ಕಸ ವಿಲೇವಾರಿ ಖಾಸಗೀಕರಣಕ್ಕೆ ಮಹಾನಗರ ಪಾಲಿಕೆ ಮುಂದಡಿ

KannadaprabhaNewsNetwork |  
Published : Jan 08, 2025, 12:18 AM IST
ಮಹಾನಗರ ಪಾಲಿಕೆ | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 82 ವಾರ್ಡ್‌ಗಳಿದ್ದು ಕಸ ವಿಲೇವಾರಿಗೆ 386ಕ್ಕೂ ಅಧಿಕ ಟಿಪ್ಪರ್‌ ಬೇಕಾಗುತ್ತದೆ. ಸದ್ಯ 236 ಟಿಪ್ಪರ್‌ಗಳಿವೆ. ಇಷ್ಟು ಟಿಪ್ಪರ್‌ ಸಾಲುವುದಿಲ್ಲ. ಸದ್ಯ 66 ಟಿಪ್ಪರ್‌ ಖಾಸಗಿಯಾಗಿ ಗುತ್ತಿಗೆ ನೀಡುವುದು ಉತ್ತಮ.

ಹುಬ್ಬಳ್ಳಿ:

ಕಸ ವಿಲೇವಾರಿಗೆ ಆಟೋ ಟಿಪ್ಪರ್‌ ಖರೀದಿಸದೇ ನೇರವಾಗಿ ಖಾಸಗಿ ಸಂಸ್ಥೆಯಿಂದ ಗುತ್ತಿಗೆ ಆಧಾರದ ಮೇಲೆ ನೀಡಲು ಪಾಲಿಕೆ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ. ಈ ಮೂಲಕ ಕಸವಿಲೇವಾರಿ ಖಾಸಗೀಕರಣಕ್ಕೆ ಮುಂದಡಿ ಇಟ್ಟಂತಾಗಿದೆ.

ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆ ನಡೆದು ಕೊನೆಗೆ ಎಲ್ಲರೂ ಇದಕ್ಕೆ ಸಹಮತ ತೋರಿದರು. ಪಾಲಿಕೆ ವ್ಯಾಪ್ತಿಯಲ್ಲಿ 82 ವಾರ್ಡ್‌ಗಳಿದ್ದು ಕಸ ವಿಲೇವಾರಿಗೆ 386ಕ್ಕೂ ಅಧಿಕ ಟಿಪ್ಪರ್‌ ಬೇಕಾಗುತ್ತದೆ. ಸದ್ಯ 236 ಟಿಪ್ಪರ್‌ಗಳಿವೆ. ಇಷ್ಟು ಟಿಪ್ಪರ್‌ ಸಾಲುವುದಿಲ್ಲ. ಸದ್ಯ 66 ಟಿಪ್ಪರ್‌ ಖಾಸಗಿಯಾಗಿ ಗುತ್ತಿಗೆ ನೀಡುವುದು ಉತ್ತಮ ಎಂದು ಸದಸ್ಯ ರಾಜಣ್ಣ ಕೊರವಿ ತಿಳಿಸಿದರು. ಆದರೆ, ಟಿಪ್ಪರ್‌ ಬಾಡಿಗೆ ದರ ನಿಗದಿಪಡಿಸಿದಕ್ಕೆ ಈರೇಶ ಅಂಚಟಗೇರಿ ಆಕ್ಷೇಪಿಸಿದರು. ಮೇಯರ್‌ ತೆರಳುವ ವಾಹನಕ್ಕೆ ₹ 55 ಸಾವಿರ ಬಾಡಿಗೆ ಇದೆ. ಆದರೆ, ಕಸ ವಿಲೇವಾರಿ ವಾಹನಕ್ಕೆ ₹ 75 ಸಾವಿರಕ್ಕೂ ಅಧಿಕ ನಿಗದಿಪಡಿಸಿರುವುದು ಸರಿಯಲ್ಲ ಎಂದರು. ಆಗ ಪರಿಸರ ಅಭಿಯಂತರ ಮಲ್ಲಿಕಾರ್ಜುನ, ಯಾವ ರೀತಿ ₹ 75 ಸಾವಿರ ನಿಗದಿಪಡಿಸಲಾಗಿದೆ ಎಂಬುದನ್ನು ವಿವರಿಸಿದರು. ಆಟೋ ಟಿಪ್ಪರ್‌ ಇಲ್ಲದ ಕಾರಣ ಕಸವಿಲೇವಾರಿ ಕಷ್ಟವಾಗುತ್ತಿದೆ. ಹೀಗಾಗಿ ಗುತ್ತಿಗೆ ನೀಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾದ ಬಳಿಕ ಇದಕ್ಕೆ ಒಪ್ಪಿಗೆ ಸೂಚಿಸಲಾಯಿತು.

ಕೆರೆಗಳ ರಕ್ಷಣೆ:

ಕೆರೆಗಳನ್ನು ಉಳಿಸುವುದು ಪಾಲಿಕೆ ಕರ್ತವ್ಯ. ಜತೆಗೆ ಅದರ ಸುತ್ತಲು ಇರುವ ಬಡವರಿಗೆ ಅನ್ಯಾಯ ಮಾಡದೆ ಅವರ ಮನೆ ಉಳಿಸಬೇಕು. ಇಲ್ಲವಾದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಮೇಯರ್‌ ರಾಮಪ್ಪ ಬಡಿಗೇರ ಆದೇಶಿಸಿದರು. ಕೋಳಿಕೆರೆ ಸುತ್ತಲಿನಲ್ಲಿ ವಾಸಿಸುವ ಜನರ ಮನೆ ತೆರವು ಮಾಡಲು ಯಾವ ಆಧಾರ ಮೇಲೆ ನೋಟಿಸ್ ನೀಡಲಾಗಿದೆ ಎಂದು ಸದಸ್ಯ ಶಂಕರ ಶೆಳಕೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದರು.

