ಆಹಿಂಸೆ, ಶಾಂತಿ, ಸಹಿಷ್ಣತೆ ಎಂಬ ಮಹಾವೀರರ ತತ್ವಗಳು ಇಂದಿನ ಪ್ರಪಂಚದ ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಮುಖ ಅಂಶಗಳಾಗಿವೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರುಆಹಿಂಸೆ, ಶಾಂತಿ, ಸಹಿಷ್ಣತೆ ಎಂಬ ಮಹಾವೀರರ ತತ್ವಗಳು ಇಂದಿನ ಪ್ರಪಂಚದ ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಮುಖ ಅಂಶಗಳಾಗಿವೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜೈನ ಸಮುದಾಯಗಳ ವತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರರ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವವೇ ಹೊತ್ತಿ ಉರಿಯುತ್ತಿರುವ ಇಂದಿನ ದಿನಗಳಲ್ಲಿ ಭಗವಾನ ಮಹಾವೀರರು ಎರಡು ಸಾವಿರ ವರ್ಷಗಳ ಹಿಂದೆ ಪ್ರತಿಪಾದಿಸಿದ ಶಾಂತಿ ಮತ್ತು ಅಹಿಂಸಾ ಮಂತ್ರವನ್ನು ನಾವೆಲ್ಲರೂ ಪಾಲಿಸಿದ್ದೇ ಆದರೆ, ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ. ಜೈನ ಧರ್ಮಿಯರು ಬಹಳ ಭಕ್ತಿಯಿಂದ ನಗರದಲ್ಲಿ ಭಗವಾನ್ ಮಹಾವೀರರ ಜಯಂತಿಯನ್ನು ಎರಡು ಸಮುದಾಯಗಳು ಸೇರಿ ಆಚರಿಸುತ್ತಿವೆ. ಸರಕಾರ ಒಂದು ದಿನ ಮುಂಚಿತವಾಗಿ ರಜೆ ಘೋಷಣೆ ಮಾಡಿದ ಕಾರಣ, ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಚರಿಸಲಾಗುತ್ತಿದೆ. ಎಲ್ಲರಿಗೂ ಭಗವಾನ್ ಮಹಾವೀರರ ಜಯಂತಿಯ ಶುಭಾಶಯ ಗಳನ್ನು ಕೋರುತ್ತೇನೆ. ಎಲ್ಲರೂ ಒಟ್ಟಿಗೆ ಬಾಳುವಂತಹ ವಾತಾವರಣ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಜೈನ ಧರ್ಮ ಜಗತ್ತಿಗೆ ಅಹಿಂಸೆ ಮತ್ತು ಶಾಂತಿಯನ್ನು ಬೋಧಿಸಿದ ಧರ್ಮ.ದ್ವೇಷ, ಅಸೂಯೆಯಿಂದ ಯಾರನ್ನು, ಯಾವುದನ್ನು ಗೆಲ್ಲಲ್ಲು ಸಾಧ್ಯವಿಲ್ಲ. ಪ್ರೀತಿಯಿಂದ ಎಲ್ಲರನ್ನು ಗೆಲ್ಲಲ್ಲು ಸಾಧ್ಯ ಎಂಬುದು ಮಹಾವೀರರ ತತ್ವಗಳ ಪ್ರಮುಖ ಅಂಶವಾಗಿದೆ.