ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ಚವಡಿಹಾಳ ಗ್ರಾಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಶನ್ ಬೇನಾಲ್ ಆರ್.ಎಸ್ ಹಾಗೂ ಭಾಗ್ಯವಂತಿ ಪದವಿ ಪೂರ್ವ ಕಾಲೇಜು ಚವಡಿಹಾಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಯುವ ಮನಸುಗಳು ವಿಷಯ ಕುರಿತು ರಾಜ್ಯ ಮಟ್ಟದ ವಿಶೇಷ ಉಪನ್ಯಾಸ ಕಾರ್ಯಕ್ರಮ, ರಸಪ್ರಶ್ನೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಜಯಪುರ ಸರ್ಕಾರಿ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ ಆರ್.ಸಿ.ಹಿರೇಮಠ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಒಬ್ಬ ವ್ಯಕ್ತಿಯಲ್ಲ ಅವರೊಂದು ಶಕ್ತಿ. ತಮ್ಮ ಸದ್ಭಾವನ, ದೂರದೃಷ್ಟಿ, ಮಾನವೀಯತೆಯ ಮಹಾರೂಪವೇ ಮೈದಳೆದ ಆದರ್ಶ ಪುರುಷರಾಗಿದ್ದಾರೆ. ಅಂತಹ ಯುಗ ಪುರುಷನನ್ನು ಮತ್ತೊಮ್ಮೆ ನೋಡಬೇಕಾದರೆ ನಾವು ಸಾವಿರಾರು ವರ್ಷಗಳ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಬೇಕಾಗುತ್ತದೆ ಎಂದು ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಗಾಂಧಿಜೀ ಅಂತಹ ಮಹಾನ್ ನಾಯಕರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಬಲಿಷ್ಠ ರಾಷ್ಟ್ರ ಕಟ್ಟಬೇಕು ಎಂದು ಹೇಳಿದರು.ಆರ್.ಎಂ.ಜಿ.ಎಫ್.ಸಂಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಮಾನವ ಪ್ರಪಂಚಕ್ಕೆ ದೀಪಧಾರಿಯೂ ಹೌದು ದಾರಿದೀಪವೂ ಹೌದು. ಬಾಪೂ ಭಾರತಕ್ಕೆ ಅಷ್ಟೇ ಅಲ್ಲ, ಸೌತ್ ಆಫ್ರಿಕದ ನೆಲ್ಸನ್ ಮಂಡೇಲಾ, ಅಮೇರಿಕದ ಡಾ.ಮಾರ್ಟಿನ್ ಲೂಥರ್ ಕಿಂಗ್ ಜ್ಯುನಿಯರ್, ಬರ್ಮಾದ ಆಂಗ್ ಸಾನ್ ಸೂಕಿ, ಐನ್ ಸ್ಟಿನ್, ಲೆಜ್ ವೇಲೆಸಾ, ಪರ್ಲ್ಬಕ್, ಬರ್ಕ್ ವೈಟ್, ರೋಮಾ ರೋಲಾ, ಲೂಯಿಸ್ ಫಿಶರ್ ಹೀಗೆ ಜಗತ್ತಿನ ಅಸಂಖ್ಯಾತ ಜನನಾಯಕರಿಗೆ ಆದರ್ಶ ಪುರುಷರಾಗಿದ್ದಾರೆ ಎಂದರು.
ಮಹಾತ್ಮ ಗಾಂಧೀಜಿಯವರ ಜೀವನ ಮೌಲ್ಯಗಳು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ಹಾಗೂ ಜಗತ್ತಿನ ಗಣ್ಯರ ದೃಷ್ಟಿಯಲ್ಲಿ ಗಾಂಧೀಜಿ ವಿಷಯಗಳ ಕುರಿತು ವಿಚಾರಗೋಷ್ಠಿಗಳನ್ನು ನಡೆಸಲಾಯಿತು.
ಬಾಪೂಜಿ ಕುರಿತು ಜರುಗಿದ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಾಂಧಿ ಪುಸ್ತಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.