ಆಯುಕ್ತ ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯಿಸಿ, 50-60 ಮನೆಗಳು ಕೆರೆ ಅತಿಕ್ರಮಣ ಮಾಡಿದ ಹಿನ್ನೆಲೆ ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಅತಿಕ್ರಮಣ ಮಾಡಿರುವ ಬಗ್ಗೆ ಹೈಕೋರ್ಟ್‌ನಲ್ಲಿ ರೀಟ್ ಅರ್ಜಿ ಸಲ್ಲಿಸಲಾಗಿದೆ. ಇತ್ತೀಚಿಗೆ ಉಪ ಆಯುಕ್ತರು ಭೇಟಿ ನೀಡಿ ಅತಿಕ್ರಮಣ ಬಗ್ಗೆ ದೂರು ದಾಖಲಿಸಿಕೊಂಡಿದ್ದರು ಎಂದು ಉತ್ತರಿಸಿದರು. ಕೋಳಿಕೆರೆ 20 ವರ್ಷದಿಂದ ಅಭಿವೃದ್ಧಿ ಆಗುತ್ತಿದೆ. ಅಲ್ಲಿ ನಿರ್ಮಿಸುವ ಮನೆಗಳು 300 ಮೀಟರ್ ದೂರದಲ್ಲಿವೆ. ಅಷ್ಟೇ ಅಲ್ಲದೇ ನಾಲಾ ಅಭಿವೃದ್ಧಿ ಸಹ ಅಲ್ಲಿ ಮಾಡಲಾಗಿದೆ. 50 ವರ್ಷದಿಂದ ಅವರು ಅಲ್ಲಿಯೇ ವಾಸವಾಗಿದ್ದಾರೆ. ಈಗ ತೆರವು ಮಾಡಿ ಎಂದರೆ ಹೇಗೆ? ಅವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸದಸ್ಯ ಈರೇಶ ಅಂಚಟಗೇರಿ ಮಾತನಾಡಿ, ಮಹಾನಗರದ ಬಹುತೇಕ ಕೆರೆ ಅತಿಕ್ರಮಣ ಆಗಿದ್ದು ದಾಖಲೆ ಸಂಗ್ರಹಿಸಿ ತೆರವುಗೊಳಿಸಬೇಕು ಎಂದರು. ಅಲ್ಲಿರುವ ಮನೆ ಮಾಲೀಕರಿಗೆ ಪರಿಹಾರ ವ್ಯವಸ್ಥೆ ಮಾಡಿ ತೆರವುಗೊಳಿಸಬೇಕು ಎಂದು ವೀರಣ್ಣ ಸವಡಿ ಧ್ವನಿಗೂಡಿಸಿದರು.

ಅವಶ್ಯಕತೆ ಇಲ್ಲ:

ಕಾಮಗಾರಿಯ ಮುಕ್ತಾಯ ಪ್ರಮಾಣ ಪತ್ರ ಹಾಗೂ ಕಾಮಗಾರಿಯಾದ ಬಗ್ಗೆ ಬಿಲ್ ಪಾವತಿಗೆ ವಲಯ ಸಹಾಯಕ ಆಯುಕ್ತರ ಸಹಿ ಹಾಗೂ ಸರ್ಕಾರದ ಆದೇಶದ ಅವಶ್ಯಕತೆ ಇಲ್ಲ. ನಿಯಮಗಳ ಉಲ್ಲಂಘಿಸಿ ಇದನ್ನು ಮಾಡಲಾಗುತ್ತಿದೆ ಎಂದು ಸದಸ್ಯ ಸತೀಶ ಹಾನಗಲ್‌ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ‌ ಪ್ರತಿಕ್ರಿಯಿಸಿದ ಆಯುಕ್ತರು, ಲೋಕೋಪಯೋಗಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಬಹಳ ವ್ಯತ್ಯಾಸವಿದೆ. ₹ 1 ಕೋಟಿ ಬಿಲ್ ಲೋಕೋಪಯೋಗಿ ಇಲಾಖೆಗೆ ಹೋಗುವುದಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತವೆ‌. ಪಾಲಿಕೆ ವ್ಯಾಪ್ತಿಯಲ್ಲಿ ಅದು ಕಡಿಮೆಯಾಗುತ್ತದೆ. ಆದ್ದರಿಂದ ಘನತೆಗೆ ಚ್ಯುತಿ ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಆಗ ಸತೀಶ ಹಾನಗಲ್ ಮಾತನಾಡಿ, ಈರೇಶ ಅಂಚಟಗೇರಿ ಮೇಯರ್ ಇದ್ದಾಗ ಆದೇಶವಾಗಿದೆ. ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಆದೇಶ ಪಾಲಿಸಬೇಕು. ಕಾಮಗಾರಿ ಹಾಗೂ ಟೆಂಡರ್ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಈರೇಶ ಅಂಚಟಗೇರಿ, ಈ ವಿಚಾರದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಲಿ. ಆದರೆ, ತಪ್ಪು ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