ತೋಂಟದ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳ ಮಹಾರಥೋತ್ಸವ

KannadaprabhaNewsNetwork | Published : Jan 22, 2025 12:32 AM

ಸಾರಾಂಶ

ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ಸೇವಾ ಸಂಘ ಮತ್ತು ಭಕ್ತರ ಸಹಯೋಗದಲ್ಲಿ ಸಿದ್ದಲಿಂಗೇಶ್ವರ ಜನ್ಮಸ್ಥಳ ತಾಲೂಕಿನ ಹರದನಹಳ್ಳಿಯಲ್ಲಿ ತೋಂಟದ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳ ಮಹಾರಥೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗೇಶ್ವರ ಕೈಂಕರ್ಯ ಸೇವಾ ಸಂಘ ಮತ್ತು ಭಕ್ತರ ಸಹಯೋಗದಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ಜನ್ಮಸ್ಥಳ ತಾಲೂಕಿನ ಹರದನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ತೋಂಟದ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳ ಮಹಾರಥೋತ್ಸವ ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ನಡೆಯಿತು.ಸೋಮವಾರ ಬೆಳಗ್ಗೆಯಿಂದ ಶ್ರೀ ಸ್ವಾಮಿಯವರಿಗೆ ರುದ್ರಾಭಿಷೇಕ, ಮಹಾಮಂಗಳಾರತಿ, ಸಂಜೆ ಗೋದೂಳಿ ಲಗ್ನದಲ್ಲಿ ಗಂಗಾ ಪೂಜೆ. ನಂತರ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಗವಿಮಠ, ನವಲಗುಂದ ಮತ್ತು ಶ್ರೀ ಗಂಗಾಧರ ಮಹಾಸ್ವಾಮಿಗಳು, ಗುರು ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠ, ಯಶವಂತನಗರ ಇವರ ಅಮೃತ ಹಸ್ತದಿಂದ ಧ್ವಜಾರೋಹಣ ಕಾರ್ಯಕ್ರಮಗಳು ನಡೆದವು. ಜ.೨೧ರಂದು ವಿಜಯಾಭ್ಯುದಯ ಶ್ರೀ ಶಾಲಿವಾಹನ ಶಕೆ ೧೯೪೬ನೇ ವರ್ತಮಾನಕ್ಕೆ ಸಲ್ಲುವ ಶ್ರೀ ಕ್ರೋಧಿನಾಮ ಸಂವತ್ಸರದ ಉತ್ತರಾಯಣೇ ಪುಷ್ಯ್ಯ ಮಂಗಳವಾರ ಬೆಳಗ್ಗೆ ೪.೦೦ ರಿಂದ ೬.೦೦ ಗಂಟೆಯೊಳಗೆ ಶ್ರೀಸ್ವಾಮಿಯವರಿಗೆ ಏಕಾದಶ ರುದ್ರಾಭಿಷೇಕ, ಸಹಸ್ರ ಜಿಲ್ವಾರ್ಚನೆ, ಮಹಾಮಂಗಳಾರತಿ ನಡೆದವು. ಮಧ್ಯಾಹ್ನ ೧೨.೦೦ಕ್ಕೆ ಅಭಿಜಿನ್ ಲಗ್ನದಲ್ಲಿ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ಗಂಗಾಧರ ಮಹಾಸ್ವಾಮಿಗಳು ಮತ್ತು ಹರಗುರು ಚರಮೂರ್ತಿಗಳವರಿಂದ ನಂದಿಧ್ವಜ ಪೂಜೆಯೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ರಥೋತ್ಸವ ನಡೆಯಿತು, ರಥೋತ್ಸವಕ್ಕೂ ಮುನ್ನ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ನಂದಿಧ್ವಜ, ವೀರಗಾಸೆ, ನಾದಸ್ವರ ರಥೋತ್ಸವಕ್ಕೆ ಮೆರಗು ತಂದವು, ರಥೋತ್ಸವದ ನಂತರ ಪ್ರಸಾದ ವಿನಿಯೋಗ ನಡೆಯಿತು. ಕಾರ್ಯಕಾರಿ ಮಂಡಳಿಯ ಕೆ.ಇಂಗಳೇಶ್ವರ, ನಟರಾಜು ಎಡೆಯೂರು ದಾಸೋಹ ಸಮಿತಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ, ಹರದನಹಳ್ಳಿ, ಬಂಡಿಗೆರೆಯ ಎಲ್ಲ ಕೋಮಿನ ಯಜಮಾನರು, ಭಕ್ತವೃಂದ ರಥೋತ್ಸವದಲ್ಲಿ ಭಾಗವಹಿಸಿದ್ದರು. ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಿತು.

Share this article