ಹುಬ್ಬಳ್ಳಿ:
ಇವು ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಮಂಗಳವಾರ ತೆರಿಗೆ ನಿರ್ಧರಣೆ ಹಣಕಾಸು ಹಾಗೂ ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ವಂಟಮೂರಿ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ಸಲಹೆ-ಸೂಚನೆಗಳು.
ಪಾಲಿಕೆ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಶರತ್ ದೊಡ್ಡಮನಿ ಮಾತನಾಡಿ, ರೈಲ್ವೆ ಇಲಾಖೆಯ 800 ಆಸ್ತಿಗಳಿದ್ದು, ಅವುಗಳಿಂದ ಕರ ಪಾವತಿಯಾಗುತ್ತಿಲ್ಲ. ಈ ಹಿಂದೆಯೇ ನೈಋತ್ಯ ರೈಲ್ವೆ ಅಧಿಕಾರಿಗಳು ಪಾಲಿಕೆಯಿಂದ ಪಿಐಡಿ ಸಂಖ್ಯೆ ನೀಡಿದರೆ ಪಾವತಿ ಮಾಡುವುದಾಗಿ ಹೇಳಿದ್ದಾರೆ. ಆದರೆ, ಈವರೆಗೂ ಪಿಐಡಿ ಸಂಖ್ಯೆ ನೀಡಿಲ್ಲ. ಜತೆಗೆ ನಗರದ ವಿಮಾನ ನಿಲ್ದಾಣದಿಂದಲೂ ಕರ ಆಕರಿಸಲಾಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಅವಳಿ ನಗರದಲ್ಲಿ ಒಂದೂವರೆ ಲಕ್ಷ ಕಾರುಗಳಿವೆ. ಇವುಗಳಲ್ಲಿ ಒಂದು ಲಕ್ಷ ಕಾರುಗಳನ್ನು ರಸ್ತೆಯ ಮೇಲೆ ನಿಲ್ಲಿಸಲಾಗುತ್ತಿದೆ. ಕರ ಸಂಗ್ರಹಿಸಿದಲ್ಲಿ ಪಾಲಿಕೆ ಆದಾಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.ಸಂಜೀವ ದುಮ್ಮಕನಾಳ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿರುವ ಮಳಿಗೆಗಳ ತೆರಿಗೆ ಹೆಚ್ಚಳ ಮಾಡಬೇಕು. ಕನ್ನಡ ಭವನ, ಸಾಂಸ್ಕೃತಿಕ ಭವನ ಹಾಗೂ ಟೌನ್ ಹಾಲ್ ನಿರ್ವಹಣೆಯಿಲ್ಲದೇ ಹಾಳಾಗಿದ್ದು, ಇವುಗಳನ್ನು ದುರಸ್ತಿಗೊಳಿಸಬೇಕಿದೆ ಎಂದರುದಲಿತ ಸಂಘಟನೆಯ ಮುಖಂಡ ಗುರುನಾಥ ಉಳ್ಳಿಕಾಶಿ ಮಾತನಾಡಿ, ಈ ಹಿಂದೆ ಪಾಲಿಕೆ ವ್ಯಾಪ್ತಿಯಲ್ಲಿದ್ದ ಲ್ಯಾಮಿಂಗ್ಟನ್ ಶಾಲೆಯನ್ನು ಇಂದು ಖಾಸಗಿಗೆ ನೀಡಲಾಗಿದೆ. ಅದನ್ನು ಮರಳಿ ಪಾಲಿಕೆಗೆ ಮರಳಿ ಪಡೆದು ಕಡಿಮೆ ಪ್ರವೇಶ ನಿಗದಿಗೊಳಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿಯಾಗಬೇಕಿದೆ ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಸಿದ್ದೇಶ್ವರ ಕಮ್ಮಾರ, ಶೇಖರಯ್ಯ ಮಠಪತಿ, ಪ್ರೇಮನಾಥ ಚಿಕ್ಕತುಂಬಳ, ಜಯಶ್ರೀ ಗರಗ, ಎಂ.ಸಿ. ನದಾಫ ಸೇರಿದಂತೆ ಹಲವರು ಸಲಹೆ ನೀಡಿದರು.
ಎಲ್ಲರ ಸಲಹೆ ಆಲಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪಾಲಿಕೆ ಮಂಡಿಸುವ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾರ್ವಜನಿಕರು ಸಹಕಾರ ನೀಡಿದರೆ, ಸೋರಿಕೆ ತಡೆದು ನಿರೀಕ್ಷಿತ ಆದಾಯ ಕ್ರೂಡ್ರೀಕರಣ ಮಾಡಬಹುದು. ಆದರೆ, ಸದ್ಯ ಇದರ ಕೊರತೆಯಿಂದ ಸಮರ್ಪಕ ಯೋಜನೆಗಳ ಅನುಷ್ಠಾನಕ್ಕೆ ಅಡಚಣೆ ಆಗುತ್ತಿದ್ದರಿಂದ ಪಾಲಿಕೆ ಅಸಹಾಯಕ ಸ್ಥಿತಿ ಎದುರಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ತೆರಿಗೆ ನಿರ್ಧರಣೆ ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ವಂಟಮುರಿ, ಸದಸ್ಯರಾದ ಚಂದ್ರಕಲಾ ಕೊಟಬಾಗಿ, ಸುಮಿತ್ರಾ ಗುಂಜಾಳ, ಮನಸೂರಾ ಮುದಗಲ್, ಕವಿತಾ ಕಬ್ಬೇರ, ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಉಪ ಆಯುಕ್ತೆ ಅನುರಾಧ ವಸ್ತ್ರದ ಸೇರಿದಂತೆ ಹಲವರಿದ್ದರು.