ಮಹಾನಗರ ಪಾಲಿಕೆ ಮೇಯರ್‌ಗಿರಿ ಪಕ್ಷೆತರರಿಗೆ?

KannadaprabhaNewsNetwork |  
Published : Jun 18, 2026, 02:00 AM IST
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ. | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌ಗಿರಿ ಈ ಬಾರಿ ಪಕ್ಷೇತರ ಸದಸ್ಯರ ಪಾಲಾಗುವುದು ಬಹುತೇಕ ಖಚಿತವಾಗಿದೆ!

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌ಗಿರಿ ಈ ಬಾರಿ ಪಕ್ಷೇತರ ಸದಸ್ಯರ ಪಾಲಾಗುವುದು ಬಹುತೇಕ ಖಚಿತವಾಗಿದೆ!

ಸದ್ಯ ಪಾಲಿಕೆಗೆ ಮೇಯರ್‌-ಉಪ ಮೇಯರ್‌ ಆಗಿರುವ ಜ್ಯೋತಿ ಪಾಟೀಲ, ಸಂತೋಷ ಚವ್ಹಾಣ ಅವರ ಅಧಿಕಾರಾವಧಿ ಜೂ. 30ಕ್ಕೆ ಮುಕ್ತಾಯವಾಗಲಿದೆ. ಜು. 3 ಅಥವಾ 4ಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಈ ಬಾರಿ ಮೇಯರ್‌ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದೆ. ಆದರೆ, ಆಡಳಿತಾರೂಢ ಬಿಜೆಪಿಯಲ್ಲಿ ಯಾವುದೇ ಎಸ್‌ಸಿ ಮಹಿಳಾ ಸದಸ್ಯರು ಇಲ್ಲ. 56ನೇ ವಾರ್ಡ್‌ನ ಚಂದ್ರಿಕಾ ಮೇಸ್ತ್ರಿ ಹಾಗೂ 69ನೇ ವಾರ್ಡ್‌ನ ದುರ್ಗಮ್ಮ ಬಿಜವಾಡ ಎಸ್ಸಿ ವರ್ಗಕ್ಕೆ ಸೇರಿದವರು. ಇವರಿಬ್ಬರೂ ಪಕ್ಷೇತರ ಸದಸ್ಯರು.

ಇವಬ್ಬರೂ ಬಿಜೆಪಿ ಟಿಕೆಟ್‌ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಆರಿಸಿ ಬಂದವರು. ಚುನಾವಣೆ ಬಳಿಕ ಬಿಜೆಪಿಗೆ ಬೆಂಬಲಿಸುವ ಮೂಲಕ ಬಿಜೆಪಿಗರೆನಿಸಿದ್ದಾರೆ. ಹಾಗಾಗಿ ಪಕ್ಷೇತರರಾಗಿ ಆರಿಸಿ ಬಂದವರಿಗೆ ಬಿಜೆಪಿ ಮಣೆ ಹಾಕಬೇಕಿರುವುದು ಈಗ ಅನಿವಾರ್ಯವಾಗಿದೆ.

ಈ ನಡುವೆ ದುರ್ಗಮ್ಮ ಬಿಜವಾಡ (ರಾಮಪ್ಪ ಬಡಿಗೇರ್‌ ಮೇಯರ್‌ ಆಗಿದ್ದ ವೇಳೆ) ಉಪಮೇಯರ್‌ ಆಗಿ ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಚಂದ್ರಿಕಾ ಮೇಸ್ತ್ರಿ ಮೇಯರ್‌ ಆಗುವ ಸಾಧ್ಯತೆ ಹೆಚ್ಚಿದೆ.

ಉಪಮೇಯರ್‌ ಪೈಪೋಟಿ:

ಉಪಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಪೈಪೋಟಿ ತುಸು ಜೋರಾಗಿದೆ. ಮೇಯರ್‌ಗಿರಿ ಹುಬ್ಬಳ್ಳಿಗೆ ಸಿಗಲಿದ್ದು ಧಾರವಾಡಕ್ಕೆ ಉಪಮೇಯರ್‌ ಸ್ಥಾನ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಧಾರವಾಡದ ಅನಿತಾ ಚಳಗೇರಿ, ರತ್ನಾಬಾಯಿ ನಾಝರೆ, ಸುನಿತಾ ಮಾಳೋದಕರ ಸೇರಿದಂತೆ ಬಹಳಷ್ಟು ಜನ ಪೈಪೋಟಿ ನಡೆಸುತ್ತಿದ್ದು, ಈ ಮೂವರ ಹೆಸರು ಮುಂಚೂಣಿಯಲ್ಲಿದೆ.

