-ಕಲಬುರಗಿ ಸಚಿವ ಸಂಪುಟದಲ್ಲಿ ತೀರ್ಮಾನ । ಪ್ರಾವಾಸೋದ್ಯಮ, ಕೆರೆಗಳ ಭರ್ತಿಗೆ ಅನುದಾನ । ಜನರ ಕನಸು ನನಸಾಗಿದೆ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುದಶಕದ ಬಳಿಕ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ರಾಯಚೂರು ಜಿಲ್ಲೆಗೆ ಸಮಧಾನಕರ ಆದ್ಯತೆ ಲಭಿಸಿದ್ದು, ಬಹುದಿನಗಳ ಬೇಡಿಕೆಯಾಗಿದ್ದ ರಾಯಚೂರು ನಗರವನ್ನು ಮಹಾನಗರ ಪಾಲಿಕೆಯನ್ನಾಗಿ ಘೋಷಣೆ, ಪ್ರವಾಸೋದ್ಯಮ ಮತ್ತು ಕೆರೆಗಳ ಭರ್ತಿಗೆ ಅನುದಾನ ಸೇರಿದಂತೆ ವಿವಿಧ ಆರೋಗ್ಯ ಮತ್ತು ನೀರಾವರಿಗೆ ಸಂಬಂಧಿಸಿದಂತೆ ವಿಷಯಗಳನ್ನು ಪ್ರಸ್ತಾಪಿಸಿ ಅವುಗಳಿಗೆ ಅನುಮೋದನೆ ನೀಡಲಾಗಿದೆ.
ಮಹಾನಗರ ಪಾಲಿಕೆ ಸಾಕಾರ: ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಹೊಂದುವ ದೃಷ್ಠಿಕೋನದಿಂದ ರಾಯಚೂರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಿ ಮಹಾನಗರ ಪಾಲಿಕೆಯನ್ನಾಗಿಸಬೇಕು ಎನ್ನುವ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಸಾಕಾರಗೊಳಿಸಿದೆ. ಕಳೆದ ಅವಧಿಯ ಬಿಜೆಪಿ ಸರ್ಕಾರವು ರಾಯಚೂರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಿ ಮಹಾನಗರ ಪಾಲಿಕೆಯನ್ನಾಗಿಸುವುದರ ಕುರಿತ ಮಾನದಂಡಗಳ ಪರಿಶೀಲನೆ ಮಾಡುವುವುದಾಗಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದು ಬಿಟ್ಟರೇ ಅದರ ಅನುಷ್ಠಾನಕ್ಕೆ ಯಾವುದೇ ರೀತಿಯ ಪ್ರಯತ್ನ ಮಾಡಿರಲಿಲ್ಲ. ಇದೀಗ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಲಬುರಗಿಯಲ್ಲಿ ಜರುಗಿದ ಸಚಿವ ಸಂಪುಟದಲ್ಲಿ ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಿ ಮಹಾನಗರ ಪಾಲಿಕೆಯನ್ನಾಗಿಸುವ ನಿರ್ಣಯವನ್ನು ತೆಗೆದುಕೊಳ್ಳುವುದರ ಮೂಲಕ ನಿವಾಸಿಗಳ ಬಹುದಿನಗಳ ಕನಸು ನನಸಾದಂತಾಗಿದೆ.
ಆಡಳಿತಸೌಧ ಅನುಮೋದನೆ: ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯ ರಾಯಚೂರು ಜಿಲ್ಲೆಯ ನೂತನ ತಾಲೂಕುಗಳಾದ ಸಿರವಾರ ಹಾಗೂ ಮಸ್ಕಿ ತಾಲೂಕು ಕೇಂದ್ರದಲ್ಲಿ ಮೊದಲನೇ ಹಂತದಲ್ಲಿ ಟೈಪ್ ಎ ಮಾದರಿಯಲ್ಲಿ ತಲಾ 8.60 ಕೋಟಿಯಂತೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವ್ಯಾಪ್ತಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಒಂದು ವಸತಿ ಶಾಲೆ ನಿರ್ಮಾಣಕ್ಕೆ 22 ಕೋಟಿ ಅನುದಾನಕ್ಕೆ ಅನುಮೋದನೆ ಮತ್ತು ಹಟ್ಟಿ ಚಿನ್ನದ ಗಣಿ ಕಂಪೆನಿಯ ಹಿರಾ ಬುದಿನ್ನಿ ಚಿನ್ನದ ಗಣಿಯಲ್ಲಿ ಪ್ರಸ್ತುತ ಇರುವ ಶಾಫ್ಟ್ ಆಳ ಹೆಚ್ಚಿಸುವ ಹಾಗೂ ಹೊಸ ಶಾಫ್ಟ್ ಅಳವಡಿಕೆ, ಅಗತ್ಯ ಕಾಮಗಾರಿ ನಿರ್ವಹಣೆ ಒಟ್ಟು 175 ಕೋಟಿ ವೆಚ್ಚವಾಗಲಿರುವ ಹಿನ್ನೆಲೆಯಲ್ಲಿ ಈ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟವು ಒಪ್ಪಿಗೆನೀಡಿದೆ.
ಪ್ರಾವಾಸೋದ್ಯಮಕ್ಕೆ 10 ಕೊಟಿ: ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಯಡಿ ವಿಶೇಷ ಆಸಕ್ತಿ ತೋರಿ 510 ಕೋಟಿ ಮೀಸಲಿಟ್ಟಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಸೇತುವೆಯ ಅಲ್ಲಮಪ್ರಭು ದೇವಸ್ಥಾನ ಪ್ರಗತಿ. ಮಸ್ಕಿ ಅಶೋಕ ಶಿಲಾಶಾಸನ ಅಭಿವೃದ್ಧಿಗೆ 10 ಕೋಟಿ ನೀಡಲಾಗಿದೆ. ಅಷ್ಟೇ ಅಲ್ಲದೇ ತುಂಗಭದ್ರಾ ಜಲಾಶಯಕ್ಕೆ ಪರ್ಯಾಯ ಜಲಾಶಯ ನಿರ್ಮಾಣಕ್ಕಾಗಿ ನವಲಿ ಸಮೀಪ ಬಿಆರ್ ನಿರ್ಮಿಸಲು ಅಗತ್ಯವಾದ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳಲು 9 ಸಾವಿರ ಕೋಟಿ ಒದಗಿಸಿದ್ದು, ಭೂಸ್ವಾಧೀನಕ್ಕೆ 6 ಸಾವಿರ ಕೋಟಿ ಎಚ್ಚದಲ್ಲಿ ನವಲಿ ಬಿಆರ್ ನಿರ್ಮಿಸಲು ಅಂದಾಜಿಸಲಾಗಿದೆ.
....ಕೋಟ್.....
-ಎನ್.ಎಸ್.ಬೋಸರಾಜು, ಸಚಿವ ಸಣ್ಣ ನೀರಾವರಿ,ವಿಜ್ಞಾನ ಮತ್ತು ತಂತ್ರಜ್ಞಾನ