ಸುಗ್ರೀವಾಜ್ಞೆ ತಂದರೂ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆ ಒಡೆಯರ್‌ಗೆ 3400 ಕೋಟಿ ರು. ಟಿಡಿಆರ್‌ ನೀಡಲು ವಾರ ಗಡುವು

KannadaprabhaNewsNetwork |  
Published : Feb 28, 2025, 12:49 AM IST
ಸರ್ವೋಚ್ಚ ನ್ಯಾಯಾಲಯ | Kannada Prabha

ಸಾರಾಂಶ

ಬಳ್ಳಾರಿ ಮತ್ತು ಜಯಮಹಲ್‌ ರಸ್ತೆಗಳ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಬೆಂಗಳೂರಿನ ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ ಮುಂದಿನ ಒಂದು ವಾರದೊಳಗೆ ₹3,400 ಕೋಟಿ ರು. ಮೊತ್ತದ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

- ಬಳಸಿದ ಜಾಗಕ್ಕೆ 49 ಕೋಟಿ ರು. ಕೊಡುತ್ತೇವೆಂದರೂ ಒಪ್ಪದ ಕೋರ್ಟ್‌

- ರಾಜ್ಯದ ಸರ್ಕಾರದ ನಿಲುವಿನಲ್ಲಿ ಏಕರೂಪತೆ ಇಲ್ಲ ಎಂದು ಸುಪ್ರೀಂ ಚಾಟಿ

ಕನ್ನಡಪ್ರಭ ವಾರ್ತೆ ನವದೆಹಲಿ

ಬಳ್ಳಾರಿ ಮತ್ತು ಜಯಮಹಲ್‌ ರಸ್ತೆಗಳ ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಬೆಂಗಳೂರಿನ ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ ಮುಂದಿನ ಒಂದು ವಾರದೊಳಗೆ ₹3,400 ಕೋಟಿ ರು. ಮೊತ್ತದ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರಿಂದಾಗಿ ಬೆಂಗಳೂರು ಅರಮನೆ ಮೈದಾನ ಪ್ರದೇಶದ ಬಳಕೆ ಮತ್ತು ನಿಯಂತ್ರಣದ ಅಧಿಕಾರವನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಉದ್ದೇಶಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

ಪ್ರಕರಣ ಸಂಬಂಧ ಮೈಸೂರು ರಾಜಮನೆತನದವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್‌ ಮತ್ತು ನ್ಯಾ.ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. ಸರ್ಕಾರದ ನಿಲುವಿನಲ್ಲಿ ಏಕರೂಪತೆ ಕಂಡು ಬರುತ್ತಿಲ್ಲ. ಸರ್ಕಾರ ಮತ್ತು ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದು ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್‌, 1994ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಭೂ ಸ್ವಾಧೀನದ ಮೌಲ್ಯಮಾಪನವನ್ನು 2024ರ ಪ್ರಕಾರ ಮಾಡಲಾಗುತ್ತಿದೆ. ಪ್ರಸ್ತುತ ಈ ಟಿಡಿಆರ್ ಪ್ರಕಾರ 462 ಎಕರೆಗಳಷ್ಟು ಸಂಪೂರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋದರೆ ರಾಜ್ಯದ ಬೊಕ್ಕಸಕ್ಕೆ 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹೊರೆ ಬೀಳಲಿದೆ. ಈ ತನಕ ಬಳಕೆ ಮಾಡಿರುವ ಜಾಗಕ್ಕೆ ಪರಿಹಾರವಾಗಿ 49 ಕೋಟಿ ರು. ಠೇವಣಿ ಮಾಡಿದ್ದೇವೆ. ಆದರೆ, ಬಳಕೆ ಮಾಡದಿರುವ ಜಾಗಕ್ಕೂ ಪರಿಹಾರ ಕೊಡುವುದಾದರೆ, 3,400 ಕೋಟಿ ರು. ನೀಡಬೇಕಾಗುತ್ತೆ. ಇದು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ. ಹೀಗಾಗಿ, ಸರ್ಕಾರ 15.7 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸುತ್ತಿಲ್ಲ. ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ನಮ್ಮ ಮೂಲ ಅರ್ಜಿ ಇತ್ಯರ್ಥವಾಗಬೇಕಿದೆ ಎಂದು ಪ್ರತಿಪಾದಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಾರದೊಳಗೆ ಟಿಡಿಆರ್‌ ಹಣವನ್ನು ಡಿಪಾಸಿಟ್‌ ಮಾಡಿ, ಅದರ ಪ್ರಮಾಣಪತ್ರವನ್ನು ಕೋರ್ಟ್‌ಗೆ ಸಲ್ಲಿಸಿ ಎಂದು ನಿರ್ದೇಶನ ನೀಡಿತು. ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 20ಕ್ಕೆ ಮುಂದೂಡಿತು.

ಇದಕ್ಕೂ ಮೊದಲು, ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ರಸ್ತೆ ಅಗಲಿಕರಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಬೆಂಗಳೂರಿನ ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ ಪರಿಹಾರವಾಗಿ ಟಿಡಿಆರ್‌ ₹3,400 ಕೋಟಿ ನೀಡಲು ಸೂಚಿಸಿತ್ತು. ಈ ಹೊರೆಯನ್ನು ತಪ್ಪಿಸಿಕೊಳ್ಳಲು ಸರ್ಕಾರ ಸುಗ್ರೀವಾಜ್ಞೆ ತಂದಿತ್ತು.

---ರಾಜ್ಯದ ವಾದ ಏನು?- ಬೆಂಗಳೂರು ಅರಮನೆ ಮೈದಾನದಲ್ಲಿ ಈವರೆಗೆ ಬಳಸಿಕೊಂಡಿರುವ ಜಾಗಕ್ಕೆ 49 ಕೋಟಿ ರು. ಕೊಡುತ್ತೇವೆ

- ಬಳಕೆ ಮಾಡದಿರುವ ಜಾಗಕ್ಕೂ ಪರಿಹಾರ ಕೊಡಬೇಕೆಂದಾದರೆ 3400 ಕೋಟಿ ರು. ನೀಡಬೇಕಾಗುತ್ತದೆ- ಇದು ರಾಜ್ಯದ ಬೊಕ್ಕಸಕ್ಕೆ ಹೊರೆ. ಹೀಗಾಗಿ 15.7 ಎಕರೆ ಭೂಮಿಯನ್ನೇ ಸ್ವಾಧೀನಪಡಿಸಿಕೊಳ್ಳುವುದಿಲ್ಲ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