ಡಿಕೆಶಿ ಸಿಎಂ ಆಗಲ್ಲ, ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿ ಕ್ಷಿಪ್ರಕ್ರಾಂತಿ : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

KannadaprabhaNewsNetwork | Updated : Mar 04 2025, 12:06 PM IST

ಸಾರಾಂಶ

ಕುರ್ಚಿಗಾಗಿ, ಅಧಿಕಾರಕ್ಕಾಗಿ ನಿರಂತರ ಗಲಾಟೆಯಾಗುವ, ಒಡೆದ ಮನೆಯಾದ ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ. ರಾಜ್ಯದಲ್ಲೂ ಮಹಾರಾಷ್ಟ್ರದಂತೆ ಕ್ಷಿಪ್ರ ಕ್ರಾಂತಿಯಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

 ದಾವಣಗೆರೆ : ಕುರ್ಚಿಗಾಗಿ, ಅಧಿಕಾರಕ್ಕಾಗಿ ನಿರಂತರ ಗಲಾಟೆಯಾಗುವ, ಒಡೆದ ಮನೆಯಾದ ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ. ರಾಜ್ಯದಲ್ಲೂ ಮಹಾರಾಷ್ಟ್ರದಂತೆ ಕ್ಷಿಪ್ರ ಕ್ರಾಂತಿಯಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಡಾ.ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಕಪ್ಪು, ಸಾಸರ್‌ಗಳಿಂದ ಪರಸ್ಪರ ಹೊಡೆದಾಡಿಕೊಂಡ ಇತಿಹಾಸ, ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಪಕ್ಷದಲ್ಲಿ ಡಿ.ಕೆ.ಶಿವಕುಮಾರ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.

ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲವೆನ್ನುವ ಕಾಂಗ್ರೆಸ್ಸಿನವರೇ ಸಿಎಂ ಕುರ್ಚಿ ಮೇಲೆ ಟವಲ್ ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನಗೊಳ್ಳಲಿದೆ. ಕಾಂಗ್ರೆಸ್ ಒಡೆದು ಹೋಗಲಿದೆ. ಕೆಲವರು ಮುಖ್ಯಮಂತ್ರಿ ಅಂತಾರೆ, ಕೆಲವರು ಇಲ್ಲವೆನ್ನುತ್ತಾರೆ. ಇದೇ ಮುಖ್ಯಮಂತ್ರಿ ಕುರ್ಚಿ ವಿಚಾರಕ್ಕೆ ಕಾಂಗ್ರೆಸ್ಸಿನಲ್ಲಿ ಮತ್ತೆ ಗಲಾಟೆಯಾಗಲಿದೆ ಎಂದರು.

ಡಿ.ಕೆ.ಶಿವಕುಮಾರ ಮುಂಚೆ ಅಲ್ಪಸಂಖ್ಯಾತರು ತಮ್ಮ ಬ್ರದರ್ಸ್‌ ಅಂತಿದ್ದವರು, ಈಗ ತಾವು ಹುಟ್ಟಿದ್ದು ಹಿಂದೂವಾಗಿ, ಸಾಯುವುದೂ ಹಿಂದುವಾಗಿ ಎನ್ನುತ್ತಿದ್ದಾರೆ. ಇದು ಬೇರೆಯದ್ದೇ ಅರ್ಥವನ್ನು ಕೊಡುತ್ತಿದೆ. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಮಾಡುವ ಮುನ್ನ ಪವರ್ ಶೇರಿಂಗ್ ಬಗ್ಗೆ ಮಾತುಕತೆಯಾಗಿದೆ ಎಂದು ಕೆಲ ಸಚಿವರು ಹೇಳುತ್ತಾರೆ. ಆದರೆ, ಮತ್ತೆ ಕೆಲವರು ಇಲ್ಲ ಎನ್ನುತ್ತಾರೆ. ಆದರೆ, ಡಿ.ಕೆ.ಶಿವಕುಮಾರ ಮಾತ್ರ ಮೌನವಾಗಿದ್ದಾರೆ. ಎಲ್ಲ ಸೇರಿ, ಒಡೆದ ಮನೆಯಾದ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನವಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.

