ಶಿಕಾರಿಪುರ: ಆಚಾರ, ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ವ್ಯವಸ್ಥೆ ಸಹಿತ ಮನುಕುಲದ ಉದ್ಧಾರಕ್ಕಾಗಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಜಗತ್ತಿನ ಎಲ್ಲೆಡೆ ಶ್ರೀ ರಾಮನ ಸಹಿತ ಹಲವು ಮಹಾನ್ ಪುರುಷರನ್ನು ಪರಿಚಯಿಸಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ರಾಮಾಯಣದಲ್ಲಿ ಕೌಟುಂಬಿಕ ವ್ಯವಸ್ಥೆ ಸಹಿತ ಆಚಾರ, ಸಂಸ್ಕೃತಿ, ಸಂಸ್ಕಾರದ ಮೂಲಕ ಮನುಕುಲದ ಉದ್ಧಾರಕ್ಕಾಗಿ ಅಗತ್ಯವಾದ ಎಲ್ಲ ಸಂದೇಶವನ್ನು ನೀಡಿದ ಮಹರ್ಷಿ ವಾಲ್ಮೀಕಿ ಪುಣ್ಯ ಪುರುಷ ಎಂದು ಬಣ್ಣಿಸಿದರು. ಇತ್ತೀಚಿನ ವರ್ಷದಲ್ಲಿ ನಾಡಿನ ಶ್ರೇಷ್ಠ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಬಗ್ಗೆ ಯುವ ಪೀಳಿಗೆಗೆ ಆಸಕ್ತಿ ಕುಂಠಿತವಾತ್ತಿದೆ. ಇದನ್ನರಿತು ವಾಲ್ಮೀಕಿ ಮಹರ್ಷಿ ಸೇರಿದಂತೆ ಮತ್ತಿತರ ಮಹಾನ್ ಸಂತರನ್ನು ಸದಾಕಾಲ ಸ್ಮರಿಸುವ ಸದುದ್ದೇಶದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿಸಿ ರಜೆ ಘೋಷಿಸಿದ್ದಾರೆ ಎಂದು ತಿಳಿಸಿದರು.
ವಾಲ್ಮೀಕಿ ಸಮಾಜಕ್ಕೆ ಎಲ್ಲ ರೀತಿ ಶೈಕ್ಷಣಿಕ, ಆರ್ಥಿಕ ಶಕ್ತಿ ದೊರಕಿಸಲು ಹಲವು ಯೋಜನೆ ಜಾರಿಗೊಳಿಸಿದ್ದಾರೆ. ಬೆಂಗಳೂರಿನಲ್ಲಿ 8 ರು. ಕೋಟಿ ವೆಚ್ಚದಲ್ಲಿ ತಾಲೂಕಿನ ಶಿರಾಳಕೊಪ್ಪದಲ್ಲಿ 2 ಕೋಟಿ ರು. ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗಿದ್ದು, ಸಮುದಾಯದ ಬಗೆಗಿನ ಪ್ರಾಮಾಣಿಕ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.ಬಸವಣ್ಣನವರ ಸಮ ಸಮಾಜದ ಕನಸಿನ ರೀತಿಯಲ್ಲಿ ಸರ್ವ ಸಮಾಜದ ಅಭ್ಯುದಯಕ್ಕಾಗಿ ಯಡಿಯೂರಪ್ಪನವರು ಶ್ರಮಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಎಲ್ಲ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸಿ ತಾಲೂಕಿನಾದ್ಯಂತ ಹಲವು ಶಾಲಾ- ಕಾಲೇಜು, ಮೊರಾರ್ಜಿ ಶಾಲೆ, ಹಾಸ್ಟೆಲ್ ನಿರ್ಮಿಸಿದ್ದಾರೆ. ಕಳೆದ 3-4 ದಶಕದ ಹಿಂದಿನ ಶಿಕಾರಿಪುರ ಇದೀಗ ಸಂಪೂರ್ಣ ಬದಲಾಗಿದ್ದು, ಸರ್ವತೋಮುಖ ಅಭಿವೃದ್ಧಿ ಮೂಲಕ ಗುರುತಿಸಿಕೊಂಡಿದೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಕುರಿತು ಸತೀಶ್ ನಾಯಕ್ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ತಹಸೀಲ್ದಾರ್ ಮಲ್ಲೇಶ್ ಪೂಜಾರ್, ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್, ಇಒ ನಾಗರಾಜ್, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್, ತಾ.ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಪುರಸಭೆ ಉಪಾಧ್ಯಕ್ಷೆ ರೂಪ ಪಾರಿವಾಳದ, ಮುಖಂಡ ಫಕೀರಪ್ಪ, ರಂಗಪ್ಪ, ಸುರೇಶ್ ಮತ್ತಿತರರಿದ್ದರು.