ಆದರೂ ಜಿಲ್ಲೆಯ ಮಟ್ಟಿಗೆ ಹೈಕಮಾಂಡ್‌ನಂತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಅವರೇ ನಿರ್ಣಾಯಕ. ಈ ಮೂವರು ಚರ್ಚಿಸಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಕಾಯ್ದು ನೋಡಬೇಕು.

ಎಂ. ನಾಗರಾಜ, ಲಿಂಪಾಗೆ ಮತದಾನದ ಹಕ್ಕು?

ಈ ನಡುವೆ ಹುಬ್ಬಳ್ಳಿಗರೇ ಆಗಿರುವ ಎಂ. ನಾಗರಾಜ ಈಗಾಗಲೇ ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ, ಇನ್ನು ಪ್ರಮಾಣ ವಚನ ಸ್ವೀಕರಿಸಿಲ್ಲ. ಜೂ. 24ಕ್ಕೆ ರಾಜ್ಯಸಭಾ ಸದಸ್ಯತ್ವ ಮುಗಿಯಲಿರುವ ಸ್ಥಾನಕ್ಕೆ ನಾಗರಾಜ ಅವರು ಸದಸ್ಯರಾಗಿದ್ದಾರೆ. ಹೀಗಾಗಿ ಜೂ. 25ರ ನಂತರವೇ ಪ್ರಮಾಣ ವಚನ ಸ್ವೀಕರಿಸಬೇಕು. ಜತೆಗೆ ವಿಧಾನಸಭೆಯಿಂದ ಪರಿಷತ್‌ಗೆ ಜೂ. 18ಕ್ಕೆ ಚುನಾವಣೆ ನಡೆಯಲಿದೆ. ಇದಕ್ಕೂ ಹುಬ್ಬಳ್ಳಿಯ ಮತದಾರರಾಗಿರುವ ಲಿಂಗರಾಜ ಪಾಟೀಲ ಬಿಜೆಪಿ ಅಭ್ಯರ್ಥಿಯಾಗಿದ್ದು, ಗೆಲುವು ನಿಶ್ಚಿತ. ಆದರೆ, ಇವರು ಜೂ. 28ರ ನಂತರವೇ ಪ್ರಮಾಣ ವಚನ ಸ್ವೀಕರಿಸಬೇಕು. ಒಂದು ವೇಳೆ ಮೇಯರ್‌-ಉಪ ಮೇಯರ್‌ ಚುನಾವಣೆಯನ್ನು ಏಳು ದಿನಗಳ ಮೊದಲೇ ಘೋಷಣೆ ಮಾಡಬೇಕು. ಮತದಾರರ ಪಟ್ಟಿ ಬಿಡುಗಡೆ ಮಾಡಬೇಕು. ಘೋಷಣೆ ಮಾಡಿದ ಬಳಿಕ ಇವರು ಮತದಾರರಾದರೆ ಚುನಾವಣೆಯಲ್ಲಿ ಇವರನ್ನು ಕೈಬಿಡುವಂತಿಲ್ಲ. ಹೀಗಾಗಿ ಆಗ ಮತ್ತೊಮ್ಮೆ ನೋಟಿಫಿಕೇಶನ್‌ ಹೊರಡಿಸಿ ಘೋಷಣೆ ಮಾಡಬೇಕಾಗುತ್ತದೆ. ಚುನಾವಣೆ ನಡೆಯುವ ವೇಳೆಯಲ್ಲಿ ಇವರ ಜನಪ್ರತಿನಿಧಿಗಳ ವೋಟಿಂಗ್‌ ಇಲ್ಲದಿದ್ದಲ್ಲಿ ಸಮಸ್ಯೆಯಾಗಲ್ಲ. ಹೀಗಾಗಿ ನೋಟಿಫಿಕೇಶನ್‌ ಹೊರಡಿಸುವುದಕ್ಕೆ ಸದ್ಯಕ್ಕೆ ಕೊಂಚ ತಾಂತ್ರಿಕ ಸಮಸ್ಯೆ ಇದೆ. ಏನಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು