ಫೆ.೧೫ ಮಹಾಶಿವರಾತ್ರಿ, ಫೆ. ೧೮ ಮಹಾರಥೋತ್ಸವ
ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವ ಫೆ. ೧೧ರಿಂದ ಪ್ರಾರಂಭವಾಗಲಿದೆ. ಒಂಭತ್ತು ದಿನಗಳ ಕಾಲ ನಡೆಯುವ ದೈವಿಕ ಮಹೋತ್ಸವಕ್ಕೆ ಪುಣ್ಯ ಕ್ಷೇತ್ರದ ಮಂದಿರದಲ್ಲಿ ಸಕಲ ಸಿದ್ದತೆ ಪೂರ್ಣಗೊಂಡಿದೆ.
ಮೊದಲ ದಿನ ಗಣೇಶ ಪೂಜೆ ಧ್ವಜಾರೋಹಣ, ಮೃತಿಕಾ ಹರಣೋತ್ಸವ, ಭೂತಬಲಿ ಮತ್ತಿತರ ದೈವಿಕ ಕಾರ್ಯಕ್ರಮ ಜರುಗಲಿದೆ.ವಿವಿಧ ಹವನ, ಸಿಂಹವಾಹನೋತ್ಸವ, ಮಹಾಕುಂಭಾಭಿಷೇಕ ಪೂರ್ವಕ ಮಹಾಪೂಜೆ, ಪಂಚಾಮೃತಾಭಿಷೇಕ, ಮಯೂರ ಯಂತ್ರೋತ್ಸವ, ವೃಷಭವಾಹನೋತ್ಸವ, ಶಾಂತಿಘಟರ‍್ಯಭಿಷೇಕ, ದಂಡಬಲಿ, ಮಹಾರಥೋತ್ಸವ, ಗ್ರಾಮಬಲಿ, ಮೃಗಯಾತ್ರೆ, ಚೂರ್ಣೋತ್ಸವ, ಅವಭೃತ ರಾತ್ರಿ ಜಲಯಾನೋತ್ಸವ, ದೀಪೋತ್ಸವ ಮಹಾಪೂರ್ಣಾಹುತಿ ಅಂಕುರಾರ್ಪಣೆ, ಅಂಕುರ ಪ್ರಸಾದ ವಿತರಣೆ ನಡೆಯಲಿದೆ. ಪ್ರತಿ ದಿನ ದೇವರ ಉತ್ಸವ ಹಾಗೂ ಮೂರನೇ ದಿನದಿಂದ ರಥಬೀದಿಯಲ್ಲಿ ಸಂಜೆ ನಡೆಯುವ ಪುಷ್ಪರಥೋತ್ಸವ ನಡೆಯುವುದು ವಿಶೇಷವಾಗಿದೆ.ದೇವಾಲಯದಿಂದ ಭಕ್ತರಿಗೆ ವ್ಯವಸ್ಥೆ:
ಮಂದಿರದ ಆಡಳಿತದವರು ಮಹಾಶಿವರಾತ್ರಿಯಂದು ರಾಜ್ಯ, ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಿರುವುದರಿಂದ ದೇವರ ದರ್ಶನಕ್ಕೆ ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಿದ್ದು, ಮುಖ್ಯಕಲತೀರದವರೆಗೆ ಪೆಂಡಾಲ್ ಹಾಕಲಾಗಿದೆ. ಕುಡಿಯುವ ನೀರು ಹಾಗೂ ಭಕ್ತರಿಗೆ ದೇವಾಲಯದ ಅಮೃತಾನ್ನ ಭೂಜನಶಾಲೆಯಲ್ಲಿ ಎರಡು ಹೊತ್ತು ಉಚಿತ ಅನ್ನಪ್ರಸಾದ ವ್ಯವಸ್ಥೆ, ಶಿವರಾತ್ರಿ ದಿನದಂದು ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾರಥೋತ್ಸವ ದಿನದಂದು ರಥೋತ್ಸವ ವೀಕ್ಷಣೆಗೆ ಹಲವು ಸಾರ್ವಜನಿಕ ಸ್ಥಳದಲ್ಲಿ ಎಲ್.ಇ.ಡಿ, ಪರದೆ ಅಳವಡಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ:ಮಹಾಬಲೇಶ್ವರ ಮಂದಿರದ ಆವಾರದಲ್ಲಿನ ಶಿವಪದ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ರಥಬೀದಿಯಲ್ಲಿ ಆಕರ್ಷಿಸುತ್ತಿರುವ ರಥ:
ಶಿವರಾತ್ರಿ ಮಹೋತ್ಸವದಲ್ಲಿ ನಡೆಯುವ ಶ್ರೀಮನ್ಮಹಾರಥೋತ್ಸವಕ್ಕೆ ರಥ ಕಟ್ಟುವ ಕಾರ್ಯ ಚುರುಕಾಗಿದ್ದು, ರಥಸಪ್ತಮಿಯಂದು ರಥದ ಗಡ್ಡೆಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿ ಹೊರತಂದ ಬಳಿಕ ಹಾಲಕ್ಕಿ ಒಕ್ಕಲಿಗ ಸಮಾಜದವರು ರಥಕಟ್ಟುವ ಕಾರ್ಯ ಪ್ರಾರಂಭವಾಗಿದ್ದು, ಬುಧವಾರ ಗಣೇಶ ಪೂಜೆ ಧ್ವಜಾರೋಹಣದ ಬಳಿಕ ಆಕರ್ಷಕ ಪತಾಕೆ ಕಟ್ಟುವ ಕೆಲಸ ನಡೆಯುತ್ತದೆ. ವಿಶಿಷ್ಟವಾಗಿ ರಥಕಟ್ಟು ಕಾರ್ಯ ಪ್ರವಾಸಿಗರನ್ನ ಆಕರ್ಷಿಸುತ್ತಿದೆ.