃಷ್ಟಿಯಲ್ಲಿ ಮೂರು ದಿನಗಳ ಕಾಲ ನಡೆದ ಹವ್ಯಕ ಮಹಾಮಂಡಲೋತ್ಸವ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮಹಾಮಂಡಲೋತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಸಮಾಜದ ಎಲ್ಲ ವಯೋಮಾನದವರು ಭಾಗವಹಿಸಿ ಪರಸ್ಪರ ಖುಷಿಯನ್ನು ಹಂಚಿಕೊಂಡು ನಕ್ಕು ನಲಿಯುವ ಹಬ್ಬ. ಈ ಬಾರಿ ಇಂಥ ಮಹಾಮಂಡಲೋತ್ಸವಕ್ಕೆ ಶಕಟಪುರ ಶ್ರೀಗಳ ಸಾನ್ನಿಧ್ಯ ದೊರಕಿದೆ ಎಂದು ಬಣ್ಣಿಸಿದರು.ಶಕಟಪುರ ಶ್ರೀಗಳ ಜತೆಗಿನ ಆತ್ಮೀಯ ಸಂಬಂಧವನ್ನು ಮೆಲುಕು ಹಾಕಿದ ಶ್ರೀಗಳು, ಹಲವು ಯತಿಗಳ ಜತೆ ಸಂವಾದ, ಭಾವಾದ್ವೈತ ನಡೆದರೂ, ಶಕಟಪುರ ಸ್ವಾಮೀಜಿಯವರ ಜತೆಗಿನ ಸಮಾಗಮ ಅವಿಸ್ಮರಣೀಯ. ಇದು ಮಠ, ಯತಿಗಳು ಮತ್ತು ಶಿಷ್ಯರ ನಡುವಿನ ಅದ್ವೈತ ಎಂದು ವಿಶ್ಲೇಷಿಸಿದರು.
ಹೊಸೂರಿನ ಕೃಷ್ಣಾತ್ಮಾನಂದ ಸರಸ್ವತಿ ಸ್ವಾಮೀಜಿ, ಶಕಟಪುರದ ಆಡಳಿತಾಧಿಕಾರಿ ಎಂ. ಚಂದ್ರಮೌಳೀಶ್ವರ, ಶ್ರೀಮಠದ ರಾಘವ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಪದಾಧಿಕಾರಿಗಳಾದ ಈಶ್ವರ ಪ್ರಸಾದ್ ಕನ್ಯಾನ, ಕೇಶವ ಪ್ರಸಾದ್ ಎಂ., ಜಿ.ಜಿ. ಹೆಗಡೆ ತಲೆಕೇರಿ, ವೀಣಾ ಗೋಪಾಲಕೃಷ್ಣ ಪುಳು, ರುಕ್ಮಾವತಿ ಸಾಗರ, ವೆಂಕಟೇಶ ಹಾರೇಬೈಲ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧಿಕಾರಿ ಜೆ.ಎಲ್. ಗಣೇಶ್, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ್ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಹಿರಿಯ ಅಭಿಯೋಜಕರಾದ ಅರುಣ್‍ಶ್ಯಾಮ, ವಿವಿವಿ ಆಡಳಿತಾಧಿಕಾರಿ ಡಾ. ಟಿ.ಜಿ. ಪ್ರಸನ್ನ ಕುಮಾರ್, ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ವಿ. ಹೆಗಡೆ, ಜಿ.ಕೆ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಹೆಗಡೆ ನಿರೂಪಿಸಿದರು.
ಬಳಿಕ ನಡೆದ ಹವ್ಯಕ ಕ್ರೀಡಾಕೂಟದಲ್ಲಿ ಹೊನ್ನಾವರ ಮಂಡಲ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ 700ಕ್ಕೂ ಹೆಚ್ಚು ಮಂದಿ ಕ್ರೀಡಾ ಹಾಗೂ ಬೌದ್ಧಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.