ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಬಣ್ಣಿಸಲಾಗುತ್ತಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭಗೊಂಡಿದ್ದು, ಮಹಾರಥೋತ್ಸವಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ.
ಪ್ರತಿ ವರ್ಷವೂ ಒಬ್ಬ ಸಾಧಕರನ್ನು ಕರೆಸಿ ಮಹಾರಥೋತ್ಸವಕ್ಕೆ ಚಾಲನೆ ಕೊಡಿಸಲಾಗುತ್ತದೆ. ಅದರಂತೆ ಈ ವರ್ಷದ ಮಹಾರಥೋತ್ಸವಕ್ಕೆ ಸಿ.ಎಚ್.ವಿಜಯಶಂಕರ್ ಚಾಲನೆ ನೀಡಲಿದ್ದಾರೆ. ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ಅಗತ್ಯ ಸಿದ್ಧತೆ ಶ್ರೀಮಠ ಈಗಾಗಲೇ ಪೂರ್ಣಗೊಳಿಸಿದೆ.
ಮಹಾರಥೋತ್ಸವದ ಬಳಿಕ ಶ್ರೀಮಠದ ಬೆಟ್ಟದಲ್ಲಿರುವ ಕೈಲಾಸ ಮಂಟಪದಲ್ಲಿ ಭಕ್ತ ಹಿತಚಿಂತನ ಸಭೆ ಸೇರಿದಂತೆ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮೀಜಿ, ವಿಜಯಪುರ ಜಿಲ್ಲೆ ಕಾಖಂಡಿಕಿಯ ಗುರುದೇವಾಶ್ರಮದ ಶಿವಯೋಗೀಶ್ವರ ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ.ವಿದ್ವಾನ್ ನೌಶಾದ್ ಹರ್ಲಾಪುರ ಮತ್ತು ವಿದ್ವಾನ್ ನಿಶಾದ್ ಹರ್ಲಾಪುರ ಅವರಿಂದ ಸಂಗೀತ ಹಾಗೂ ಗಂಗಾವತಿಯ ನರಸಿಂಹ ಜೋಷಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.
ಹಿರೇಸಿಂದೋಗಿ ಕಪ್ಪತ್ತೇಶ್ವರಮಠದ ಚಿದಾನಂದ ಮಹಾಸ್ವಾಮಿಗಳು, ಮೈನಳ್ಳಿ-ಬಿಕನಹಳ್ಳಿ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಶಿವಬಸವಮಹಾಸ್ವಾಮಿಗಳು, ಬಿಜಕಲ್ ಶಿವಲಿಂಗ ಮಹಾಸ್ವಾಮಿಗಳು, ಭಾಗ್ಯನಗರದ ಶಂಕರಾಚಾರ್ಯ ಮಠದ ಶಿವರಾಮಕೃಷ್ಣನಂದ ಸ್ವಾಮಿಗಳು, ಹೂವಿನಹಡಗಲಿ ಶಾಖಾ ಗವಿಮಠದ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು, ಸಂತೆಕಲ್ಲೂರು ಮಹಾಂತೇಶ್ವರಮಠದ ಮಹಾಂತಲಿಂಗ ಶಿವಾಚಾರ್ಯರು, ಅಮಲಝರಿ-ಮೆಳ್ಳಿಗೇರಿಯ ಜ್ಞಾನಮಯಾನಂದ ಮಹಾಸ್ವಾಮಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗವಿಸಿದ್ದೇಶ್ವರ ಮಹಾತ್ಮೆ: ಜ.5 ಮತ್ತು 6 ರಂದು ಎರಡು ದಿನಗಳ ಕಾಲ ಹಿರೇಬಗನಾಳ ಗ್ರಾಮದ ಗವಿಸಿದ್ದೇಶ್ವರ ಸೇವಾ ನಾಟ್ಯ ಸಂಘದಿಂದ ರಾತ್ರಿ 10.30ಕ್ಕೆ ಮಠದ ಆವರಣದಲ್ಲಿರುವ ಪಾದಗಟ್ಟೆಯ ಬಳಿ ಗವಿಸಿದ್ದೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ. ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ಜ.5 ರಿಂದ ಜ.14 ರವರೆಗೆ 10 ದಿನಗಳ ಕಾಲ ಜಿಲ್ಲಾ ಮಟ್ಟದ ಫಲ ಪುಷ್ಪ ಪ್ರದರ್ಶನ ನಡೆಯಲಿದೆ.