ಬಿಸಿಲ ಝಳ: ಸವಾರರ ನೆತ್ತಿ ಸುಡುತ್ತಿದೆ ಹೆಲ್ಮೆಟ್‌ ಕಾರ್ಯಾಚರಣೆ!

KannadaprabhaNewsNetwork |  
Published : Feb 27, 2025, 12:32 AM IST

ಸಾರಾಂಶ

ಗುಣಮಟ್ಟದ, ಐಎಸ್‌ಐ ಮಾರ್ಕ್‌ ಹೆಲ್ಮೆಟ್ ಧರಿಸಲು ದ್ವಿಚಕ್ರ ವಾಹನ ಸವಾರರಿಗೆ ಹೇಳುವ ಭರದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು, ಹಿರಿಯ ನಾಗರೀಕರೆನ್ನದೇ ಹಾಫ್ ಹೆಲ್ಮೆಟ್‌ಗಳನ್ನು ಕಾಲಲ್ಲಿ ಹಾಕಿ, ತುಳಿಯುವ ಮೂಲಕ ಸಂಚಾರ ಪೊಲೀಸ್ ಠಾಣೆ ಮಹಿಳಾ ಅಧಿಕಾರಿಯೊಬ್ಬರು ಇಲಾಖೆ ಬಗ್ಗೆಯೇ ಜನರು ಬೇಸರಪಡುವಂತೆ ವರ್ತಿಸುತ್ತಿದ್ದಾರೆ. ಇದು ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.

- ಹೆಲ್ಮೆಟ್‌ ಧರಿಸದ ಜನರಿಗೆ ತಲೆಬಿಸಿ । ಜನಜಾಗೃತಿಗೂ ಬಗ್ಗದ ಜನ; ಹೆಲ್ಮೆಟ್‌ಗಳ ಪಾಲಿಗೆ ಬಲಿಚಕ್ರವರ್ತಿಗಳಾ ಟ್ರಾಫಿಕ್‌ ಪೊಲೀಸರು?

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಗುಣಮಟ್ಟದ, ಐಎಸ್‌ಐ ಮಾರ್ಕ್‌ ಹೆಲ್ಮೆಟ್ ಧರಿಸಲು ದ್ವಿಚಕ್ರ ವಾಹನ ಸವಾರರಿಗೆ ಹೇಳುವ ಭರದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು, ಹಿರಿಯ ನಾಗರೀಕರೆನ್ನದೇ ಹಾಫ್ ಹೆಲ್ಮೆಟ್‌ಗಳನ್ನು ಕಾಲಲ್ಲಿ ಹಾಕಿ, ತುಳಿಯುವ ಮೂಲಕ ಸಂಚಾರ ಪೊಲೀಸ್ ಠಾಣೆ ಮಹಿಳಾ ಅಧಿಕಾರಿಯೊಬ್ಬರು ಇಲಾಖೆ ಬಗ್ಗೆಯೇ ಜನರು ಬೇಸರಪಡುವಂತೆ ವರ್ತಿಸುತ್ತಿದ್ದಾರೆ. ಇದು ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ನಗರದ ವಿವಿಧ ವೃತ್ತ, ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಗುಣಮಟ್ಟದ ಐಎಸ್‌ಐ ಮಾರ್ಕ್‌ನ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜನಜಾಗೃತಿ ಹೆಸರಿನಲ್ಲಿ ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್ ಕಸಿದುಕೊಳ್ಳುವುದು, ಇಳಿವಯಸ್ಸನ್ನೂ ನೋಡದೇ, ಪುರುಷ-ಮಹಿಳೆಯರೆನ್ನದೇ ಧರಿಸಿದ್ದ ಹೆಲ್ಮೆಟ್‌ ಕಿತ್ತುಕೊಳ್ಳುವುದು, ವಿದ್ಯಾರ್ಥಿ-ಯುವಜನರಿಗೆ ಕಿರಿಕಿರಿಯಾಗುವಂತೆ ಕೆಲವು ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.

