ಐತಿಹಾಸಿಕ ಶ್ರೀಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಮಹಾಶಿವರಾತ್ರಿ ಸಂಭ್ರಮ

KannadaprabhaNewsNetwork | Published : Feb 28, 2025 12:49 AM

ಸಾರಾಂಶ

ಬೆಳಗ್ಗೆ 5 ರಿಂದ 7ರವರೆಗೆ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಹೇಮಾವತಿ ವಲಯ ಮಧುಗಿರಿ ಶಾಖೆಯಿಂದ ಏಕಾತ್ಮತಾ ಸ್ತೋತ್ರ, ಅಗ್ನಿಹೋತ್ರ, 11ನೇ ಸುತ್ತಿನ ಶಿವ ನಮಸ್ಕಾರ ನಡೆದವು. ವಿವಿಧ ಮಹಿಳಾ ಸಂಘಟನೆಗಳಿಂದ ಶಿವನ ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತರನ್ನು ಪರವಶರನ್ನಾಗಿಸಿದವು.

ಕನ್ನಡಪ್ರಭ ವಾರ್ತೆ ಮಧುಗಿರಿ

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ಶಿವನ ದೇವಾಲಯಗಳು ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಶಿವನಿಗೆ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳು ಸಡಗರ- ಸಂಭ್ರಮದಿಂದ ನೆರವೇರಿದವು.

ಮಧುಗಿರಿ ಪಟ್ಟಣದ ಐತಿಹಾಸಿಕ ಶ್ರೀ ಪ್ರಸನ್ನ ಪಾರ್ವತಿ ಸಮೇತ ಶ್ರೀಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 6 ರಿಂದ ರುದ್ರಾಭಿಷೇಕ, ವಿಶೇಷ ಪೂಜೆಯು ನಾಗರಾಜಶಾಸ್ತ್ರಿ ಮತ್ತು ತಂಡದವರಿಂದ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ದೇಗುಲಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.

ಭಕ್ತಾದಿಗಳು ಇಡೀ ದಿನ ಶ್ರದ್ಧೆ- ಭಕ್ತಿಯಿಂದ ಶಿವನ ಆರಾಧನೆ ಮಾಡುವ ಮೂಲಕ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

ಬೆಳಗ್ಗೆ 5 ರಿಂದ 7ರವರೆಗೆ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಹೇಮಾವತಿ ವಲಯ ಮಧುಗಿರಿ ಶಾಖೆಯಿಂದ ಏಕಾತ್ಮತಾ ಸ್ತೋತ್ರ, ಅಗ್ನಿಹೋತ್ರ, 11ನೇ ಸುತ್ತಿನ ಶಿವ ನಮಸ್ಕಾರ ನಡೆದವು. ವಿವಿಧ ಮಹಿಳಾ ಸಂಘಟನೆಗಳಿಂದ ಶಿವನ ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತರನ್ನು ಪರವಶರನ್ನಾಗಿಸಿದವು.

ಸಿದ್ಧರ ಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿಯು ದೇಗುಲದಲ್ಲಿ ಶಿವರಾತ್ರಿ ಜಾಗರಣೆಯ ಎರಡನೇ ಯಾಮದ ಪೂಜೆಯಲ್ಲಿ ಭಾಗವಹಿಸಿದ್ದರು. ಅವರು ನಂತರ ಮಾತನಾಡಿ, ದಕ್ಷಿಣ ಭಾರತದಲ್ಲಿ ವರ್ಷಕ್ಕೊಮ್ಮೆ ಮಹಾಶಿವರಾತ್ರಿ ಆಚರಿಸಿದರೆ ಉತ್ತರ ಭಾರತದಲ್ಲಿ ಪ್ರತಿ ತಿಂಗಳೂ ಶಿವರಾತ್ರಿ ಆಚರಿಸುವ ಪರಿಪಾಠವಿದೆ. ದೈವಾರಾಧನೆಯಿಂದ ಮನುಷ್ಯರಿಗೆ ಎದುರಾಗುವ ಕಷ್ಟ- ಸಂಕಟ, ಸಮಸ್ಯೆಗಳು ಪರಿಹಾರವಾಗುತ್ತವೆಂದು ಧರ್ಮ ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಶಿವನನ್ನು ಬಿಲ್ವಪತ್ರೆಯಲ್ಲಿ ಪೂಜಿಸಿದರೆ ಸಾಕು, ಎಲ್ಲ ಎಡತಾಕುಗಳು ನಿವಾರಣೆಯಾಗುತ್ತವೆ ಎಂದರು.

ಯಾಮದ ಪೂಜೆಯಲ್ಲಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್‌ ಶಿರಿನ್ ತಾಜ್‌, ಸಿಪಿಐ ಹನುಮಂತರಾಯಪ್ಪ, ಪುರಸಭೆ ಉಪಾಧ್ಯಕ್ಷೆ ಸುಜಾತ ಶಂಕರನಾರಾಯಣ್‌ ,ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು, ಶಂಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್‌.ಸತ್ಯನಾರಾಯಣ್‌, ಪ್ರಧಾನ ಅರ್ಚಕ ನಟರಾಜ ದೀಕ್ಷಿತ್‌, ಭಕ್ತ ಮಂಡಳಿಯ ಕೆ.ವಿ.ಮಂಜುನಾಥಗುಪ್ತ, ಎಸ್‌ವಿಎಲ್‌ ಶ್ರೀಧರ್, ಆರ್‌.ಧನ್‌ಪಾಲ್‌, ಅಡಿಟರ್‌ ಲಕ್ಷ್ಮೀಪ್ರಸಾದ್‌, ದೋಲಿಬಾಬು, ಪತ್ರಕರ್ತ ಜಿ.ನಾರಾಯಣರಾಜು, ಎಸ್‌ಬಿಐ ಗೋಪಾಲ್‌, ಗಣೇಶ್‌, ಹೋಟಲ್ ಬಸವರಾಜು, ಪುರಸಭೆ ಮಾಜಿ ಸದಸ್ಯ ರಘುಯಾದವ್‌ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Share this article