ಗಾಂಧಿ, ಶಾಸ್ತ್ರಿ ಜಯಂತಿ | ಗಾಂಧಿ, ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತು ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಅಪ್ರತಿಮ ಹೋರಾಟಗಾರ ಮಹಾತ್ಮ ಗಾಂಧಿಯಾದರೆ, ಉತ್ತಮ ಆಡಳಿತಗಾರ ಲಾಲ್ ಬಹದ್ದೂರು ಶಾಸ್ತ್ರಿ ಎಂದು ತಹಸೀಲ್ದಾರ್ ಟಿ.ರಮೇಶ್ ಬಾಬು ಬಣ್ಣಿಸಿದರು. ಪಟ್ಟಣದ ತಾಲೂಕು ಕಚೇರಿಯ ಸಭಾ ಭವನದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜನ್ಮ ದಿನಾಚರಣೆಯಲ್ಲಿ ಗಾಂಧಿ ಹಾಗು ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ತರಲು ಅಹಿಂಸಾತ್ಮಕ ಚಳುವಳಿ ಹಾಗೂ ಸತ್ಯಾಗ್ರಹದ ಮೂಲಕವೇ ಸ್ವಾತಂತ್ರ್ಯ ಬರುವ ತನಕ ನಿರಂತರ ಹೋರಾಟ ನಡೆಸಿದ ಅಪ್ರತಿಮ ಹೋರಾಟಗಾರ ಮಹಾತ್ಮ ಗಾಂಧಿ ಎಂದು ಹೇಳಿದರು. ಗಾಂಧಿ ಅವರಲ್ಲಿ ಆಧ್ಯಾತ್ಮಿಕ ಚಿಂತನೆ ಅಳವಡಿಸಿಕೊಂಡಿದ್ದರು. ಅಲ್ಲದೆ ದೇಶದ ಹಳ್ಳಿಗಳು ರಾಮ ರಾಜ್ಯವಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದರು ಎಂದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ಮಂತ್ರಿಯಾಗಿದ್ದಾಗ ರೈಲ್ವೆ ದುರಂತದಲ್ಲಿ 150 ಮಂದಿ ಪ್ರಯಾಣಿಕರು ಸತ್ತಾಗ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದರು. ಪ್ರಧಾನಿಯಾಗಿದ್ದರೂ ಸರಳ ಜೀವನ ಕ್ರಮ ಅನುಸರಿಸಿದ್ದರು. ಭಾರತ ಹಾಗೂ ಪಾಕಿಸ್ತಾನದ ಮೇಲೆ ಯುದ್ಧ ಘೋಷಣೆಯಾದಾಗ ಯೋಧರಿದ್ದ ಸ್ಥಳಕ್ಕೆ ತೆರಳಿ ನಾನು ನಿಮ್ಮ ಜೊತೆ ಇದ್ದೇನೆ ಧೈರ್ಯವಾಗಿ ಯುದ್ಧ ಎದುರಿಸಿ ಎಂದು ಹೇಳಿದ್ದರು ಎಂದು ವಿವರಿಸಿದರು. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನಕ್ಕೆ ತೇಯ್ದ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರು ಈ ಪ್ರಪಂಚ ಇರುವ ತನಕ ಅಜರಾಮರ ಎಂದರು. ಈ ಸಂದರ್ಭ ಶಿರಸ್ತೇದಾರ್ ಮಹೇಶ್, ಗ್ರಾಮ ಲೆಕ್ಕಿಗ ಜವರೇಗೌಡ, ಪತ್ರಕರ್ತ ಮಹೇಶ್ ಮಡಹಳ್ಳಿ, ಮುಖಂಡ ಶಂಕರ್ ಮಾದಿಗ, ಅಬ್ದುಲ್ ಮಾಲೀಕ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿ ಇದ್ದರು. ಗುಂಡ್ಲುಪೇಟೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯಲ್ಲಿ ತಹಸೀಲ್ದಾರ್ ಟಿ.ರಮೇಶ್ ಬಾಬು ಮಾತನಾಡಿದರು.