ಮಹಾವೀರ ಅಹಿಂಸಾ ಧರ್ಮ ಸಾರಿದ ಮಹಾನ್ ನಾಯಕ-ತಹಸೀಲ್ದಾರ್‌ ಬಡಿಗೇರ

KannadaprabhaNewsNetwork | Published : Apr 11, 2025 12:34 AM

ಸಾರಾಂಶ

೨೪ನೇ ತೀರ್ಥಂಕರ ಭಗವಾನ ಮಹಾವೀರರು ಜಗತ್ತಿಗೆ ಅಹಿಂಸಾ ಧರ್ಮ ಸಾರಿದ ಮಹಾನ್ ವ್ಯಕ್ತಿ. ಶಾಂತಿ, ಸೌಹಾರ್ದವನ್ನು ಬೋಧಿಸುವ ಮೂಲಕ ಮಾನವನ ಜೀವನ ಮೌಲ್ಯ ಸುಧಾರಿಸಲು ಮಾರ್ಗದರ್ಶನ ನೀಡಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು.

ಶಿರಹಟ್ಟಿ:೨೪ನೇ ತೀರ್ಥಂಕರ ಭಗವಾನ ಮಹಾವೀರರು ಜಗತ್ತಿಗೆ ಅಹಿಂಸಾ ಧರ್ಮ ಸಾರಿದ ಮಹಾನ್ ವ್ಯಕ್ತಿ. ಶಾಂತಿ, ಸೌಹಾರ್ದವನ್ನು ಬೋಧಿಸುವ ಮೂಲಕ ಮಾನವನ ಜೀವನ ಮೌಲ್ಯ ಸುಧಾರಿಸಲು ಮಾರ್ಗದರ್ಶನ ನೀಡಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಹೇಳಿದರು. ಗುರುವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಲೋಕ ಕಲ್ಯಾಣಕ್ಕಾಗಿ ಕೇವಲ ೩೦ನೇ ವಯಸ್ಸಿನಲ್ಲೇ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಬರೋಬ್ಬರಿ ೧೨ ವರ್ಷಗಳ ಕಾಲ ಉಪವಾಸ ನಡೆಸಿದರು ಎಂದು ಇತಿಹಾಸದಿಂದ ತಿಳಿದುಕೊಳ್ಳಬಹುದು ಎಂದರು.

