ಕನ್ನಡಪ್ರಭ ವಾರ್ತೆ ಹಲಗೂರುಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ನೀಡಿದ್ದ ಭರವಸೆ ಈಡೇರಿಸಲು ಬದ್ಧನಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೆನೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭರವಸೆ ನೀಡಿದರು.
ಯತ್ತಂಬಾಡಿ ಗ್ರಾಮದಲ್ಲಿ ಶ್ರೀಕಾಳೇಶ್ವರ ಸ್ವಾಮಿ ದೇವಾಲಯದ ಬಳಿ ಸಮುದಾಯ ಭವನ ಮತ್ತು ಬಾಣಸಮುದ್ರ ಗ್ರಾಮದಲ್ಲಿ ಬೆಂಗಳೂರಯ್ಯ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಿದ್ದು, ಕೊಟ್ಟ ಮಾತಿನಂತೆ ಮುಂದಿನ ದಿನಗಳಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕಸಬಾ ಹೋಬಳಿಯ ಅಂತರವಳ್ಳಿ, ಯತ್ತಂಬಾಡಿ, ಬೆಳತೂರು, ಅಪ್ಪಾಜಯ್ಯನದೊಡ್ಡಿ, ಬಾಣಗಹಳ್ಳಿ, ಹುಲ್ಲಹಳ್ಳಿ, ಹುಲ್ಲಾಗಾಲ, ದಡಮಹಳ್ಳಿ, ಬಾಣಸಮುದ್ರ, ಕೋಡಿಪುರ, ಚೆನ್ನೀಪುರ, ಡಿ.ಹಲಸಹಳ್ಳಿ, ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನಡೆಸಿದ್ದು, ಈಗಾಗಲೇ ಇನ್ನೂ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಲೋಕಸಭಾ ಚುನಾವಣೆಯ ನಂತರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.ಬಾಣಸಮುದ್ರ ಗೇಟ್‌ನಲ್ಲಿ ಒಂದು ಬಸ್ ತಂಗುದಾಣ ನಿರ್ಮಿಸಬೇಕು ಮತ್ತು ಕೆಎಸ್‌ಆರ್‌ಟಿಸಿ ಬಸ್ ಕೋರಿಕೆ ನಿಲುಗಡೆ ಇದ್ದು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಬಸ್ಸುಗಳನ್ನು ನಿಲ್ಲಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು.