ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು.
ಗಂಗಾವತಿ: ಆಡಂಬರದಿಂದ ದಿಗಂಬರದೆಡೆಗೆ ಪಯಣಿಸಿದ ತ್ಯಾಗಿ ವರ್ಧಮಾನ ಮಹಾವೀರರು ಎಂದು ಪ್ರಾಚಾರ್ಯ ಪ್ರೊ. ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಮಹಾವೀರ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾವೀರರು ಧರ್ಮಸಹಿಷ್ಣುತೆ, ಆತ್ಮಶುದ್ಧಿ ಮತ್ತು ಸಾಮಾಜಿಕ ಸಮಾನತೆಯ ಪ್ರತೀಕವಾಗಿದ್ದವರು ಎಂದು ಹೇಳಿದರು. “ಮಾನವನು ತನ್ನ ಆಸೆ-ಆಕಾಂಕ್ಷೆಗಳನ್ನು ನಿಯಂತ್ರಿಸಿದಾಗಲೇ ನಿಜವಾದ ಸ್ವಾತಂತ್ರ್ಯವನ್ನು ಪಡೆಯಬಹುದು” ಎಂಬ ಮಹಾವೀರರ ತತ್ವವನ್ನು ಅವರು ಉಲ್ಲೇಖಿಸಿದರು. ರಾಜಾಡಂಬರದ ಜೀವನವನ್ನು ತ್ಯಜಿಸಿ ದಿಗಂಬರವಾದಿಯಾದ ಮಹಾನ್ ತ್ಯಾಗಿ ವರ್ಧಮಾನ ಮಹಾವೀರರು ಎಂದರು.
ಹೊರಗಿನ ಶತ್ರುವಿನೊಂದಿಗೆ ಹೋರಾಡುವವನು ವೀರ, ಆದರೆ ನಮ್ಮೊಳಗಿನ ಶತ್ರುವಿನೊಂದಿಗೆ ಹೋರಾಡಿದವ ಮಹಾವೀರ ಎಂದು ಪ್ರತಿಪಾದಿಸಿದ ವರ್ಧಮಾನರ ತ್ಯಾಗ, ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಂಡು ಶಾಂತಿ, ಸೌಹಾರ್ದತೆ ಮತ್ತು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಂಕ್ರಪ್ಪ ಎಂ. ಮಾತನಾಡಿ, ಮಹಾವೀರರು ಕೇವಲ ಧಾರ್ಮಿಕ ಗುರುಗಳಲ್ಲ, ಮಾನವಕುಲಕ್ಕೆ ಶಾಂತಿ, ಅಹಿಂಸೆ ಮತ್ತು ಸತ್ಯದ ಮಾರ್ಗ ತೋರಿದ ಮಹಾನ್ ತತ್ತ್ವಜ್ಞರಾಗಿದ್ದರು ಎಂದು ಹೇಳಿದರು. “ಅಹಿಂಸೆಯೇ ಪರಮ ಧರ್ಮ” ಎಂಬ ಮಹಾವೀರರ ಸಂದೇಶ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಚೇರಿ ಸಿಬ್ಬಂದಿ ವಿನಾಯಕ, ಶಾಂತಿ, ಶರಣ, ಉಪಸ್ಥಿತರಿದ್ದರು.
ಯಲಬುರ್ಗಾದಲ್ಲಿ ಮಹಾವೀರ ಜಯಂತಿ: ಸತ್ಯ, ಅಹಿಂಸೆ ಮತ್ತು ಉತ್ತಮ ನೀತಿ ಹೊಂದಿದ್ದ ವರ್ಧಮಾನ ಮಹಾವೀರರ ಚಿಂತನೆಗಳು ಪ್ರತಿಯೊಬ್ಬರನ್ನೂ ಅಹಿಂಸಾ ಜೀವನಕ್ಕೆ ಪ್ರೇರೇಪಿಸುತ್ತವೆ ಎಂದು ತಾಪಂ ಇಒ ನೀಲಗಂಗಾ ಬಬಲಾದ ಹೇಳಿದರು.
ಯಲಬುರ್ಗಾ ಪಟ್ಟಣದ ತಾಪಂ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವರ್ಧಮಾನ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೈನ ಧರ್ಮದ ೨೪ನೇ ತೀರ್ಥಂಕರರಾದ ಮಹಾವೀರರ ಬೋಧನೆಗಳು, ತತ್ವಾದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಭಗವಾನ್ ಮಹಾವೀರರು ರಾಜಭೋಗಗಳನ್ನು ತ್ಯಜಿಸಿ ಅಹಿಂಸಾ ಮಾರ್ಗದ ಮೂಲಕ ಜೀವನ ಸಾಕ್ಷಾತ್ಕಾರಗೊಳಿಸಿದವರು. ಎಲ್ಲರೂ ಹಿಂಸೆ ಮನೋಭಾವನೆ ತ್ಯಜಿಸಿ, ಅಹಿಂಸಾ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಮಹಾವೀರರ ಸಂದೇಶಗಳು ಎಲ್ಲರಿಗೂ ದಾರಿದೀಪವಾಗಿವೆ. ಇಂದಿನ ಯುವ ಜನಾಂಗ ಇಂತಹ ಮಹಾತ್ಮರ ಹಾದಿಯಲ್ಲಿ ಸಾಗುವುದು ಅನಿವಾರ್ಯತೆ ಇದೆ. ಮಹಾವೀರರ ಚಿಂತನೆಗಳ ಬಗ್ಗೆ ಅಧ್ಯಯನ ಅವಶ್ಯವಿದೆ ಎಂದರು.ತಾಪಂ ನೌಕರರಾದ ಶರಣಪ್ಪ ಇಂಡಿ, ಬಸವರಾಜ, ಉಮೇಶ, ಬಸವರಾಜ ಮಾಲಿಪಾಟೀಲ್, ಪ್ರಶಾಂತ ಬಡಿಗೇರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.