ಕೋಟ್‌ ಚಿತ್ರರಂಗದವರ ನಟ್ಟು-ಬೋಲ್ಟ್ ಸರಿ ಮಾಡುತ್ತೇನೆಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಡಿ.ಕೆ.ಶಿವಕುಮಾರ ನೀಡಿರುವ ಇಂತಹ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಹೇಳಿಕೆಯನ್ನು ನೀಡುವುದು ಖಂಡನೀಯ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

 ದಾವಣಗೆರೆಯಲ್ಲಿ ಮಹಾಸಂಗಮ ಸಭೆ ಸಾಧ್ಯತೆ ದಾವಣಗೆರೆ: ವೀರಶೈವ ಲಿಂಗಾಯತ ಸಮುದಾಯ ಬೇರೆ ಯಾವುದೇ ಸಮುದಾಯದ ವಿರೋಧಿಯೂ ಅಲ್ಲ. ಇದೇ ಸಮುದಾಯಕ್ಕೆ ಕೆಲವು ದುಷ್ಟಶಕ್ತಿಗಳಿದ್ದು, ಅವು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

ಬೆಂಗಳೂರಿನಲ್ಲಿ ಮಾ.4ರಂದು ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳು ಒಂದಾಗಲು ಸಭೆ ಕರೆಯಲಾಗಿದೆ. ಮುಂದಿನ ಸಮಾವೇಶದ ಕುರಿತು ಪೂರ್ವಭಾವಿಯಾಗಿ ಅಂದು ಚರ್ಚಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಮಹಾಸಂಗಮ ಸಭೆ ದಾವಣಗೆರೆಯಲ್ಲೇ ನಡೆಯುವ ಸಾಧ್ಯತೆ ಇದೆ. ಮಾ.4ರ ಬೆಂಗಳೂರು ಸಮಾವೇಶದಲ್ಲಿ ದಿನಾಂಕ ಮತ್ತು ಸ್ಥಳ ಘೋಷಿಸಲಾಗುವುದು. ರಾಜ್ಯಾದ್ಯಂತ ಪ್ರವಾಸ ಮಾಡಿ, ಮಹಾಸಂಗಮ ಸಭೆಗೆ ಸಮಾಜ ಬಾಂಧವರನ್ನು ಆಹ್ವಾನಿಸುತ್ತೇವೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮಾವೇಶಕ್ಕೆ ಹೇಳಿಲ್ಲ. ನಾವು ಸಮಾಜದಿಂದ ಸಮಾವೇಶ ಆಯೋಜಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ವೀರಶೈವ ಲಿಂಗಾಯತ ಸಭೆ, ಸಮಾವೇಶಕ್ಕೆ ಬರುವುದಕ್ಕೂ ಧಮ್ಮು ಬೇಕು. ಸಮಾಜದ ಕಾರ್ಯಕ್ರಮವಾಗಿದ್ದು ನಾವು ಯಾರಿಗೂ ಕರೆದಿಲ್ಲ. ಢೋಂಗಿ ರಾಜಕಾರಣ‍ವನ್ನು ಬಿಡಬೇಕು. ಅಭಿಮಾನವಿದ್ದರೆ ಬರಬೇಕಿತ್ತು. ಅಂತಹ ವಯಸ್ಸಾದ ಹಿರಿಯ ಮುಖಂಡ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್‌ ಅಭಿಮಾನದಿಂದ ಸಭೆಗೆ ಬಂದಿದ್ದಾರೆ. ಎಲ್ಲ ಕಡೆ ಸಭೆ, ಸಮಾರಂಭ ಮಾಡುತ್ತಿದ್ದೇವೆ. ಸಮಾಜದ ಬಗ್ಗೆ ಅಭಿಮಾನ ಇದ್ದಿದ್ದರೆ ಬರಬೇಕಿತ್ತು ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಹೇಳಿಕೆಗೆ ರೇಣುಕಾಚಾರ್ಯ ತಿರುಗೇಟು ನೀಡಿದರು. 

Share this article