ಭಗವಾನ ಮಹಾವೀರರು ಉಪದೇಶಿಸಿದ ಅಹಿಂಸೆಯ ತತ್ವಗಳು ಇಂದಿನ ಆಧುನಿಕ ಸಂದರ್ಭದಲ್ಲೂ ಪ್ರಸ್ತುತವಾಗಿವೆ. ಸಮಸ್ತ ಮಾನವ ಕಲ್ಯಾಣಕ್ಕಾಗಿ ಉಪದೇಶ ಮತ್ತು ತತ್ವಗಳನ್ನು ಹೇಳಿದ್ದಾರೆ. ಅವುಗಳನ್ನು ನಾವೆಲ್ಲರೂ ಪಾಲಿಸಬೇಕು. ಇದರಿಂದ ವಿಶ್ವದಲ್ಲಿ ಶಾಂತಿ ನೆಮ್ಮದಿ ಉಂಟಾಗಲಿದ್ದು, ಅವರು ತೋರಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು. ಆಧ್ಯಾತ್ಮಿಕ ವಿಮೋಚನೆಗೆ ಅಹಿಂಸೆ, ಸತ್ಯ ಮತ್ತು ಸನ್ಯಾಸವನ್ನು ಒತ್ತಿ ಹೇಳುವ ಪ್ರಾಚೀನ ಧರ್ಮಗಳಲ್ಲಿ ಜೈನ್ ಧರ್ಮವು ಒಂದಾಗಿದೆ. ಜಗತ್ತಿನ ಯಾವುದೇ ಧರ್ಮದಲ್ಲಿಯೂ ಹಿಂಸೆಯನ್ನು ಪ್ರೋತ್ಸಾಹಿಸಿಲ್ಲ. ಹಿಂಸೆಯ ಬೋಧನೆ ಸಹ ಕಂಡುಬರುವುದಿಲ್ಲ. ಆದರೆ, ಇಂದಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಅಹಿತಕರ ಘಟನೆಗಳಂತಹ ಹೀನಾಯ ಕೃತ್ಯಗಳು ಕೆಲವೆಡೆ ಕಂಡು ಬರುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು. ಸತ್ಯ, ಅಹಿಂಸೆ, ಅಪರಿಗ್ರಹ, ಅಚೌರ್ಯ ಮತ್ತು ಬ್ರಹ್ಮಚರ್ಯಗಳೆಂಬ ಪಂಚವೃತಗಳನ್ನಾಗಿ ಮಹಾವೀರ ಬೋಧಿಸಿದ್ದು ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಸಾರಿದ್ದಾರೆ. ಜೈನ್ ಧರ್ಮದ ತತ್ವ ಸಿದ್ಧಾಂತಗಳು ಜಗತ್ತಿನ ಎಲ್ಲ ಧರ್ಮಗಳಿಗಿಂತಲೂ ಅತ್ಯಂತ ಕಠಿಣವೆನಿಸುತ್ತಿದ್ದರೂ ಸಹ ಎಲ್ಲರಿಗೂ ನಿಕಟವಾಗುವಂತೆ ತಿಳಿಸಿರುವುದು ಜೈನ್ ಧರ್ಮದ ವಿಶೇಷ ಎಂದರು. ಜೈನ ಸಮಾಜದ ತಾಲೂಕು ಅಧ್ಯಕ್ಷ ಪದ್ಮಣ್ಣ ಹೊಳಗಿ ಮಾತನಾಡಿ, ಜೈನ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಅದರ ತತ್ವ, ಸಿದ್ದಾಂತಗಳ ಪ್ರಖರತೆಯು ಬೆಳಗಿದ್ದು ಭಗವಾನ್ ಮಹಾವೀರರ ಕಾಲದಲ್ಲಿಯೇ. ಮಹಾವೀರರು ಚಿಕ್ಕಂದಿನಲ್ಲಿಯೇ ಅನೇಕ ಲೀಲೆಗಳನ್ನು ತೋರಿಸಿದರು ಎಂದರು. ಜೈನ ಧರ್ಮದ ಮೂಲ ಆಚಾರ ವಿಚಾರಗಳಲ್ಲಿ ಇಂದು ಕೂಡ ಯಾವುದೇ ಬದಲಾವಣೆಯಾಗಿಲ್ಲ. ಬದುಕುವ ಹಕ್ಕು ಎಲ್ಲ ಜೀವಿಗಳಿಗೂ ಸಮಾನವಾಗಿ ಇದೆ. ತಾವೂ ಬದುಕಿ ಇತರ ಜೀವಿಗಳಿಗೂ ಬದುಕಲು ಸಮಾನ ಅವಕಾಶ ನೀಡುವ ಜೈನ್ ಧರ್ಮ ಶ್ರೇಷ್ಠ ಧರ್ಮವಾಗಿದೆ. ಭಗವಾನ ಮಹಾವೀರ ಬೋಧಿಸಿದ ತತ್ವಗಳು ವಿಶ್ವಮಾನ್ಯವಾಗಿದ್ದು, ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದು ತಿಳಿಸಿದರು.ಭಗವಾನ ಮಹಾವೀರರು ಬೋಧಿಸಿದ ತತ್ವಗಳನ್ನು ನಾವು ನಿತ್ಯವೂ ನೀವನದಲ್ಲಿ ಅನುಷ್ಠಾನ ಮಾಡಿ ಧರ್ಮ ಮಾರ್ಗದಲ್ಲಿ ನಡೆದರೆ ಪಾಪ ಕರ್ಮಗಳ ಕ್ಷಮವಾಗಿ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ. ತನ್ನ ಆತ್ಮ ಕಲ್ಯಾಣದ ಜತೆಗೆ ಇತರ ಸಕಲ ಜೀವಿಗಳ ಕಲ್ಯಾಣದೊಂದಿಗೆ ಲೋಕ ಕಲ್ಯಾಣ ಮಾಡಲು ಜೈನ್ ಧರ್ಮದಲ್ಲಿ ಅವಕಾಶವಿದೆ ಎಂದು ಸಲಹೆ ನೀಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ, ಮಾಧ್ಯಮಿಕ ಶಾಲಾ ನೌಕರ ಅಂಘದ ಜಿಲ್ಲಾ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿದರು. ಮಹಾವೀರ ಮಂಟಗಣಿ, ವಿಜಯಕುಮಾರ ಅಣ್ಣಿಗೇರಿ, ಗುಡದೀರಪ್ಪ ಹೌಂಶಿ, ರಾಮಣ್ಣ ಬೆಂತೂರ, ಸುರೇಶ ಹೌಂಶಿ, ಸಂತೋಷ ಮಂಟಗಣಿ, ಮಹಾವೀರ ಹೊಸೂರ, ಜೆ.ಪಿ. ಪೂಜಾರ, ಸಂತೋಷ ಅಸ್ಕಿ, ವಿನೋದ ಪಾಟೀಲ, ರಾಧಾ ದೇಸಾಯಿಪಟ್ಟಿ ಇತರರು ಇದ್ದರು.

Share this article