ಕಳೆದ ಭಾನುವಾರ ಮಧ್ಯಾಹ್ನ 12ರಿಂದ 1.30 ಗಂಟೆ ಅವದಿಯಲ್ಲಿ ಡೆಂಟಲ್ ಕಾಲೇಜು ರಸ್ತೆಯಲ್ಲಿ ಕಳಪೆ ಹೆಲ್ಮೆಟ್, ಹಾಫ್ ಹೆಲ್ಮೆಟ್‌ ಧರಿಸಿದ್ದ ಸವಾರರನ್ನು ಹಿಡಿಯುವ ಕೆಲಸದಲ್ಲಿ ಸಂಚಾರ ಪೊಲೀಸರು ತೊಡಗಿದ್ದರು. ರಸ್ತೆ ಎರಡೂ ಬದಿಯಿಂದ ಸಾಗುತ್ತಿದ್ದ ಸ್ಕೂಟರ್, ಬೈಕ್‌ಗಳ ಹಿಡಿದು, ಹೆಲ್ಮೆಟ್ ಕಸಿದುಕೊಳ್ಳುತ್ತಿದ್ದರು. ಹೀಗೆ ಆರೇಳಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ಕೆಳಗೆ ಹಾಕಿ, ಸಂಚಾರ ಠಾಣೆ ಮಹಿಳಾ ಅಧಿಕಾರಿಯೊಬ್ಬರು ಸಾರ್ವಜನಿಕರ ಸಮ್ಮುಖದಲ್ಲೇ ಬೂಟುಗಾಲಿನಿಂದ ಹೆಲ್ಮೆಟ್ ತುಳಿಯುವ ಮೂಲಕ ಯಾರದ್ದೋ ಸಿಟ್ಟನ್ನು ಬಡವರ ಹೆಲ್ಮೆಟ್ ಮೇಲೆ ತೀರಿಸಿಕೊಂಡರು ಎಂದು ದೂರಲಾಗಿದೆ.

ಕಾಂಕ್ರಿಟ್ ಕಾಡಾಗುತ್ತಿರುವ ಜಿಲ್ಲಾ ಕೇಂದ್ರದಲ್ಲಿ ಬಿಸಿ ಗಾಳಿಯನ್ನೇ ಜನ ಉಸಿರಾಡುತ್ತಿದ್ದಾರೆ. ಅಂಥದ್ದರಲ್ಲಿ ದ್ವಿಚಕ್ರ ವಾಹನಗಳನ್ನು ತಡೆದು, ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರೆನ್ನದೇ ಹೆದರಿಸಿ, ಬೆದರಿಸಿ ಹೆಲ್ಮೆಟ್ ಕಸಿದರೆ, ದಂಡ ವಿಧಿಸಿದರೆ ಜನ ನೆಮ್ಮದಿಯಿಂದ ಸಂಚರಿಸುವುದಾದರೂ ಹೇಗೆಂಬ ಪ್ರಶ್ನೆ ಜನರ ಮಧ್ಯೆ ಧುತ್ತನೆ ಎದ್ದುನಿಂತಿದೆ.

ಸದ್ಯದ ಬೇಸಿಗೆ ದಿನಗಳಲ್ಲಿ ಇಡೀ ದೇಹ ಕಾದ ಕಾವಲಿಯಂತಾಗುತ್ತಿದೆ. ಮನುಷ್ಯನ ಮಿದುಳಿಗೆ ಅತಿಯಾದ ತಾಪ ಒಳ್ಳೆಯದಲ್ಲ ಎಂಬುದು ವೈದ್ಯಕೀಯ ಲೋಕದ ಮಾತು. ಆದರೆ, ಧರಿಸಿದರೆ ಉಸಿರಾಡುವುದಕ್ಕೂ ಆಗದಂತೆ, ಗಾಳಿಯೂ ಆಡದಂತೆ ತಲೆಗೆ ಕೂಡುವ ಪೂರ್ಣ ಪ್ರಮಾಣದ, ಕಿವಿಗೆ ಏನೂ ಕೇಳದಂತಾಗಿರುವ ಗುಣಮಟ್ಟದ, ಐಎಸ್ಐ ಮಾರ್ಕ್‌ನ ಹೆಲ್ಮೆಟ್ ಧರಿಸುವಂತೆ ಪೊಲೀಸ್ ಇಲಾಖೆ ಈಗ ಜಾಗೃತಿ ಮೂಡಿಸಿ, ಕಾನೂನು ಕ್ರಮಕ್ಕೂ ಮುಂದಾಗಿದೆ. ಆದರೆ, ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬುದು ಬಹುತೇಕ ನೊಂದ ಬೈಕ್‌, ಸ್ಕೂಟಿ ಚಾಲಕರ ಪ್ರಶ್ನೆಯಾಗಿದೆ.

