ಭಟ್ಕಳ: ಪುರಾಣ ಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವ ದೇವಾಲಯಗಳಲ್ಲಿ ಸಂಭ್ರಮ-ಸಡಗರದಿಂದ ಶಿವರಾತ್ರಿ ಆಚರಣೆ ನಡೆಯಿತು.
ಮುರ್ಡೇಶ್ವರ ದೇವಸ್ಥಾನಕ್ಕೆ ಬೆಳಗಿನ ಜಾವ ೩ ಗಂಟೆಯಿಂದಲೇ ಭಕ್ತರು ಆಗಮಿಸಲು ಆರಂಭಿಸಿದ್ದು ಕಿಮೀ ಉದ್ದದ ಸಾಲು ಕಂಡು ಬಂತು. ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಸಂಪೂರ್ಣ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡಿದ್ದು ಯಾವುದೇ ಗೊಂದಲಗಳಿಗೆ ಅವಕಾಶವಾಗಲಿಲ್ಲ.
ದೇವಸ್ಥಾನದ ವತಿಯಿಂದ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಕೂಡ ಮಾಡಲಾಯಿತು.ಮುರ್ಡೇಶ್ವರದಲ್ಲಿ ಬೆಳಗಿನ ಜಾವ ಸ್ಥಳೀಯರೇ ಇದ್ದರೆ ಆನಂತರ ಅನ್ಯ ಊರುಗಳ ಭಕ್ತರು ಸರದಿಯ ಸಾಲಿನಲ್ಲಿ ಕಂಡು ಬಂದರು.
ಬೆಳಗ್ಗೆ ೫ರಿಂದ ೯ ಗಂಟೆ ವರೆಗೆ ಭಾರೀ ಜನಜಂಗುಳಿ ಕಂಡು ಬಂದಿದ್ದು ನಂತರ ಸ್ವಲ್ಪಮಟ್ಟಿಗೆ ಕಡಿಮೆಯಾದರೂ ಸರತಿಯ ಸಾಲು ಮುಂದುವರಿದಿತ್ತು.
ಶಿವರಾತ್ರಿಯ ಅಂಗವಾಗಿ ಶ್ರೀ ಮುರ್ಡೇಶ್ವರ ದೇವರಿಗೆ ರುದ್ರಾಭಿಷೇಕ, ಜಲಾಭೀಷೇಕ, ಬಿಲ್ವಾರ್ಚನೆ, ಮಹಾಪೂಜೆ ಇತ್ಯಾದಿಗಳು ನಡೆದು ರಾತ್ರಿ ಸ್ವರ್ಣ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ತಾಲೂಕಿನ ಇತರ ಶಿವ ಕ್ಷೇತ್ರಗಳು ಹಾಗೂ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿಯೂ ಕೂಡಾ ಶಿವರಾತ್ರಿ ಆಚರಣೆ ಮಾಡಲಾಗಿದ್ದು ಮುಖ್ಯವಾಗಿ ಬಂದರದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕುಟುಮೇಶ್ವರ ದೇವಸ್ಥಾನ, ಪಟ್ಟಣದ ಪುರಾತನ ಚೋಳೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀನಾರಾಯಣ ರಾಮನಾಥ ಶಾಂತೇರಿ ಕಾಮಾಕ್ಷಿ ಬೇತಾಳ ದೇವಸ್ಥಾನ,
ಆಸರಕೇರಿಯ ವಿರೂಪಾಕ್ಷ ದೇವಸ್ಥಾನ, ಪಶುಪತಿ ದೇವಸ್ಥಾನ, ಮೂಡಭಟ್ಕಳದ ಈಶ್ವರ ದೇವಸ್ಥಾನ, ಬೈಲೂರಿನ ಮಾರ್ಕಾಂಡೇಶ್ವರ, ಮಾರೂಕೇರಿಯ ಕೊಡಕಿಯ ಶಂಭುಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ಎಲ್ಲಾ ಶಿವಾಲಯಕ್ಕೂ ಕೂಡಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ಅಭಿಷೇಕ, ಅರ್ಚನೆ ಮಾಡಿಸಿದರು.
ವರ್ಷಂಪ್ರತಿಯಂತೆ ಭಟ್ಕಳದ ನೂರಾರು ಜನರು ಸಾಗರ ತಾಲೂಕಿನ ಕಾಡಿನಲ್ಲಿ ಎತ್ತರದಲ್ಲಿ ಬೃಹತ್ ಕಲ್ಲು ಬಂಡೆ ಮಧ್ಯದಲ್ಲಿರುವ ಅತಿ ಪುರಾತನ ದೇವಾಲಯವಾದ ಭೀಮೇಶ್ವರಕ್ಕೆ ತೆರಳಿ ತೀರ್ಥ ಸ್ನಾನ, ಪೂಜೆ ಸಲ್ಲಿಸಿದರು. ತಾಲೂಕಿನಲ್ಲಿ ಶಿವರಾತ್ರಿಯ ಉತ್ಸವಗಳು ಶಾಂತಿಯುತವಾಗಿ ನಡೆದಿದ್ದು ಹಲವೆಡೆ ರಾತ್ರಿ ಅಖಂಡ ಭಜನೆ, ಧಾರ್ಮಿಕ ಕಾರ್ಯಕ್ರಮ, ಜಾಗರಣೆ ಹಮ್ಮಿಕೊಳ್ಳಲಾಗಿತ್ತು.
ಮುರ್ಡೇಶ್ವರದಲ್ಲಿ ಈ ಬಾರಿ ಜಿಲ್ಲಾಡಳಿತದಿಂದ ಮಹಾಶಿವರಾತ್ರಿ ಜಾಗರಣೆ ಉತ್ಸವ ಹಮ್ಮಿಕೊಂಡಿದ್ದರಿಂದ ತಾಲೂಕಿನಲ್ಲಿ ಶಿವರಾತ್ರಿ ಆಚರಣೆಗೆ ಮತ್ತಷ್ಟು ಮೆರಗು ಬಂದಿತ್ತು.