ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ವಿಜೃಂಭಣೆಯಿಂದ ನಡೆದ ಮಹಾರಥೋತ್ಸವ

KannadaprabhaNewsNetwork |  
Published : Apr 11, 2025, 12:32 AM IST
10ಕೆಎಂಎನ್ ಡಿ24,25  | Kannada Prabha

ಸಾರಾಂಶ

ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವದ ಮಹಾರಥ ಗುರುವಾರ ವಿಜೃಂಭಣೆಯಿಂದ ನೆರವೇರಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತ ರಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಶ್ರೀದೇವಿ-ಭೂದೇವಿ ಕಲ್ಯಾಣ ನಾಯಕಿಯರೊಡನೆ ರಥಾರೂಢನಾದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ರಥಕ್ಕೆ ಹಣ್ಣು ದವನ ಎಸೆದು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವದ ಮಹಾರಥ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತ ರಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಶ್ರೀದೇವಿ-ಭೂದೇವಿ ಕಲ್ಯಾಣ ನಾಯಕಿಯರೊಡನೆ ರಥಾರೂಡನಾದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ರಥಕ್ಕೆ ಹಣ್ಣು ದವನ ಎಸೆದು ಸಂಭ್ರಮಿಸಿದರು.

ವೈರಮುಡಿ ಜಾತ್ರಾಮಹೋತ್ಸವದ 7ನೇ ತಿರುನಾಳ್ ಅಂಗವಾಗಿ ನಡೆದ ಮಹಾರಥಕ್ಕೆ ಮಧ್ಯಾಹ್ನ 11.30ರ ವೇಳೆಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಚಾಲನೆ ನೀಡಿದರು. ನಂತರ ಭಕ್ತರ ಜಯಘೋಷದೊಂದಿಗೆ ಮಾರಿಗುಡಿ ಬೀದಿ, ರಾಜಬೀದಿಗಳಲ್ಲಿ ಸಾಗಿದ ಮಹಾರಥ 1.30ರ ವೇಳೆಗೆ ದೇವಾಲಯದ ರಾಜಗೋಪುರದ ಬಳಿ ನೆಲೆನಿಂತಿತು.

ಈ ವೇಳೆ ಜಿಲ್ಲಾಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಪುತ್ರ ಸಚ್ಚಿನ್ ಚಲುವರಾಯಸ್ವಾಮಿ ಆಗಮಿಸಿ ಮಹಾರಥಕ್ಕೆ ಪೂಜೆ ಸಲ್ಲಿಸಿದರು. ನಂತರ ವಾನಮಾಮಲೈ ಬೀದಿ ರಥದ ಬೀದಿಯಲ್ಲಿ ಸಾಗಿದ ಬೃಹತ್‌ ರಥ 2.30ರ ವೇಳೆಗೆ ಸ್ವಸ್ಥಾನವಾದ ರಥದ ಮಂಟಪಕ್ಕೆ ತಲುಪಿತು.

ದೇವಾಲಯದ ಶ್ರೀಪಾದದವರು, ಬಂಡೀಕಾರರು, ಗ್ರಾಮದ ಯುವಕರು ಮಹಾರಥ ಸಗುಮ ಚಾಲನೆಗೆ ಶ್ರಮಿಸಿ ರಥೋತ್ಸವ ಯಶಸ್ವಿಗೊಳಿಸಿದರು. ಮಹಾರಥೋತ್ಸವದಲ್ಲಿ ಉಪವಿಬಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ದೇವಾಲಯದ ಇಒ ಶೀಲಾ ಇದ್ದರು. ಪಾರುಪತ್ತೇಗಾರರಾದ ಸ್ಥಾನಾಚಾರ್ಯಶ್ರೀನಿವಾಸನರಸಿಂಹನ್ ಗುರೂಜಿ. ಪರಿಚಾರಕರಾದ ಎಂ.ಎನ್. ಪಾರ್ಥಸಾರಥಿ ರಥೋತ್ಸವದ ಯಶಸ್ಸಿಗೆ ಶ್ರಮಿಸಿದ್ದರು.