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಬೇಸಿಗೆ ಅವಧಿಯಲ್ಲಿ 3-4 ತಿಂಗಳ ಮಟ್ಟಿಗೆ ಇಂತಹ ಹೆಲ್ಮೆಟ್‌ನಿಂದ ರಿಯಾಯಿತಿ ನೀಡಲಾಗುತ್ತದೆ. ಬದಲಾಗಿ ಲಘು ವಾಹನ, ಭಾರೀ ವಾಹನ, ದ್ವಿಚಕ್ರ ವಾಹನಗಳ ಚಾಲಕರಿಗೆ ಸಂಚಾರ ನಿಯಮ ಪಾಲನೆ ಮಾಡುವಂತೆ ಹೇಳಿ, ಸ್ವತಃ ಸಂಚಾರ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ಅದರ ಕಡೆ ಗಮನಕೊಡುತ್ತಾರೆ. ದಾವಣಗೆರೆಯಲ್ಲೂ ಈಗ ಇದೇ ರೀತಿಯ ಬಿಸಿಲ ಝಳ ಕಾಡುತ್ತಿದೆ. ಹಿರಿಯ ಅಧಿಕಾರಿಗಳು ವಾಸ್ತವವನ್ನೂ ಅರ್ಥ ಮಾಡಿಕೊಳ್ಳಬೇಕು.

ಕಾನೂನಿದೆ ಸರಿ. ಆದರೆ, ಇಡೀ ಊರಿನಲ್ಲಿ ಕಳ್ಳರನ್ನು ಹಿಡಿಯಬೇಕಾದ ಪೊಲೀಸರು ಹೆಲ್ಮೆಟ್ ಹಾಕದವರು, ಆಕಸ್ಮಾತ್ ಹೆಲ್ಮೆಟ್ ಹಾಕಿದ್ದರೂ ಅದು ಗುಣಮಟ್ಟದ್ದಾ, ಐಎಸ್‌ಐ ಮಾರ್ಕ್ ಹೆಲ್ಮೆಟ್ ಹೌದಾ, ಅಲ್ಲವಾ ಅಂತಾ ನೋಡುವುದಕ್ಕೆ ತಮ್ಮ ಶಕ್ತಿ, ಯುಕ್ತಿಯನ್ನೆಲ್ಲಾ ಸುರಿಯುತ್ತಿರುವುದು ಹೆಲ್ಮೆಟ್‌ ಕಾರ್ಯಾಚರಣೆ ಸಾಕ್ಷಿಯಾಗಿದೆ.

- - -

ಬಾಕ್ಸ್‌-1* 3-4 ತಿಂಗಳು ರಿಯಾಯಿತಿ ನೀಡಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬೇಸಿಗೆ ಕಾಲದಲ್ಲಿ ಬಿಸಿಲಿನಿಂದ ಜನರ ರಕ್ಷಿಸಲು ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳ ಅವಧಿಯನ್ನೇ ಬದಲಿಸುತ್ತಾರೆ. ದ್ವಿಚಕ್ರ ವಾಹನಗಳ ಸವಾರರಿಗೆ ಹೆಲ್ಮೆಟ್ ಧರಿಸುವುದರಿಂದಲೂ ಪೊಲೀಸ್ ಇಲಾಖೆ ರಿಯಾಯಿತಿ ನೀಡುತ್ತದೆ. ಆದರೆ, ಪ್ರತಿವರ್ಷ ದಾವಣಗೆರೆಯಲ್ಲಿ ಬೇಸಿಗೆ ಕಾಲದಲ್ಲೇ ಪೊಲೀಸ್ ಇಲಾಖೆ ಹೆಲ್ಮೆಟ್‌ ವಿಚಾರಕ್ಕೆ ಜನರಿಗೆ ಇರುಸು ಮುರುಸು ಉಂಟು ಮಾಡುತ್ತಿದೆ. ಹೆಲ್ಮೆಟ್ ಗೆ ನೀಡುವಷ್ಟೇ ಸಂಚಾರ ನಿಯಮ ಉಲ್ಲಂಘಿಸುವ, ತ್ರಿಬಲ್ ರೈಡ್‌, ಅತಿವೇಗ, ಅಜಾಗರೂಕವಾಗಿ ಚಾಲನೆ ಮಾಡುವವರು, ನಂಬರ್ ಪ್ಲೇಟ್ ಇಲ್ಲದ ವಾಹನಗಳ ಚಾಲಕರಿಗೆ ಬಿಸಿಮುಟ್ಟಿಸುವ ಕೆಲಸ ಮಾಡಲಿ. ನಗರದಲ್ಲಿ 30 ಕಿಮೀ ವೇಗ ಮಿತಿ ಇದೆ. ಅದನ್ನು ಮೀರಿದರೆ ಕ್ರಮ ಕೈಗೊಳ್ಳಲಿ. ಪೊಲೀಸ್ ಇಲಾಖೆಯು ಸದ್ಯ 3-4 ತಿಂಗಳು ಪೂರ್ಣ ಹೆಲ್ಮೆಟ್‌ನಿಂದ ರಿಯಾಯಿತಿ ನೀಡಲಿ.

