ಕನ್ನಡಪ್ರಭ ವಾರ್ತೆ ಮಂಡ್ಯ
ಹಬ್ಬದ ಪ್ರಯುಕ್ತ ಭಕ್ತಾದಿಗಳು ಮುಂಜಾನೆಯಿಂದಲೇ ಶಿವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಜಾಗರಣೆ ವ್ರತಾಚರಣೆ ಮಾಡಿದರು. ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ಹರಿಕಥೆ, ಶಿವ ಪಾರಾಯಣ, ಜಪ-ತಪಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಯಿಡೀ ಸಂಭ್ರಮದಿಂದ ನೆರವೇರಿದವು.
ಮಂಡ್ಯದ ಅರ್ಕೇಶ್ವರನಗರದ ಶ್ರೀ ಅರಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ ೪.೩೦ರಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ಕ್ಷೀರ, ಮೊಸರು, ಎಳನೀರು, ಗಂಧ, ಜೇನುತುಪ್ಪ, ಸಕ್ಕರೆ, ನಿಂಬೆಹಣ್ಣು, ಪಂಚಾಮೃತಾಭಿಷೇಕ, ಅರಿಶಿನ-ಕುಂಕುಮ, ಬಿಲ್ವಾರ್ಚನೆ, ಮುಂಜಾನೆಯಿಂದ ನಾಳೆ ಮುಂಜಾನೆಯವರೆಗೆ ಐದು ಜಾವಗಳ ಪೂಜೆ ನಡೆಯಿತು. ಪ್ರತೀ ಪೂಜೆಯ ಬಳಿಕ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿತ್ತು.ಮುಂಜಾನೆಯಿಂದಲೇ ಭಕ್ತರ ದಂಡು ದೇವಾಲಯದತ್ತ ಹರಿದುಬಂದಿತ್ತು. ಶ್ರೀ ಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿ ತೀರ್ಥ-ಪ್ರಸಾದ ಸ್ವೀಕರಿಸಿದ ಭಕ್ತರು ಧನ್ಯತಾ ಭಾವ ಮೆರೆದರು. ದೇವಾಲಯದಲ್ಲಿ ರಾತ್ರಿ ಪೂರ್ತಿ ಶಿವ ಪಾರಾಯಣ, ಭಜನಾ ಕಾರ್ಯಕ್ರಮಗಳು ನಡೆದವು. ಬಳಿಕ ನಾಳೆ ಬೆಳಗ್ಗೆ ಭಕ್ತಾಧಿಗಳಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಬೆಳಗ್ಗೆಯಿಂದಲೇ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಕಲ್ಲಹಳ್ಳಿಯ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬೆಳಗ್ಗೆ ೯.೧೫ಕ್ಕೆ ಮಹಾರುದ್ರಾಭೀಷೇಕ, ಮಧ್ಯಾಹ್ನ ೧೨ ಗಂಟೆಗೆ ಅಭಿಜಿನ್ ಲಗ್ನದಲ್ಲಿ ದೇವರಿಗೆ ಮಹಾಮಂಗಳಾರತಿ, ನಂತರ ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಸಲಾಯಿತು.
ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಶ್ರೀ ತಾಂಡವೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರಿಗೆ ರುದ್ರಾಭಿಷೇಕ ಮಾಡಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.