ಕನ್ನಡಪ್ರಭ ವಾರ್ತೆ ಮಾಗಡಿ
ಸಮಾಜದಲ್ಲಿದ್ದ ಅಸಮಾನತೆ, ಮೂಢನಂಬಿಕೆ, ಕಂದಾಚಾರಗಳನ್ನು ನಿವಾರಿಸಲು ತಮ್ಮ ವಚನಗಳ ಮೂಲಕ ಸಮಾನತೆಗಾಗಿ ಹೋರಾಡಿದವರು ಅಂಬಿಗರ ಚೌಡಯ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಪಿ.ವಿ.ಸೀತಾರಾಂ ಹೇಳಿದರು.ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತ ಏರ್ಪಡಿಸಿದ್ದ 905ನೇ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಚಾರ- ವಿಚಾರ, ತತ್ವಾದರ್ಶಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ವಚನಕಾರರು ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದಾರೆ. ಇವರ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗಬೇಕು. ವಿಧಾನಸೌಧ ಮುಂದೆ ಅಂಬಿಗರ ಚೌಡಯ್ಯರ ಪ್ರತಿಮೆಯನ್ನು ಸ್ಥಾಪಿಸಬೇಕು ಹಾಗೂ ನಮ್ಮ ಸಮಾಜಕ್ಕೆ ಕೊಟ್ಟಿರುವ 5 ಕೋಟಿ ಅನುದಾನವನ್ನು 25 ಕೋಟಿಗೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ತಹಸೀಲ್ದಾರ್ ಶರತ್ ಕುಮಾರ್ ಮಾತನಾಡಿ, ಸಮಾನತೆಯ ತತ್ವವನ್ನು ಜಗತ್ತಿಗೆ ಸಾರುವುದರ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ನಿಜಶರಣ ಅಂಬಿಗರ ಚೌಡಯ್ಯ ಸಮಾಜಕ್ಕೆ ಮಾದರಿಯಾಗಿದ್ದರು, ಚೌಡಯ್ಯನ ವಚನ ಸಾಹಿತ್ಯದಲ್ಲಿ ಆಧ್ಯಾತ್ಮಿಕ ನೆಲೆ ತೋರಿಸಿಕೊಟ್ಟಿದ್ದಾರೆ. ಸಮಾಜದ ಅಂಕು- ಡೊಂಕು ತಿದ್ದಲು ವಚನಗಳನ್ನು ನೀಡಿ, ಸಮಾನತೆಯ ಸಂದೇಶ ಸಾರುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅಂಬಿಗರ ಚೌಡಯ್ಯನವರ ವಚನಗಳನ್ನು ಯುವ ಜನತೆ ಅಧ್ಯಯನ ಮಾಡಬೇಕು. ಇಂಥವರ ವಿಚಾರಧಾರೆಗಳನ್ನು ಯುವಕರಿಗೆ ಮುಟ್ಟಿಸುವ ಕಾರ್ಯ ಸರ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಂ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿದ್ದ ಮೂಢನಂಬಿಕೆಗಳನ್ನು ತಿದ್ದುವಂತಹ ಕೆಲಸವನ್ನು ಚೌಡಯ್ಯ ಮಾಡಿದ್ದರು. ವಚನಕಾರರ ಪೈಕಿ ಅಂಬಿಗರ ಚೌಡಯ್ಯನವರು ನೇರ ನಡೆ, ನುಡಿಗಳಿಂದ ಸಮಾಜದಲ್ಲಿದ್ದ ಅಂಕು- ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ಸಿ.ಜಯರಾಂ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸಮಾನರಾಗಿರಲು ಅಂಬಿಗರ ಚೌಡಯ್ಯನವರ ವಚನಗಳು ಇಂದಿಗೂ ಮಾದರಿಯಾಗಿವೆ ಎಂದು ತಿಳಿಸಿದರು.ಸಮಾಜದ ಯುವ ಮುಖಂಡ ಪಿ.ಸಿ.ಪಾಳ್ಯ ರಮೇಶ್ ಅಂಬಿಗರ ಚೌಡಯ್ಯರ ಕುರಿತು ಮಾತನಾಡಿದರು. ದೊಡ್ಡಿ ಲಕ್ಷ್ಮಣ್ ಅಂಬಿಗರ ಚೌಡಯ್ಯ ಅವರ ವಚನಗಳನ್ನು ಹಾಡಿ ಗಮನ ಸೆಳೆದರು.
ಜಯಂತಿ ಅಂಗವಾಗಿ ಅಂಬಿಗರ ಚೌಡಯ್ಯ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಪ್ರಭಾಕರ್, ಮುಖಂಡರಾದ ಚಂದ್ರಶೇಖರ್, ಶಾಂತರಾಜ್, ತಿರುಮಲೆ ಗಂಗಣ್ಣ, ಜಯಕುಮಾರ್, ನಾರಸಂದ್ರ ಸುರೇಶ್, ಬಿ.ಟಿ.ವೆಂಕಟೇಶ್, ರಾಮಕೃಷ್ಣಪ್ಪ, ಹೀರಣ್ಣ, ನಂಜಪ್ಪ, ಪಿ.ಸಿ.ಪಾಳ್ಯ ರಮೇಶ್, ಸುಮಿತ್ರಮ್ಮ, ಶಿವಣ್ಣ, ರಾಮಣ್ಣ, ಗಂಗಣ್ಣ, ರೇವಣ್ಣ, ತಮ್ಮಯ್ಯ, ಚಿಕ್ಕಮುದುಗೆರೆ ಸುರೇಶ್, ಶಹಬಾಜ್, ಸಿದ್ದಪ್ಪ ಸೇರಿ ಇತರರು ಭಾಗವಹಿಸಿದ್ದರು.