- ಶ್ರೀಕಾಂತ ಬಗರೆ, ಯುವ ಮುಖಂಡ, ಕಾಂಗ್ರೆಸ್‌

(26ಕೆಡಿವಿಜಿ4)

- - -

ಬಾಕ್ಸ್‌-2 * ಪೂರ್ಣ ಹೆಲ್ಮೆಟ್‌ನಿಂದ ಅಪೂರ್ಣ ದೃಶ್ಯ! ಮನುಷ್ಯನಿಗೆ ಮಿದುಳು ಅತಿ ಮುಖ್ಯವಾದ ಭಾಗ. ಬೇಸಿಗೆಯಲ್ಲಿ ಹೆಲ್ಮೆಟ್ ಧರಿಸುವುದರಿಂದ ತಲೆಯಲ್ಲಿ ಮತ್ತಷ್ಟು ಶಾಖ ಉಂಟಾಗಿ ಸ್ಟ್ರೋಕ್ ಹೊಡೆಯುವ, ಮಿದುಳಿಗೆ ಅಪಾಯವಾಗುವ ಸಾಧ್ಯತೆಯೂ ಇಲ್ಲದಿಲ್ಲ. ನನಗೀಗ 56 ವರ್ಷವಾಗಿದ್ದೂ, ಪೂರ್ಣ ಹೆಲ್ಮೆಟ್ ಧರಿಸಿ, ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದರೆ ಹಿಂದಿನ ವಾಹನ ಚಾಲಕ ಹಾರ್ನ್ ಮಾಡಿದ್ದಾಗಲೀ, ಹೆಲ್ಮೆಟ್‌ನಿಂದಾಗಿ ಅಕ್ಕಪಕ್ಕ ಓವರ್‌ ಟೇಕ್ ಮಾಡುವ ವಾಹನಗಳಾಗಲೀ ಕಾಣದಂತಾಗಿತ್ತು. ಅಲ್ಲದೇ, ಇಷ್ಟೊಂದು ಝಳ, ಸೆಖೆ ಇದ್ದಾಗ ಪೂರ್ಣ ಹೆಲ್ಮೆಟ್ ಧರಿಸಿದರೆ, ತಲೆಯಲ್ಲಿರುವ ನಾಲ್ಕು ಕೂದಲೂ ಉದುರುತ್ತವೆ. ಈಗಾಗಲೇ ಸಾಕಷ್ಟು ಮದುವೆಗೆ ಹೆಣ್ಣು ನೋಡುತ್ತಿರುವ ಯುವಕರಿಗೆ ತಲೆಯಲ್ಲಿ ಕೂದಲಿಲ್ಲವೆಂದು ಹೆಣ್ಣು ಕೊಡದ ನಿದರ್ಶನವಿದೆ. ಇದು ತಮಾಷೆಯಲ್ಲ. ವಾಸ್ತವಿ. ಈ ಬಗ್ಗೆಯೂ ಇಲಾಖೆ ಗಮನಹರಿಸಿ ಸ್ಪಂದಿಸಲಿ.

- ಕೆ.ಜಿ.ಯಲ್ಲಪ್ಪ, ರಾಜ್ಯಾಧ್ಯಕ್ಷ, ವಿಶ್ವ ಕರವೇ.

(26ಕೆಡಿವಿಜಿ5)

- - - * 26ಕೆಡಿವಿಜಿ6, 7, 8, 9:

ದಾವಣಗೆರೆ ವಿವಿಧೆಗೆ ಕಳೆದೊಂದು ವಾರದಿಂದ ಐಎಸ್ಐ ಮಾರ್ಕ್ ಇಲ್ಲದ, ಹಾಫ್‌ ಹೆಲ್ಮೆಟ್ ಧರಿಸಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುತ್ತಿರುವ ಸಂಚಾರ ಪೊಲೀಸರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!