ಇದಕ್ಕೂ ಬೆಳಗ್ಗೆ 6 ಗಂಟೆಗೆ ಮಹಾರಥೋತ್ಸವ ಕಾರ್ಯಕ್ರಮಗಳು ಆರಂಭವಾದ ನಂತರ 8 ಗಂಟೆ ವೇಳೆಗೆ ರಥಬಲಿಪೂರೈಸಿ ನಂತರ ಯಾತ್ರಾದಾನ ಕೈಗೊಳ್ಳಲಾಯಿತು. ರಾಮಾನುಜಾಚಾರ್ಯರೊಂದಿಗೆ ರಾಜಮುಡಿ ಅಲಂಕಾರದೊಂದಿಗೆ ಸ್ವಾಮಿ ಉತ್ಸವ ವಿಶೇಷ ಮಂಗಳವಾದ್ಯ ಹಾಗೂ ವೇದಘೋಷದೊಂದಿಗೆ ರಥದ ಮಂಟಪದ ಬಳಿಗೆ ಸಾಗಿ ಮೂರು ಪ್ರದಕ್ಷಿಣೆ ಹಾಕಿ ಮಹೂರ್ತ ಪಠಣೆಯ ನಂತರ ರಥಾರೋಹಣನಡೆಯಿತು.

ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜನೆ ಮತ್ತು ಎಸ್.ಎನ್.ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನಡೆಯುತ್ತಿರುವ ನಾದೋಪಾಸನ ಸೇವೆಯಡಿ ವಿದ್ವಾನ್ ಆನಂದಕುಮಾರ್ ತಂಡ ನಾದಸ್ವರ ಕೈಂಕರ್ಯ ನಡೆಸಿದರು.

ಮಹಾರಥೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿ ಪ್ರಮುಖಬೀದಿಗಳಲ್ಲಿ ರಥದರ್ಶನಕ್ಕೆ ಕಾಯುತ್ತಿದ್ದ ದೃಶ್ಯಕಂಡು ಬಂತು ಶ್ರೀರಂಗಪಟ್ಟಣ ಡಿವೈಎಸ್.ಪಿ ಶಾಂತಮಲ್ಲಪ್ಪ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಭದ್ರತೆ ನೀಡಿದ್ದರು.

ರಥೋತ್ಸವದಲ್ಲಿ ಭಾಗಿಯಾದ ಕೆಲವು ಭಕ್ತರು ನನಗೆ ಮದುವೆ ವಧು ಕರುಣಿಸು, ಸಾಲದಿಂದ ಮುಕ್ತಿಮಾಡು, ಆರೋಗ್ಯಕರುಣಿಸುವ ಎಂದು ಬಾಳೆಹಣ್ಣುಗಳ ಮೇಲೆ ಬರೆದು ರಥಕ್ಕೆಸೆದು ಚೆಲುವನಾರಾಯಣಸ್ವಾಮಿಯ ಮೊರೆಹೊಗಿದ್ದರು.

ಪ್ರತಿದಿನ ಸುಡುಬಿಸಿಲಿನ ವಾತಾವರಣವಿರುತ್ತಿದ್ದ ಮೇಲುಕೋಟೆಯಲ್ಲಿ ಇಂದು ಬಿಸಿಲಿನ ತಾಪ ಕಡಿಮೆಯಾಗಿ ಮೋಡಕವಿದ ವಾತಾವರಣ ಇದ್ದು ಭಕ್ತರಲ್ಲಿ ಉಲ್ಲಾಸದ ವಾತಾವರಣ ಮೂಡಿಸಿತ್ತು. ತೇರೆಳೆಯವ ಭಕ್ತರ ದಾಹ ತಣಿಸಲು ಯತಿರಾಜದಾಸರ್ ಗುರುಪೀಠ ಹಾಗೂ ಇತರ ಭಕ್ತರು ಮಜ್ಜಿಗೆ ಪಾನಕ ನೀಡಿದ್ದು ಕಂಡು ಬಂತು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