ಪಠ್ಯದಲ್ಲಿ ಮಹರ್ಷಿ ವಾಲ್ಮೀಕಿ ಪಾಠ ಸೇರ್ಪಡೆ: ಸಿದ್ದು

KannadaprabhaNewsNetwork |  
Published : Oct 08, 2025, 01:00 AM IST
Valmiki Award 1 | Kannada Prabha

ಸಾರಾಂಶ

ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೋ, ಸಮುದಾಯಕ್ಕೆ ಹೆಚ್ಚಿನ ಅವಕಾಶ ಸಿಗುವಂತೆ ಮಾಡುತ್ತಾರೋ ಅವರ ಪರವಾಗಿ ಸಮುದಾಯದವರು ಗಟ್ಟಿಯಾಗಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೋ, ಸಮುದಾಯಕ್ಕೆ ಹೆಚ್ಚಿನ ಅವಕಾಶ ಸಿಗುವಂತೆ ಮಾಡುತ್ತಾರೋ ಅವರ ಪರವಾಗಿ ಸಮುದಾಯದವರು ಗಟ್ಟಿಯಾಗಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವಾಲ್ಮೀಕಿ (ನಾಯಕ) ಸಮುದಾಯ ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು. ಆದರೂ, ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯವನ್ನು ಬರೆದರು. ಆಮೂಲಕ ಮಾನವೀಯ ಮೌಲ್ಯ ಎತ್ತಿ ಹಿಡಿಯುವ ಕೆಲಸ ಮಾಡಿದರು. ಮಹರ್ಷಿ ವಾಲ್ಮೀಕಿ ಕೇವಲ ಒಂದು ಜಾತಿಗೆ ಸೇರಿದವರಲ್ಲ. ಅವರು ವಿಶ್ವಮಾನವರು. ಅದಕ್ಕಾಗಿಯೇ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಅವರ ಪ್ರತಿಮೆ ಸ್ಥಾಪಿಸಿ, ತಪೋವನ ಮಾಡಿದೆ ಎಂದರು.ಸಮಾಜದಲ್ಲಿ ಸಮಪಾಲು, ಸಮಬಾಳು ತರುವುದು ನಮ್ಮ ಸಿದ್ಧಾಂತ. ಯಾವುದೇ ಧರ್ಮ, ಜಾತಿಯ ಬಡವರಿಗೆ ನ್ಯಾಯ ಕೊಡಿಸಬೇಕು ಎನ್ನುವುದು ನಮ್ಮ ಉದ್ದೇಶ. ಅವರಿಗೆ ಅವಕಾಶ ಕಲ್ಪಿಸುವುದಕ್ಕೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಎಸ್ಸಿ/ಎಸ್ಟಿ ಸಮುದಾಯದ ಶಿಕ್ಷಣಕ್ಕೆ ಒತ್ತು ನೀಡಲು ಹೋಬಳಿಗೊಂದರಂತೆ ರಾಜ್ಯದಲ್ಲಿ 879 ವಸತಿ ಶಾಲೆಗಳನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಅದರಲ್ಲಿ ಎಸ್ಟಿ ಸಮುದಾಯದವರಿಗೇ 156 ವಸತಿ ಶಾಲೆಗಳಿವೆ. ಈ ಶಾಲೆಗಳಲ್ಲಿ 37 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಸರ್ಕಾರ ರೂಪಿಸಿದೆ. ಆದರೆ, ಈಗ ವಿರೋಧ ಪಕ್ಷಗಳು ಬುರುಡೆ ಬಿಟ್ಟುಕೊಂಡು ಓಡಾಡುತ್ತಿವೆ ಎಂದು ಹೇಳಿದರು.ನಾವು ಮಾತನಾಡಿದರೂ ನೀವು ಚಪ್ಪಾಳೆ ತಟ್ಟುತ್ತೀರಿ, ವಿರೋಧ ಪಕ್ಷದವರು ಮಾತನಾಡಿದರೂ ಚಪ್ಪಾಳೆ ತಟ್ಟುತ್ತೀರಿ. ಆದರೆ, ಯಾರು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ. ಯಾರು ನಿಮ್ಮ ಪರವಾಗಿ ನಿಲ್ಲುತ್ತಾರೆ ಅವರ ಬೆನ್ನಿಗೆ ನೀವು ನಿಲ್ಲಬೇಕು. ನಿಮಗೆ ಹೆಚ್ಚಿನ ಅವಕಾಶ ಕಲ್ಪಿಸಿದವರ ಪರವಾಗಿರುವುದು ನಿಮ್ಮ ಜವಾಬ್ದಾರಿ. ನಿಮ್ಮ ಹಕ್ಕುಗಳನ್ನು ಪಡೆಯಲು ಒತ್ತಡ ಹೇರುವುದರಲ್ಲಿ ಯಾವುದೇ ತಪ್ಪಿಲ್ಲ. ಅವಕಾಶ ವಂಚಿತರಾಗಿದ್ದವರಿಗೆ ಸಾಮಾಜಿಕ ನ್ಯಾಯದಂತೆ ಹಕ್ಕುಗಳನ್ನು ದೊರಕಿಸುವುದು ನಮ್ಮ ಕೆಲಸ ಎಂದು ತಿಳಿಸಿದರು.ಪಠ್ಯದಲ್ಲಿ ವಾಲ್ಮೀಕಿ ಪಾಠ ಸೇರ್ಪಡೆ:

ಇತ್ತೀಚಿನ ದಿನಗಳಲ್ಲಿ ಮಹರ್ಷಿ ವಾಲ್ಮೀಕಿ ಬಗ್ಗೆಯೂ ಕೆಟ್ಟದಾಗಿ ಮಾತನಾಡಲಾಗುತ್ತದೆ, ಕೆಟ್ಟದಾಗಿ ಬರೆಯಲಾಗುತ್ತದೆ. ಅದಕ್ಕಾಗಿ ಅವರ ಇತಿಹಾಸವನ್ನು ತಿಳಿಸುವುದು ಬಹಳ ಮುಖ್ಯವಾಗಿದೆ. ಅವರ ಬಗೆಗಿನ ಪಠ್ಯವನ್ನು ಸೇರಿಸುವ ಕುರಿತು ಮನವಿಗಳು ಬಂದಿದ್ದು, ಅದನ್ನು ಶೀಘ್ರದಲ್ಲಿ ಈಡೇರಿಸಲಾಗುವುದು. ಯಾವುದಾದರೂ ಪಠ್ಯದಲ್ಲಿ ಮಹರ್ಷಿ ವಾಲ್ಮೀಕಿ ಬಗೆಗಿನ ಪಾಠ ಸೇರಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.

ಕಾರ್ಯಕ್ರಮದಲ್ಲಿ ರಂಗಭೂಮಿ ಕ್ಷೇತ್ರದಿಂದ ಪಿ. ತಿಪ್ಪೇಸ್ವಾಮಿ, ಸಂಘಟನೆ ಕ್ಷೇತ್ರದಿಂದ ಜೆ.ಕೆ. ಮುತ್ತಮ್ಮ, ಮಾಧ್ಯಮ ಕ್ಷೇತ್ರದಿಂದ ನಾಗರಾಜು ಗಾಣದ ಹುಣಸೆ, ಸಮಾಜ ಸೇವೆ ಕ್ಷೇತ್ರದಿಂದ ಮಳಸಿದ್ದ ಲಕ್ಷ್ಮಣ ನಾಯಕೋಡಿ ಮತ್ತು ಸಾಮಾಜಿಕ ಕ್ಷೇತ್ರದಿಂದ ಕೆ. ಉಚ್ಚಂಗಪ್ಪ ಅವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

2014ರಲ್ಲಿ ಪರಿಶಿಷ್ಟ ಜಾತಿ/ಪಂಗಡದವರ ಅಭಿವೃದ್ಧಿಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಎಸ್ಸಿ/ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆ ಜಾರಿಗೊಳಿಸಲಾಯಿತು. ಅದರಂತೆ ಬಜೆಟ್‌ ಮೊತ್ತದ ಶೇ. 24.1ರಷ್ಟು ಮೊತ್ತವನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ ಮೀಸಲಿಡಲಾಯಿತು. 2014-15ರಲ್ಲಿ 15,894 ಕೋಟಿ ರು.ನಷ್ಟಿದ್ದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಮೊತ್ತ, 2025-26ನೇ ಸಾಲಿಗೆ 42,107 ಕೋಟಿ ರು.ಗೆ ಹೆಚ್ಚಳವಾಗಿದೆ ಎಂದು ಹೇಳಿದರು.

ಸಚಿವ ಸತೀಶ್‌ ಜಾರಕಿಹೊಳಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ದದ್ದಲ್‌, ವಿಧಾನಸಭೆ ಸರ್ಕಾರದ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್‌, ಮಾಜಿ ಸಚಿವ ಎಚ್‌. ಆಂಜನೇಯ, ಶಾಸಕರಾದ ರಿಜ್ವಾನ್‌ ಅರ್ಷದ್‌, ನಾಗರಾಜ್‌ ಯಾದವ್‌ ಇತರರಿದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