ಯುದ್ದದಿಂದ ಮನುಕುಲ, ಮನುಷ್ಯತ್ವ ಎರಡು ನಾಶವಾಗಲಿದೆ. ಪಾರಮಾರ್ಥಿಕ ಸುಖಃಕ್ಕಿಂತ,ಅತೀಂಥ್ರೀಯ ಸುಖ: ಮುಖ್ಯ ಎಂಬುದು ಭಗವಾನ್ ಮಹಾವೀರರ ಪ್ರತಿಪಾದನೆಯಾಗಿತ್ತು.ಅಹಿಂಸಾ ಧರ್ಮದ ಪ್ರತಿಪಾದಕರಾಗಿ, ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದರು ಎಂದರು. ತುಮಕೂರು ಜಿಲ್ಲೆಯಲ್ಲಿ ಜೈನ ಧರ್ಮದ ಹಲವಾರು ಕುರುಹುಗಳಿವೆ. ಗುಬ್ಬಿ ತಾಲೂಕಿನಲ್ಲಿ ಹಲವಾರು ಬಸದಿಗಳು, ಚೋಳೂರಿನಲ್ಲಿ ಹಲವಾರು ಬಸದಿಗಳಿವೆ. ತೋವಿನಕೆರೆಯ ಚಂದ್ರಕರವರ್ಣಿ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೆಲಸಗಳನ್ನು ಮಾಡಿದ್ದಾರೆ.ತುಮಕೂರಿನ ಮಂದರಗಿರಿ ಸೇರಿದಂತೆ ಹಲವಾರು ಐತಿಹಾಸಿಕ ಸ್ಥಳಗಳಿವೆ ಎಂದು ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.ಹಿರಿಯ ಸಾಹಿತಿ ಡಾ.ಪದ್ಮಪ್ರಸಾದ್ ಮಾತನಾಡಿ, ಕ್ರಿಶ್ತಪೂರ್ವ 599 ರಲ್ಲಿ ಹುಟ್ಟಿದ ಮಹಾವೀರರು, 30ವರ್ಷಕ್ಕೆ ದೀಕ್ಷೆ ಪಡೆದು, ೧೨ ವರ್ಷಗಳ ಕಾಲ ತಪ್ಪಸ್ಸು ಮಾಡಿ, ಮುಕ್ತಿಯ ಮಾರ್ಗವನ್ನು ಕಂಡುಕೊಂಡರು.ಮಹಾವೀರರ ಅಹಿಂಸೆ,ಸತ್ಯ,ಅಸ್ತೆಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎಂಬ ಐದು ಮುಖ್ಯ ತತ್ವಗಳು, ಆತ್ಮದ ಮುಕ್ತಿಗಾಗಿ ಕಠಿಣ ತಪಸ್ಸು, ಸರಿಯಾದ ನಂಬಿಕೆ, ಜ್ಞಾನ ಮತ್ತು ನಡವಳಿಕೆಗಳು ಬಹಳ ಮಹತ್ವ ಪಡೆದುಕೊಂಡಿವೆ.ಅತ್ಯಂತ ಸರಳವಾಗಿ ಮುಕ್ತಿಯ ಮಾರ್ಗವನ್ನು ಬೋಧಿಸಿದ್ದಾರೆ.ಅವುಗಳ ಬೆಳಕಲ್ಲಿ ಲೋಕದ ಉದ್ವಿಗ್ನತೆಗೆ ಪರಿಹಾರ ಹುಡುಕಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ, ಮೇಲ್ವಿಚಾರಕರಾದ ಸುರೇಶಕುಮಾರ್, ಜೈನ ಶ್ವೇತಂಬರ ಸಂಘದ ಅಧ್ಯಕ್ಷ ಶಾಂತಿಲಾಲ್, ಉಪಾಧ್ಯಕ್ಷ ಸುರೇಂದ್ರ ಷಾ, ಆರ್.ಜೆ.ಸುರೇಶ್ ಕುಮಾರ್, ವಿನಯ್ ಜೈನ್, ಶೀತಲ್, ಮೋಹನ್, ರಂಜನ್, ಪಾರ್ಶ್ವನಾಥ ದಿಗಂಬರ ಸಮಾಜದ ಅಧ್ಯಕ್ಷರಾದ ಬಾಹುಬಲಿ ಬಾಬು, ಆರ್.ಎ. ಸುರೇಶ್, ಮಂಡಿ ನಾಗರಾಜ್, ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.