ಮಹಾವೀರರ ಭಾವಚಿತ್ರ ಮೆರವಣಿಗೆ
ಭಾರತೀಯ ಸಂಸ್ಕೃತಿಯಲ್ಲೇ ಜೈನ ಧರ್ಮ ಸಮ್ಮಿಳಿತಗೊಂಡಿದ್ದು, ಜೈನ ಧರ್ಮದ ತತ್ವ,ಸಿದ್ದಾಂತಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಎಂದು ತಹಸೀಲ್ದಾರ್ ಪಟ್ಟರಾಜ ಗೌಡ ಹೇಳಿದರು.
ತಾಲೂಕು ಅಡಳಿತ ಮತ್ತು ತಾಲೂಕು ಜೈನ್ ಸಮುದಾಯದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಮಹಾವೀರರ 2624ನೇ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು.ಜೈನ ಧರ್ಮದಲ್ಲಿ ಅನೇಕ ತೀರ್ಥಂಕರರು ಬಂದು ಹೋಗಿದ್ದು, ಇವರಲ್ಲಿ ಭಗವಾನ್ ಮಹಾವೀರರು 24ನೇ ತೀರ್ಥಂಕರರಾಗಿ ಮನುಕುಲಕ್ಕೆ ಅಹಿಂಸೆ, ಶಾಂತಿ, ಜೀವನ ಮಾರ್ಗವನ್ನು ತೋರಿಸಿಕೊಟ್ಟವರಾಗಿದ್ದಾರೆ ಎಂದು ಹೇಳಿದರು.
ಉಪನ್ಯಾಸಕ ಅನಂತ್ ನಾಗ್ ಭಗವಾನ್ ಮಹಾವೀರರ ಕುರಿತು ಉಪನ್ಯಾಸ ನೀಡಿ, ಭಗವಾನ್ ಮಹಾವೀರರು ಕ್ರಿ.ಪೂ. 599ರಲ್ಲಿ ಜನಿಸಿದರು. ಜೈನ ಧರ್ಮ ಜಗತ್ತಿಗೆ ಅಹಿಂಸೆಯನ್ನು ಬೋಧಿಸಿದರೆ, ಬೌದ್ಧ ಧರ್ಮ ಶಾಂತಿಯನ್ನು ಪ್ರತಿಪಾದಿಸಿತು ಎಂದು ಹೇಳಿದರು.
ಜೈನರು ಅಲ್ಪಸಂಖ್ಯಾತರಾಗಿದ್ದು, 2011ರ ಜನಗಣತಿ ಅನುಸಾರ ತಾಲೂಕಿನಲ್ಲಿ ಕೇವಲ 150 ಕುಟುಂಬಗಳಿವೆ ಇವರು ಅಲ್ಪಸಂಖ್ಯಾತರಾಗಿದ್ದರೂ ಕೂಡ ಇವರಿಗೆ ಸರ್ಕಾರ ಹಿಂದುಳಿದ 3ಬಿ ಜಾತಿ ಪ್ರಮಾಣಪತ್ರ ನೀಡುತ್ತಿರುವುದರಿಂದ ಹೆಚ್ಚಿನ ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳು ತಪ್ಪುತ್ತಿವೆ. ಸಾಂಘಿಕ ಹೋರಾಟಗಳ ಮೂಲಕ ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದು ಹೇಳಿದರು. ಇದಕ್ಕೆ ಜೈನ ಸಮುದಾಯದ ಎಲ್ಲಾ ಮುಖಂಡರು ಧ್ವನಿಗೊಡಿಸಿದರು.
ಇದಕ್ಕೂ ಮುನ್ನ ಜೈನ ಸಮುದಾಯದ ಪುರುಷರು, ಮಹಿಳೆಯವರು ಭಗವಾನ್ ಮಹಾವೀರರ ಭಾವಚಿತ್ರದೊಂದಿಗೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿದರು.ನಿಹಾರಿಕ ಜೈನ್, ಮತ್ತು ಸ್ವಾಸ್ತಿಕ್ ಜೈನ್ ಮಾತನಾಡಿದರು.